* ಐದಾರು ಅಭ್ಯರ್ಥಿ ಬಿಟ್ಟು ಉಳಿದೆಲ್ಲ ವಾರ್ಡ್‌ನಲ್ಲಿ ಹೊಸಬರಿಗೆ ಅವಕಾಶ* ಕಳೆದ ಬಾರಿ ಟಿಕೆಟ್‌ ತಪ್ಪಿಸಿಕೊಂಡವರೂ ಈಗಿನ ಹೊಸಮುಖ* ಪಕ್ಷದಲ್ಲಿ ನಿರಂತರವಾಗಿ ಕೆಲಸ ಮಾಡಿಕೊಂಡಿದ್ದವರಿಗೆ ಟಿಕೆಟ್‌ 

ಮಯೂರ ಹೆಗಡೆ

ಹುಬ್ಬಳ್ಳಿ(ಜು.11): ಹುಬ್ಬಳ್ಳಿ-ಧಾರವಾಡಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಶೇ. 90ರಷ್ಟು ಹೊಸ ಮುಖಗಳನ್ನೆ ಕಣಕ್ಕಿಳಿಸಲು ಜೆಡಿಎಸ್‌ ಮುಂದಾಗಿದೆ. ಈಗಾಗಲೆ ಸುಮಾರು 20 ಹೊಸ ಅಭ್ಯರ್ಥಿಗಳಿಗೆ ಚುನಾವಣೆ ಸಿದ್ಧತೆ ಮಾಡಿಕೊಳ್ಳುವಂತೆಯೂ ತಿಳಿಸಿದೆ.

ಹೊಸಮುಖಗಳು ಎಂದರೆ ಜೆಡಿಎಸ್‌ನಲ್ಲಿ ಈವರೆಗೆ ದುಡಿದು ಟಿಕೆಟ್‌ ವಂಚಿತರಾದವರು, ಪಕ್ಷದಲ್ಲಿ ನಿರಂತರವಾಗಿ ಕೆಲಸ ಮಾಡಿಕೊಂಡಿದ್ದವರಿಗೆ ಟಿಕೆಟ್‌ ನೀಡಲಿದ್ದೇವೆ ಎಂದು ಮುಖಂಡರು ಹೇಳಿದ್ದಾರೆ. ಹಾಗೆ ನೋಡಿದರೆ ಪಾಲಿಕೆ ಚುನಾವಣೆ ಎದುರಿಸಲು ಜೆಡಿಎಸ್‌ಗೆ ಈ ಬಾರಿ ಹೊಸ ಮುಖಗಳೇ ಆಧಾರವಾಗಿವೆ. ಹೀಗಾಗಿ ಈ ಪಕ್ಷದಿಂದ ಗರಿಷ್ಠ ಸಂಖ್ಯೆಯಲ್ಲಿ ಹೊಸ ಮುಖಗಳು ಚುನಾವಣಾ ಕಣಕ್ಕಿಳಿವ ಸಾಧ್ಯತೆ ಇದೆ.

ವಾರ್ಡ್‌ ನಂ. 23ರಿಂದ ಕರಿಯಪ್ಪ ಎಂ. ಸುಣಗಾರ ಸ್ಪರ್ಧಿಸಲು ಮುಂದಾಗಿದ್ದಾರೆ. ಯಾಲಕ್ಕಿ ಶೆಟ್ಟರ್‌ ಕಾಲನಿ ಸೇರಿದಂತೆ ಇತರೆ ಪ್ರದೇಶಗಳನ್ನು ಈ ವಾರ್ಡ್‌ ಒಳಗೊಂಡಿದ್ದು, ಹಿಂದುಳಿದ ವರ್ಗ ಎ ಮೀಸಲಾತಿ ಇದೆ. ಹುಧಾ ಪಶ್ಚಿಮ-74 ಕ್ಷೇತ್ರದ ಜನರಲ್‌ ಸೆಕ್ರೆಟರಿ ಆಗಿ ಕೆಲಸ ಮಾಡಿದ್ದ ಕರಿಯಪ್ಪ ಕಳೆದ ಹಲವು ವರ್ಷದಿಂದ ಸಾಮಾಜಿಕ ಕಾರ್ಯದಲ್ಲಿದ್ದು, ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ವಾರ್ಡ್‌ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಯತ್ನಿಸುವುದು ನನ್ನ ಉದ್ದೇಶ ಎಂದರು.

