ಮಾಗಡಿ (ಫೆ.17):  ಕಾಳಾರಿ ಕಾವಾಲ್ ಗ್ರಾಪಂ ಪಂಚಾಯಿತಿ ಜೆಡಿಎಸ್‌ ವಶವಾಗಿದೆ ಎಂಬ ಕಾರಣದಿಂದ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಹಿಂಬಾಲಕರು ದ್ವೇಷದಿಂದ ಬೋರ್‌ವೆಲ್ ನಾಶಪಡಿ​ಸಿ​ದ್ದಾರೆ ಎಂದು ಎಂದು ಶಾಸಕ ಎ.ಮಂಜುನಾಥ್‌ ಆರೋಪಿಸಿದರು.

ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಸೋತ್ತಿದ್ದೇವೆ ಎಂಬ ಕಾರಣಕ್ಕೆ ಮಾಜಿ ಶಾಸಕ ಬಾಲಕೃಷ್ಣ ಹಿಂಬಾಲಕರು ಜೆಡಿಎಸ್‌ ತಾಲೂಕು ಅಧ್ಯಕ್ಷ ಪೊಲೀಸ್‌ ರಾಮಣ್ಣ ಮತ್ತು ಮುಖಂಡ ರಾಮಕೃಷ್ಣಯ್ಯ ಎಂಬುವವರ ಬೋರ್‌ವೆಲ್‌ ಪೈಪ್‌ ಕೊಯ್ದು, ಮೋಟಾರ್‌ ಸಮೇತ ಬೋರ್‌ವೆಲ್‌ ಒಳಗೆ ಕಲ್ಲು ತುಂಬಿದ್ದಾರೆ ಎಂದು ದೂರಿ​ದರು.

ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಆಂಜನೇಯ್ಯ ಸ್ವಾಮಿ ದೇವಸ್ಥಾನದ ಪೂಜೆ ಸಮಯದಲ್ಲಿ ಗ್ರಾಮಸ್ಥರೆಲ್ಲರು ಒಂದೆಡೆ ಇರುವಾಗ ಫೆ. 13ರ ರಾತ್ರಿ ಬೋರ್‌ವೆಲ್‌ ನಾಶ ಮಾಡಿದ್ದಾರೆ. ಕಾಳಾರಿ ಕಾವಲ್ ಅಧ್ಯಕ್ಷ ಚುನಾವಣೆ ನಡೆದು ಒಂದೇ ದಿನಕ್ಕೆ ಈ ರೀತಿ ದ್ವೇಷದ ರಾಜಕಾರಣ ಮಾಡಿದ್ದು, ಇದರಿಂದ ನಮ್ಮ ಕಾರ್ಯಕರ್ತರು ಹೆದರುವುದಿಲ್ಲ ಎಂದರು.

ನನ್ನ ಇನ್ನೊಂದು ಮುಖ ನೋಡಿಲ್ಲ:  ನಾವು ಕೈಗೆ ಬಳೆ ತೊಟ್ಟಿಕೊಂಡಿದ್ದೇವೆಂದು ಮಾಜಿ ಶಾಸಕ ಬಾಲಕೃಷ್ಣ ಅಂದುಕೊಂಡಿರಬೇಕು. ಅವರ ಪಟಾಲಂಗಳು ಹೇಗೆ ಗಲಾಟೆ ಮಾಡುತ್ತಾರೆ. ಅದೇ ರೀತಿ ನಮ್ಮ ಹತ್ತಿರವು ಅವರನ್ನು ಮೀರಿಸುವಂತ ನಾಯಕರುಗಳಿದ್ದಾರೆ. ನಾನು ಶಾಸಕನಾಗಿ ಎರಡೂವರೆ ವರ್ಷದಲ್ಲಿ ಯಾವುದೇ ದ್ವೇಷದ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಪದೇ ಪದೇ ನಮ್ಮ ಕಾರ್ಯಕರ್ತರ ಮೇಲೆ ಇಲ್ಲ ಸಲ್ಲದ ಕೇಸುಳನ್ನು ಹಾಕಲು ಹೊರಟ್ಟಿದ್ದಾರೆ ಎಂದು ದೂರಿ​ದರು.

ಡಿಕೆಶಿ ಪರಮಾಪ್ತ ಸೇರಿ ಹಲವರು ಪಕ್ಷಾಂತರ

ಸುದ್ದಿ​ಗೋ​ಷ್ಠಿ​ಯಲ್ಲಿ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಜೆಡಿಎಸ್‌ ತಾಲೂ​ಕು ಅಧ್ಯಕ್ಷ ಪೊಲೀಸ್‌ ರಾಮಣ್ಣ , ಮಹಿಳಾ ಘಟಕದ ಅಧ್ಯಕ್ಷೆ ಶೈಲಜ, ಕಾಳಾರಿ ಕಾವಲ್ ಗ್ರಾಪಂ ಅಧ್ಯಕ್ಷ ಸುರೇಶ್‌, ಸದಸ್ಯ ಶ್ರೀಪತಿಹಳ್ಳಿ ಕೃಷ್ಣ, ಮುಖಂಡರಾದ ಬೋರ್‌ ವೆಲ್‌ ನರಸಿಂಹಯ್ಯ, ಕಲ್ಯಾ ಚಿಕ್ಕಣ್ಣ ಇದ್ದರು.

ಬಾಲಕೃಷ್ಣರವರು ಕಳೆದ 20 ವರ್ಷಗಳಿಂದಲೂ ಇದೇ ರೀತಿಯ ಕೆಲ​ವನ್ನೇ ತಮ್ಮ ಪಟಾಲಂಗಳಿಂದ ಮಾಡಿಸುತ್ತಿದ್ದಾರೆ. ಈ ಬಗ್ಗೆ ಕುದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾ​ರಿ​ಗಳ ಗಮನಕ್ಕೂ ತರಲಾಗುವುದು. ಸಂಶಯ ಇರುವವರನ್ನು ಪೊಲೀಸರು ವಿಚಾರಣೆ ಮಾಡಿ ಕೂಡಲೇ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕು.

ಎ.ಮಂಜುನಾಥ್‌, ಶಾಸಕ