Asianet Suvarna News Asianet Suvarna News

Asianet Suvarna News Big Impact: ಮಂಗ್ಳೂರಿನ ಅಕ್ರಮ ಮನೆಗಳ ಮೇಲೆ ಜೆಸಿಬಿ ಘರ್ಜನೆ..!

*  ಜೆಸಿಬಿ ಮೂಲಕ ಕಾರ್ಯಾಚರಣೆ 
*  ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನ ಕೆಡವಿದ ಅಧಿಕಾರಿಗಳು
*  ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಸಾರವಾದ ಬಳಿಕ ಕಾರ್ಯಾಚರಣೆ 

JCB operation on Illegal Houses at Ullal in Mangaluru grg
Author
Bengaluru, First Published Mar 23, 2022, 7:43 AM IST

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು(ಮಾ.23): ಕೋಟಿ ಮೌಲ್ಯದ ಜಾಗವನ್ನು ಅಧಿಕಾರಿಗಳು ಭೂ ಮಾಫಿಯಾಗೆ(Land Mafia) ಬಿಟ್ಟು ಕೊಟ್ಟಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್(Asianet Suvarna News) ವರದಿ ಬೆನ್ನಲ್ಲೇ ಅಕ್ರಮ ಮನೆಗಳು ಧರಶಾಹಿಯಾಗಿದೆ. ನಿನ್ನೆ(ಮಂಗಳವಾರ) ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಇಂದು ಬೆಳ್ಳಂಬೆಳಿಗ್ಗೆ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಅಕ್ರಮ ಮನೆಗಳನ್ನ ಕೆಡವಲಾಗಿದೆ. 

ಮಂಗಳೂರಿನ(Mangaluru) ಕೋಟೆಕಾರು ಪ.ಪಂ ವ್ಯಾಪ್ತಿಯ ಮಡ್ಯಾರು ಸಾಯಿ ನಗರದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನ ಅಧಿಕಾರಿಗಳು ಕೆಡವಿದ್ದಾರೆ. ಬೆಳ್ಳಂಬೆಳಿಗ್ಗೆ ಅಕ್ರಮ ಮನೆಗಳ ಮೇಲೆ ಜೆಸಿಬಿ ಕಾರ್ಯಾಚರಣೆ(JCB operation) ನಡೆಸಲಾಗಿದ್ದು, ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ರಾಯಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ನಿರ್ಮಾಣ ಹಂತದ ಮನೆಗಳನ್ನ ಜೆಸಿಬಿ ಮೂಲಕ ಕೆಡವಿದ ಅಧಿಕಾರಿಗಳು, ಬೆಳಿಗ್ಗೆ 5.30ರ ಸುಮಾರಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಉಳ್ಳಾಲದ ಕಡಲ್ಕೊರೆತ ಸಂತ್ರಸ್ತರಿಗೆ ಮೀಸಲಿಟ್ಟಿದ್ದ ಕೋಟ್ಯಾಂತರ ಮೌಲ್ಯದ ಜಾಗವನ್ನು ಪ್ರಭಾವಿ ಖಾಸಗಿ ಬಿಲ್ಡರ್ ಗಳಿಗೆ ಬಿಟ್ಟುಕೊಟ್ಟಿದ್ದ ಸರ್ಕಾರಿ ಅಧಿಕಾರಿಗಳ ಬಂಡವಾಳವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲಿಗೆಳೆದಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ ದಾಖಲೆ ಸಹಿತ ಅಕ್ರಮದ ಸುದ್ದಿ ಮಾಡಲು ಇಳಿದ ಬೆನ್ನಲ್ಲೇ ಭ್ರಷ್ಟ ಅಧಿಕಾರಿ ವರ್ಗ ಎಚ್ಚೆತ್ತುಕೊಂಡು ಅಕ್ರಮ ಮನೆಗಳನ್ನ ವಶಕ್ಕೆ ಪಡೆದು ಖಾಸಗಿ ಬಿಲ್ಡರ್ ಗಳ ಕೈಯ್ಯಲ್ಲಿದ್ದ ಭೂಮಿಯನ್ನ ಸ್ವಾಧೀನ ಪಡಿಸಿಕೊಂಡಿತ್ತು.