ಕಾಂಗ್ರೆಸ್‌ನಲ್ಲೂ ಈಗ ಹೊಸಬರದ್ದೇ ಹವಾ..!

ನೂರಾನಿ ಪ್ಲಾಟ್‌, ಅಜ್ಮೀರ ನಗರ, ಶರಾವತಿ ನಗರ ಸೇರಿ ಇತರೆ ಪ್ರದೇಶ ಒಳಗೊಂಡು ಹೊಸದಾಗಿ ರಚನೆಯಾದ ವಾರ್ಡ್‌ 75ರಿಂದ ಶೋಭಾ ಕೆ. ಪಾಲವಾಯಿ ಸ್ಪರ್ಧಿಸಲು ಮುಂದಾಗಿದ್ದಾರೆ. ಕಳೆದ 20 ವರ್ಷದಿಂದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದೇನೆ. ಪ್ರಾದೇಶಿಕ ಪಕ್ಷದಿಂದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದು ಅದಕ್ಕಾಗಿಯೆ ಜೆಡಿಎಸ್‌ನಿಂದ ಚುನಾವಣೆ ಎದುರಿಸಲು ಮುಂದಾಗಿದ್ದೇನೆ. ಸ್ಥಳೀಯರು ಕೂಡ ಪ್ರೋತ್ಸಾಹ ನೀಡಿದ್ದಾರೆ ಎಂದರು.

ಹುಧಾ ಪಶ್ವಿಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಶಾಂತವೀರ ಬೆಟಗೇರಿ ಅವರು ಕನ್ಸಲ್ಟಿಂಗ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ 18 ನೇ ವಾರ್ಡ್‌ನಿಂದ ಇವರು ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಕಲ್ಯಾಣನಗರ, ನವೋದಯ ನಗರ, ಚನ್ನಬಸವೇಶ್ವರ ನಗರ, ನಿಸರ್ಗ ಲೇಔಟ್‌, ಗಣೇಶ ನಗರ ಒಳಗೊಂಡ ವಾರ್ಡ್‌ ಇದು. ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು, ಇದೆ ಆಧಾರದಲ್ಲಿ ಪಕ್ಷ ನಮಗೆ ಟಿಕೆಟ್‌ ನೀಡುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 13 ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಆರ್‌. ಲಕ್ಷ್ಮಣ ಅವರು ಸಾಮಾನ್ಯ ವರ್ಗಕ್ಕೆ ಮೀಸಲಾದ 35ನೇ ವಾರ್ಡ್‌ನಿಂದ ನಿಲ್ಲಲು ಮುಂದಾಗಿದ್ದಾರೆ. ಬೈರಿದೇವರಕೊಪ್ಪ , ಚೈತನ್ಯ ನಗರ, ವಡ್ಡರ ಓಣಿ, ಕಂಬಾರ ಓಣಿ, ಅಗಸಿ ಓಣಿ, ಹುಡೇದ ಓಣಿ, ಕಂಬಾರ ಓಣಿ, ಅಂಬಿಗೇರ ಓಣಿ ಸೇರಿರುವ ವಾರ್ಡ್‌ ಇದು. ತಮ್ಮದೆ ಆದ ಸಂಸ್ಕಾರ ಫೌಂಡೕಶನ್‌ ಕಟ್ಟಿಕೊಂಡು ಅದರ ಮೂಲಕ ಸಾಕಷ್ಟು ಜನಪರ ಕಾರ್ಯದಲ್ಲಿ ತೊಡಗಿದವರು. ಈಗ ಜೆಡಿಎಸ್‌ನಿಂದ ಚುನಾವಣೆ ರಂಗಪ್ರವೇಶಕ್ಕೆ ಸಿದ್ಧರಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ಸ್ಪರ್ಧೆಗೆ ಆಪ್‌ ದಿಲ್ಲಿ ತಂತ್ರ..!

