ಚಿಕ್ಕಬಳ್ಳಾಪುರ (ಆ.14) :  ಜಿಲ್ಲೆಗೆ ಆಗಾಗ ಭೇಟಿ ನೀಡುತ್ತಿದ್ದ ರಾಜ್ಯ ಬಿಜೆಪಿ ನಾಯಕರ ಜೊತೆಗೆ ತೆರೆಮೆರೆಯಲ್ಲಿ ಕಾಣಿಸಿಕೊಂಡು ರಾಜಕೀಯವಾಗಿ ಸಾಕಷ್ಟುಚರ್ಚೆಗೆ ಗ್ರಾಸವಾಗಿದ್ದ ಶಿಡ್ಲಘಟ್ಟವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ರಾಜಣ್ಣ ಶೀಘ್ರದಲ್ಲಿಯೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ಅವಕಾಶ ಸಿಗದೇ ರಾಜಕೀಯವಾಗಿ ಹಲವು ತಿಂಗಳಿಂದ ತಟಸ್ಥವಾಗಿದ್ದರು. ರಾಜಣ್ಣನ ಬೆಂಬಲಿಗರು ದಿಕ್ಕು ಕಾಣದೇ ಕೆಲವರು ಮಾತೃ ಪಕ್ಷ ಜೆಡಿಎಸ್‌ನಲ್ಲಿ ಗುರುತಿಸಿಕೊಂಡರೆ ಮತ್ತೆ ಕೆಲವರು ಕಾಂಗ್ರೆಸ್‌ ಸೇರಿದರು.

ಡಾ.ಸುಧಾಕರ್‌ ಜತೆ ಮಾತುಕತೆ

ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಹೊರಟಿರುವ ಮಾಜಿ ಶಾಸಕ ಎಂ.ರಾಜಣ್ಣ, ಸದ್ಯದಲೇ ಎದುರಾಗಲಿರುವ ಸ್ಥಳೀಯ ಗ್ರಾಪಂಗಳಲ್ಲಿ ಹಾಗೂ ಆರೇಳು ತಿಂಗಳಿಗೆ ನಡೆಯಲಿರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕೊನೆಗೂ ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿದ್ದಾರೆ. ಮೊದಲ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌ ಜೊತೆಗೆ ಮಾತುಕತೆ ನಡೆಸಿರುವ ರಾಜಣ್ಣ ಬಿಜೆಪಿ ಸೇರುವ ದೃಢ ನಿರ್ಧಾರ ಕೈಗೊಂಡಿದ್ದಾರೆ.

ಗೃಹ ಸಚಿವ ಬೊಮ್ಮಾಯಿ ರಾಜೀನಾಮೆಗೆ ಆಗ್ರಹ...

ಇತ್ತೀಚೆಗೆ ಶಿಡ್ಲಘಟ್ಟಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ರನ್ನು ರಾಜಣ್ಣ ಭೇಟಿ ನೀಡಿದ್ದರು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯವಾಗಿ ಕಂಗಾಲಾಗಿರುವ ರಾಜಣ್ಣಗೆ ಬಿಜೆಪಿಗೆ ಸೇರಲು ತುದಿಗಾಲಲ್ಲಿ ನಿಂತಿದ್ದು ಇದಕ್ಕೆ ಸಚಿವ ಸುಧಾಕರ್‌ ಸಾರಥ್ಯ ವಹಿಸಿದ್ದಾರೆ.