"

Mangaluru: ಕಾಯಬೇಕಾದ ಅಧಿಕಾರಿಗಳಿಂದಲೇ ಭೂಮಾಫಿಯಾ: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ

ಮಂಗಳೂರು ಹೊರವಲಯದ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಡ್ಯಾರು ಸಾಯಿ ‌ನಗರ ಎಂಬಲ್ಲಿ ಉಳ್ಳಾಲದ ಕಡಲ್ಕೊರೆತ ಸಂತ್ರಸ್ತರಿಗಾಗಿ ಸರ್ಕಾರ 1.42 ಎಕರೆ ಜಾಗವನ್ನು ಮೀಸಲಿಟ್ಟಿತ್ತು. ಕಂದಾಯ ಇಲಾಖೆ(Department of Revenue) ಈ ಜಾಗವನ್ನ ಉಳ್ಳಾಲ ನಗರಸಭೆಗೆ ಹಸ್ತಾಂತರ ಮಾಡಿದ್ದು, ನಗರಸಭೆ ಹೆಸರಿನಲ್ಲಿ ಆರ್ ಟಿಸಿ ಕೂಡ ದಾಖಲಾಗಿದೆ. ಆದ್ರೆ ಕಳೆದ ಕೆಲ ವರ್ಷಗಳಿಂದ ಇಲ್ಲಿ ಸಂತ್ರಸ್ತರಿಗೆ ಯಾವುದೇ ಮನೆ ನಿರ್ಮಾಣ ಆಗದ ಹಿನ್ನೆಲೆಯಲ್ಲಿ ಅದರ ಲಾಭ ಪಡೆದ ಖಾಸಗಿ ಬಿಲ್ಡರ್ ಗಳು ಜಾಗವನ್ನ ವಶ ಪಡಿಸಿಕೊಂಡಿದ್ದಾರೆ. ವರ್ಷಗಳ ಹಿಂದೆಯೇ ಜಾಗ ವಶಕ್ಕೆ ಪಡೆದು ಆ ಜಾಗದಲ್ಲಿ ಲಕ್ಷಾಂತರ ಮೌಲ್ಯದ ಆರು‌ ಮನೆಗಳನ್ನು ರಾಜಾರೋಷವಾಗಿ ನಿರ್ಮಿಸಿದ್ದಾರೆ. ‌ಹೀಗಿದ್ದರೂ ಜಾಗದ ಜವಾಬ್ದಾರಿ ಹೊಂದಿದ್ದ ಉಳ್ಳಾಲ ನಗರಸಭೆಯಾಗಲೀ ಸ್ಥಳೀಯ ಕೋಟೆಕಾರು ಪ.ಪಂ ಮೌನವಾಗಿದ್ದು, ಭ್ರಷ್ಟ ಅಧಿಕಾರಿ ವರ್ಗ ಅಕ್ರಮಕ್ಕೆ ಸಾಥ್ ಕೊಟ್ಟಿದೆ. ಹೀಗಾಗಿ ಬಿಲ್ಡರ್ ಗಳು ಮನೆಗಳನ್ನ ನಿರ್ಮಿಸಿ ಮಾರಾಟ ಮಾಡಿದ್ದು, ಕೆಲವರು ವಾಸ್ತವ್ಯ ಕೂಡ ಇದ್ದರು.

Hindu Traders ಪುತ್ತೂರು ದೇವಸ್ಥಾನದ ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ!

