ಹುಬ್ಬಳ್ಳಿ-ಧಾರವಾಡ ಪಾಲಿಕೆ ಸ್ಪರ್ಧೆಗೆ ಆಪ್ ದಿಲ್ಲಿ ತಂತ್ರ..!
* ರಣಕಣ-82 ವಾರ್ಡ್‌ಗಳಲ್ಲೂ ಕಣಕ್ಕಿಳಿಯಲಿರುವ ಪಕ್ಷ
* ಚುನಾವಣೆ ತಯಾರಿಗೆ ದೆಹಲಿ ತಂಡ ಆಗಮನ
* ವಿಶ್ವದರ್ಜೆ ಮಹಾನಗರದ ಭರವಸೆ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಜು.04): ದೆಹಲಿಯಲ್ಲಿ ವಿನೂತನ ಪ್ರಯತ್ನ ಮಾಡಿ ಅಲ್ಲಿನ ವಿಧಾನಸಭಾ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಗದ್ದು ಗಿಡಿದಿರುವ ‘ಆಮ್ ಆದ್ಮಿ ಪಕ್ಷ’ ಇದೀಗ ‘ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ’ಯತ್ತ ಮುಖಮಾಡಿದೆ! ಇದೇ ಮೊದಲ ಬಾರಿಗೆ ಇಲ್ಲಿನ ಪಾಲಿಕೆ ಚುನಾವಣೆಯಲ್ಲಿ ಆಪ್ ಪೂರ್ಣ ಪ್ರಮಾಣದಲ್ಲಿ ಅಂದರೆ 82 ವಾರ್ಡ್‌ಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇದಕ್ಕಾಗಿ ಕಳೆದ ಒಂದು ವರ್ಷದಿಂದಲೇ ಸಣ್ಣದಾಗಿ ಪಕ್ಷ ಸಂಘಟನೆ ಮಾಡಿಕೊಂಡೂ ಬಂದಿದೆ. ಇದೀಗ ಇಲ್ಲಿ ಚುನಾವಣಾ ತಂತ್ರಗಾರಿಕೆ ಹೆಣೆಯಲು ದೆಹಲಿಯಿಂದಲೇ ತಂಡ ಬಂದಿರುವುದು ವಿಶೇಷವಾಗಿದೆ.
ಕಳೆದ ಆರೇಳು ತಿಂಗಳಿಂದ ನಗರದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಆಪ್ ಕಾರ್ಯಕರ್ತರು, ಅಭ್ಯರ್ಥಿಗಳನ್ನು ಗುರುತಿಸಿಟ್ಟುಕೊಂಡಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ. ಎಂಜಿನಿಯರ್, ಎಂಬಿಎ, ಸಾಫ್ಟ್‌ವೇರ್ ಎಂಜಿನಿಯರ್‌ಗಳು ಹೀಗೆ ವಿವಿಧ ರಂಗಗಳಲ್ಲಿ ಹೆಸರು ಮಾಡಿದವರು, ಸಾಮಾಜಿಕ ಸೇವೆಯಲ್ಲಿ ತೊಡಗಿರುವವರು ಈ ಸಲ ಆಪ್ ಪಕ್ಷದ ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ. ಅಭ್ಯರ್ಥಿಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಕರೆದಿತ್ತು. 200 ಜನ ಸಮಾಜ ಸೇವಕರು, ವಿವಿಧ ಹುದ್ದೆಗಳಲ್ಲಿರುವವರು ಅರ್ಜಿ ಸಲ್ಲಿಸಿದ್ದಾರೆ.
ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಸಿದ್ಧವಾದ ಓವೈಸಿ ಪಕ್ಷ..!
ದೆಹಲಿಯ ತಂಡ:
ಅಭ್ಯರ್ಥಿಗಳ ಆಯ್ಕೆ ಹಾಗೂ ವಾರ್ಡ್‌ವಾರು ಸಮೀಕ್ಷೆ, ಯಾವ ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಉತ್ತಮ ಎಂಬುದನ್ನು ಪರಿಶೀಲಿಸಲು, ಚುನಾವಣೆ ತಂತ್ರಗಾರಿಕೆಗೆ ದೆಹಲಿಯಿಂದಲೇ ತಂಡ ಆಗಮಿಸಿದೆ. ಈ ತಂಡದ ಸದಸ್ಯರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ. ಆಕಾಂಕ್ಷಿಗಳು ಸಮಾಜ ಸೇವೆ ಸಲ್ಲಿಸಿದ ಸ್ಥಳ ಅಥವಾ ವಾರ್ಡ್‌ಗಳಿಗೆ ತೆರಳಿ ಜನಬೆಂಬಲ ಹೇಗಿದೆ ಎಂಬುದನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಿದ್ದಾರೆ.
ವಿಶ್ವದರ್ಜೆ ಮಹಾನಗರದ ಭರವಸೆ:
ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ವಿಶ್ವದರ್ಜೆ ಮಟ್ಟಕ್ಕೆ ಮಹಾನಗರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿರುವ ಆಪ್, ಇಲ್ಲಿನ ಜನತೆಗೆ ವಿದ್ಯುತ್, ರಸ್ತೆ, ಚರಂಡಿ, ನೀರು ಸೇರಿದಂತೆ ಸಕಲ ಮೂಲಸೌಲಭ್ಯ ಕಲ್ಪಿಸುವ ಘೋಷಣೆ ಮಾಡಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ, ಸಮಾಜ ಸೇವೆಯೇ ಮುಖ್ಯ ಉದ್ದೇಶ. ಇದನ್ನು ಇಟ್ಟುಕೊಂಡೇ ನಾವು ಚುನಾವಣೆ ಗೆಲ್ಲಲು ಹೊರಟ್ಟಿದ್ದೇವೆ. ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಘೋಷಣೆಯಾಗುತ್ತಿದ್ದಂತೆ ಪ್ರಚಾರಕ್ಕೆ ಚಾಲನೆ ನೀಡುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಆಮ್ ಆದ್ಮಿ ಪಕ್ಷ ಪರ್ಯಾಯ ಎಂಬುದು ಈಗಾಗಲೇ ದೆಹಲಿಯಲ್ಲಿ ಸಾಬೀತಾಗಿದೆ. ಇಲ್ಲೂ ಪಾಲಿಕೆಯಲ್ಲಿ ಬದಲಾವಣೆಯಾಗುವುದು ಖಚಿತ. ನಾವು ಈ ಸಲ ಗೆಲ್ಲುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ತಿಳಿಸಿದ್ದಾರೆ.