2014ರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿಸಿಕೊಂಡಿದ್ದ ಶಂಕರ ಪವಾರ್‌ ಈ ಬಾರಿ 55 ವಾರ್ಡ್‌ನಿಂದ ಸ್ಪರ್ಧಿಸಲು ಜೆಡಿಎಸ್‌ ಬಿ ಫಾರಂ ನೀಡುವ ವಿಶ್ವಾಸದಲ್ಲಿದ್ದಾರೆ. ಅರವಿಂದ ನಗರ, ದಾಳಿಂಬರಿ ಪೇಟ, ಬ್ರಾಹ್ಮಣರ ಓಣಿ, ದಿಡ್ಡಿ ಓಣಿ ಒಳಗೊಂಡ ವಾರ್ಡ್‌ ಇದಾಗಿದೆ. ತೆಂಗಿನಕಾಯಿ ವಿತರಕ, ರಿಯಲ್‌ ಎಸ್ಟೆಟ್‌ನಲ್ಲಿರುವ ಶಂಕರ ಜೆಡಿಎಸ್‌ ಹಿಂದುಳಿದ ವರ್ಗದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದವರು. ತಮಗೆ ಕಾರ್ಪೋರೇಟರ್‌ ಆಗಲು ವಾರ್ಡ್‌ನವರ ಬೆಂಬಲವಿದೆ. ಹೆಚ್ಚಿನದಾಗಿರುವ ಎಸ್‌ಎಸ್‌ಕೆ ಸಮುದಾಯ ಸ್ಪರ್ಧಿಸಲು ಒತ್ತಾಯಿಸಿದ್ದಾರೆ ಎಂದರು.

ಅಸಾರ ಓಣಿ, ಜನತಾ ಪ್ಲಾಟ್‌, ಸೈದಾಪುರ, ನಿತಿನ್‌ ಸೊಸೈಟಿ, ಕಮಲಾಪುರ ಅರ್ಧಭಾಗ ಸೇರಿರುವ 3ನೇ ವಾರ್ಡ್‌ ಈ ಬಾರಿ ಹಿಂದುಳಿದ ವರ್ಗ ಎ ಮೀಸಲಾಗಿದೆ. ಶಾಹಿದ್‌ಅಹ್ಮದ್‌ ನದಾಫ್‌ ಇಲ್ಲಿ ಜೆಡಿಎಸ್‌ನಿಂದ ಮೊದಲ ಬಾರಿ ಚುನಾವಣೆ ಸ್ಪರ್ಧಿಸಲು ಮುಂದಾಗಿದ್ದಾರೆ. ಗ್ರಾಮೀಣ ಯೂತ್‌ ಅಧ್ಯಕ್ಷರಾಗಿದ್ದ ಇವರು ಕೋವಿಡ್‌ 1ನೇ ಅಲೆಯಲ್ಲಿ 550 ಬಡಜನರಿಗೆ ಫುಡ್‌ ವಿತರಣೆ ಸೇರಿ ಇತರೆ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ.

ಪಕ್ಷದಿಂದ ಐದಾರು ಸ್ಪರ್ಧಿಗಳನ್ನು ಬಿಟ್ಟರೆ ಉಳಿದೆಲ್ಲವರೂ ಹೊಸಬರೆ ಆಗಿರಲಿದ್ದಾರೆ. ಹೊಸಬರಿಗೆ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಾಲಿಕೆ ಚುನಾವಣೆ ಸಂಬಂಧ ಮುಂದಿನ ವಾರ ಸಭೆ ನಡೆಸುತ್ತಿದ್ದೇವೆ ಎಂದು ಮಾಜಿ ಶಾಸಕ, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ತಿಳಿಸಿದ್ದಾರೆ. 

ಈಗಾಗಲೆ ಸಾಕಷ್ಟು ಹೊಸಬರು ಪಕ್ಷದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳ ನೇಮಕ ಆಗಲಿದ್ದು, ಚುನಾವಣೆ ಸಂಬಂಧ ಹೆಚ್ಚಿನ ಕ್ರಿಯಾಶೀಲವಾಗಿ ಮುಂದುವರಿಯಲಿದ್ದೇವೆ ಎಂದು ಜೆಡಿಎಸ್‌ ಮುಖಂಡ ಗುರುರಾಜ ಹುಣಸಿಮರದ ಹೇಳಿದ್ದಾರೆ.