ಕೈ ತಪ್ಪಿದ ಜೆಡಿಎಸ್‌ ಟಿಕೆಟ್‌

ರಾಜಣ್ಣ ಶಿಡ್ಲಘಟ್ಟಕ್ಷೇತ್ರದಲ್ಲಿ 2013 ರ ಚುನಾವಣೆಯಲ್ಲಿ 77,931 ಮತ ಪಡೆದು ಕ್ಷೇತ್ರದ ಕಾಂಗ್ರೆಸ್‌ ಹಿರಿಯ ಶಾಸಕರಾಗಿದ್ದ ಮಾಜಿ ಸಚಿವ ವಿ.ಮುನಿಯಪ್ಪರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಆದರೆ 2018 ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್‌ ಬಿ.ಫಾರಂ ವಿಚಾರದಲ್ಲಿ ರಾಜಣ್ಣ ಹಾಗೂ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದ ಮೇಲೂರು ರವಿಕುಮಾರ್‌ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕೊನೆ ಗಳಿಗೆಯಲ್ಲಿ ಬಿ.ಫಾರಂ ಕಾದಾಟ ರೋಚಕ ತಿರುವು ಪಡೆದು ಜೆಡಿಎಸ್‌ ವರಿಷ್ಠರು ಮೇಲೂರು ರವಿಕುಮಾರ್‌ಗೆ ಮಣೆ ಹಾಕಿದ್ದರಿಂದ ರಾಜಣ್ಣಗೆ ಬಿ.ಫಾರಂ ತಪ್ಪಿತ್ತು.

ಸಿದ್ದರಾಮಯ್ಯ ಭಯೋತ್ಪಾದಕರನ್ನು ಬೆಂಬಲಿಸುತ್ತಾರಾ?: ಕಟೀಲ್‌...

ಮತದಾರ ಕೈಹಿಡಿಯಲಿಲ್ಲ

ಬಳಿಕ ಸ್ವತಂತ್ರವಾಗಿ ಕಣಕ್ಕೆ ಇಳಿದಿದ್ದ ರಾಜಣ್ಣಗೆ ಮತದಾರರು ಕೈ ಹಿಡಿಯಲಿಲ್ಲ. ಚುನಾವಣೆಯಲ್ಲಿ ಬರೀ 8,593 ಮತ ಪಡೆದಿದ್ದರು. ಪ್ರತಿ ಸ್ಪರ್ಧಿ ರವಿಕುಮಾರ್‌ಗೆ 66,531 ಮತ ಬಂದವು. ಇಬ್ಬರ ಜಗಳದಲ್ಲಿ ಕಾಂಗ್ರೆಸ್‌ವಿ.ಮುನಿಯಪ್ಪ 76,240 ಮತ ಪಡೆದು ಶಾಸಕರಾದರು. 2018 ರ ಚುನಾವಣೆಯಲ್ಲಿ ಸೋತ ನಂತರ ರಾಜಣ್ಣ ರಾಜಕೀಯವಾಗಿ ತಟಸ್ಥವಾಗಿದ್ದರು. ಈಗ ಕಮಲ ಪಾಳೆಯಕ್ಕೆ ಬರಲು ವೇದಿಕೆ ಸಿದ್ದಪಡಿಸಿಕೊಂಡಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಪ್ರಾಬಲ್ಯ ಇರುವ ಶಿಡ್ಲಘಟ್ಟದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ರಾಜಣ್ಣ ಕಮಲ ಪಕ್ಷ ಆರಿಸಿಕೊಂಡಿದ್ದ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಾಕಷ್ಟುಕುತೂಹಲ ಕೆರಳಿಸಿದೆ.

ಬಿಜೆಪಿ ಸೇರುವುದು ಖಚಿತ. ಆದರೆ ಕೊರೊನಾ ಲಾಕ್‌ಡೌನ್‌ ಮತ್ತಿತರ ಕಾರಣಗಳಿಗೆ ಜನ ಸೇರಿಸಲು ಅವಕಾಶ ಇಲ್ಲದ ಕಾರಣ ಪಕ್ಷ ಸೇರ್ಪಡೆ ವಿಳಂಬ ಆಗಿದೆ. ವಾರದಲ್ಲಿ ಸೇರ್ಪಡೆ ಕಾರ್ಯಕ್ರಮದ ಮುಹೂರ್ತ ನಿಗದಿಯಾಗಲಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌ ಜೊತೆಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ನನ್ನೊಂದಿಗೆ ಹಲವು ಮುಖಂಡರು ಸೇರ್ಪಡೆಯಾಗಲಿದ್ದಾರೆ.

ಎಂ.ರಾಜಣ್ಣ, ಮಾಜಿ ಶಾಸಕ, ಶಿಡ್ಲಘಟ್ಟ.

ವರದಿ :ಕಾಗತಿ ನಾಗರಾಜಪ್ಪ.