ಇನ್ನು ಈ ಅಕ್ರಮದ ಬಗ್ಗೆ ಮಾಹಿತಿ ಪಡೆದ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ ಮಾ.21ರಂದು ದಾಖಲೆ ಸಹಿತ ವರದಿ ಮಾಡಲು ಮಡ್ಯಾರು ಸಾಯಿ ನಗರದ ಆ ಜಾಗಕ್ಕೆ ತೆರಳಿತ್ತು‌. ಅಕ್ರಮ ಮನೆಗಳ ಚಿತ್ರೀಕರಣ ನಡೆಸ್ತಾ ಇದ್ದ ಸುದ್ದಿ ಉಳ್ಳಾಲ ನಗರಸಭೆ ಮತ್ತು ಕೋಟೆಕಾರು ಪ.ಪಂ ಅಧಿಕಾರಿ ವರ್ಗಕ್ಕೆ ಮುಟ್ಟಿದೆ‌‌. ಇಷ್ಟಾಗಿದ್ದೇ ತಡ ಎದ್ದೆನೋ ಬಿದ್ದೆನೋ ಅಂತ ಅಧಿಕಾರಿಗಳು ಮಡ್ಯಾರು ಸಾಯಿ ನಗರದ ತಮ್ಮ ಜಾಗಕ್ಕೆ ಓಡೋಡಿ ಬಂದಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾ ಕಂಡಿದ್ದೇ ತಡ ಎಚ್ಚೆತ್ತುಕೊಂಡಿದ್ದಾರೆ. ತಕ್ಷಣ ಅಕ್ರಮವಾಗಿ ನಿರ್ಮಿಸಿದ್ದ ಆರು ಮನೆಗಳನ್ನ ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಎರಡು ಮನೆಗಳು ಕಾಮಗಾರಿ ಹಂತದಲ್ಲಿದ್ದು, ಅದರ ಕೆಲಸ ನಿಲ್ಲಿಸಿ ವಶಕ್ಕೆ ಪಡೆದು ‌ಬೇಲಿ ಹಾಕಿ ಮನೆಗಳ ಗೇಟ್ ಗೆ ಬೀಗ ಜಡಿದಿದ್ದಾರೆ. ಆ ಬಳಿಕ ಮನೆ ಮತ್ತು ಸಂಪೂರ್ಣ ಜಾಗದ ಎದುರು 'ಇದು ಉಳ್ಳಾಲ ನಗರಸಭೆ ಸೊತ್ತು' ಅಂತ ಬೋರ್ಡ್ ಅಳವಡಿಸಿದ್ದಾರೆ. ವರ್ಷಗಳ ಹಿಂದೆಯೇ ಇಲ್ಲಿ ‌ಮನೆಗಳನ್ನ ನಿರ್ಮಿಸಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಏಷ್ಯಾನೆಟ್ ಸುವರ್ಣ ‌ನ್ಯೂಸ್ ಕ್ಯಾಮರಾ ಕಂಡು ಅಲರ್ಟ್ ‌ಆಗಿದ್ದಾರೆ. ಈ ಬಗ್ಗೆ ನಿನ್ನೆ ಬೆಳಿಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಸಾರವಾಗಿದ್ದು, ಇಂದು ಬೆಳ್ಳಂಬೆಳಿಗ್ಗೆ ನಗರಸಭೆ ಜೆಸಿಬಿ ಮೂಲಕ ಮನೆಗಳನ್ನ ಕೆಡವಲಾಗಿದೆ. 

ಇ‌ನ್ನು ಈ ಅಕ್ರಮದಲ್ಲಿ ಉಳ್ಳಾಲ ನಗರಸಭೆ, ಕೋಟೆಕಾರು ಪ.ಪಂ ಮತ್ತು ಕಂದಾಯ ಇಲಾಖೆಯ ಅಧಿಕಾರಿ ವರ್ಗ ಲಂಚ ಪಡೆದು ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಜಾಗ ತಮ್ಮ ವಶದಲ್ಲಿರೋವಾಗಲೇ ಖಾಸಗಿಯವರು ರಾಜಾರೋಷವಾಗಿ ಮನೆ ಕಟ್ಟಿದರೂ ಉಳ್ಳಾಲ(Ullal) ನಗರಸಭೆ ಅಧಿಕಾರಿಗಳು ಮೌನವಾಗಿದ್ದರು. ಜೊತೆಗೆ ಮನೆಗೆ ವಿದ್ಯುತ್ ಸಂಪರ್ಕ ಕೂಡ ಇದ್ದು, ಕೋಟೆಕಾರು ಪ.ಪಂ ಅಕ್ರಮ ಮನೆಗೆ ಡೋರ್ ನಂಬರ್ ಕೊಟ್ಟಿರೋ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿದೆ. ಆದ್ರೆ ಇದೀಗ ಸುವರ್ಣ ನ್ಯೂಸ್ ‌ಕ್ಯಾಮರಾ ಎದುರು ನಾವು ಯಾವುದೇ ಮನೆಗೆ ಡೋರ್ ನಂಬರ್, ಪರವಾನಿಗೆ ಕೊಟ್ಟಿಲ್ಲ ಅಂತಿದಾರೆ ಕೋಟೆಕಾರು ‌ಪ.ಪಂ ಮುಖ್ಯಾಧಿಕಾರಿ ಮಾಲಿನಿ. ಇನ್ನು ಇಡೀ ಅಕ್ರಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕೂಡ ಭಾಗಿಯಾಗಿರೋ ಅನುಮಾನವಿದ್ದು, ಸದ್ಯ ದ‌‌.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಈ ಬಗ್ಗೆ ಸಮಗ್ರ ವರದಿ ಸಲ್ಲಿಕೆಗೆ ಸೂಚಿಸಿದ್ದಾರೆ.
 

Follow Us:
Download App:
  • android
  • ios