ಶ್ರೀರಂಗಪಟ್ಟಣ(ಜು.07): ಪಿಕಾರ್ಡ್‌ ಬ್ಯಾಂಕ್‌ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಗಿ ಕಾರ್ಯಕರ್ತರು ಕೈಕೈ ಮಿಲಾಯಿಸಿ ಜಗಳ ನಡೆಸಿದರು.

ಪಟ್ಟಣದ ಬಸ್‌ ನಿಲ್ದಾಣದ ಸಮೀಪ ಸೋಮವಾರ ಪಿಕಾರ್ಡ್‌ ಬ್ಯಾಂಕಿನ ನೂತನ ವಾಣಿಜ್ಯ ಮಳಿಗೆಗಳ ಉದ್ಘಾಟನೆಗೆ ನಿಯಮಾನುಸಾರ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ ಕಾರ್ಯಕರ್ತರು ಬ್ಯಾಂಕಿನ ಆಡಳಿತ ಮಂಡಳಿಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಪಿಕಾರ್ಡ್‌ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮಕ್ಕೆ ಯಾರನ್ನೂ ಸಹ ಕರೆದಿಲ್ಲ ಎಂದಿದ್ದಾರೆ.

ಮಾಸ್ಕ್‌ ಧರಿಸದವರಿಗೆ ರಸ್ತೆಯಲ್ಲೇ ದಂಡ ವಿಧಿಸಿದ ಇನ್ಸ್‌ಪೆಕ್ಟರ್‌..!

ಆದರೆ, ಅದೇ ಸಮಯಕ್ಕೆ ಮಾಜಿ ಶಾಸಕ ಎ.ಬಿ.ರಮೇಶ್‌ ಬಂಡಿಸಿದ್ದೇಗೌಡ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಇದರಿಂದ ಕೆರಳಿದ ಜೆಡಿಎಸ್‌ ಕಾರ್ಯಕರ್ತರು ಪಿಕಾರ್ಡ್‌ ಬ್ಯಾಂಕ್‌ ಆಡಳಿತ ಮಂಡಳಿ ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಕಾರ್ಯಕ್ರಮನವನ್ನು ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ.

ಇದರಿಂದ ರಮೇಶ ಬಂಡಿಸಿದ್ದೇಗೌಡ ಬೆಂಬಲಿಗರು ಆಕ್ರೋಶ ವ್ಯೆಕ್ತಪಡಿಸಿ ಶಾಸಕರ ಬೆಂಬಲಿಗರ ವಿರುದ್ದ ಹರಿಹಾಯ್ದಿದ್ದು, ಎರಡೂ ಕಡೆಯ ಕಾರ್ಯಕರ್ತರ ನಡುವೆ ಅರ್ಧ ತಾಸಿಗೂ ಹೆಚ್ಚು ಕಾಲ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ್ದಾರೆ.

ಕೊರೋನಾ ಭೀತಿ: ಪ್ರವಾಸಿಗರು ಬಾರದಂತೆ ಬಸ್‌ ತಡೆದ ಗ್ರಾಮಸ್ಥರು

ಒಂದು ಕಡೆ ಜೆಡಿಎಸ್‌ನ ಬಿ.ಎಸ್‌. ತಿಲಕ್‌ ಕುಮಾರ್‌, ಗಂಜಾಂ ಕೃಷ್ಣಪ್ಪ, ನೆಲಮನೆ ದಯಾನಂದ, ಎಸ್‌.ಪ್ರಕಾಶ್‌ , ಕಾಯಿ ವೆಂಕಟೇಶ್‌ ಹಾಗೂ ಮತ್ತೊಂದು ಕಡೆ ಕಾಂಗ್ರೆಸ್‌ ನಿಂದ ಎಂ.ಎಲ್‌.ದಿನೇಶ್‌,ಎಸ್‌.ಎನ್‌.ದಯಾನಂದ್‌, ಸೋಮಸುಂದರ್‌, ಆರ್‌.ಎನ್‌.ಗುರುಪ್ರಸಾದ್‌ ಇತರರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ತಳ್ಳಾಟ, ನೂಕಾಟವೂ ನಡೆಯಿತು. ಒಂದು ಹಂತದಲ್ಲಿ ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತ ತಲುಪಿ ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಲು ಹೈರಾಣಾಗಿ ಹೋದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಟಿ.ಆರ್‌.ಶಂಕರ್‌, ಕರೊನಾ ವೈರಸ್‌ ಹರಡುವ ಭೀತಿಯಿಂದ ವಾಣಿಜ್ಯ ಮಳಿಗೆಗಳ ಉದ್ಘಾಟನೆಗೆ ಯಾವ ಅಥಿತಿಗಳನ್ನೂ ಕರೆದಿಲ್ಲ. ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿಲ್ಲ. ಆದರೂ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಆಚಾನಕ್ಕಾಗಿ ಬಂದಿದ್ದಾರೆ ಎಂದು ಸಮಜಾಯಿಷಿ ನೀಡಿದರು. ನಂತರ ಆಡಳಿತ ಮಂಡಳಿಯವರೇ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿದರು.

ಸಾರ್ವಜನಿಕರ ಆಕ್ರೋಶ :

ಕೊರೊನಾದಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷದ ಕಾರ್ಯಕರ್ತರು ಸಾರ್ವಜನಿಕವಾಗಿ ಜನದಟ್ಟಣೆ ಸೇರುವ ಜತಗೆ ಗಲಾಟೆ ನಡೆಸಿರುವುದು ಖಂಡನೀಯ.ಈಗಾಗಲೇ ಶ್ರೀರಂಗಪಟ್ಟಣದಲ್ಲಿ ವ್ಯಾಪಕವಾಗಿ ಕರೊನಾ ಹರಡುತ್ತಿದ್ದು, ಸೋಂಕಿತರು ಹೆಚ್ಚಾಗುವ ಆತಂಕ ಎದುರಾಗಿದೆ. ತಕ್ಷಣ ತಾಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆ ಈ ಎಲ್ಲರನ್ನು ಕ್ವಾರೆಂಟೈನ್‌ಗೆ ಕರೆದೊಯ್ಯಬೇಕು ಎಂದು ಆಗ್ರಹಿಸಿದ್ದಾರೆ.