ದಾವಣಗೆರೆಯಲ್ಲಿ ಹೋರಾಟದ ರೂಪುರೇಷೆ ಬದಲು| ಕೂಡ​ಲ​ಸಂಗ​ಮದ ಬಸ​ವ​ ಜ​ಯ​ಮೃ​ತ್ಯುಂಜಯ ಸ್ವಾಮೀಜಿ ಎಚ್ಚರಿಕೆ| ಪಾದಯಾತ್ರೆ ಮಧ್ಯ ಕರ್ನಾ​ಟ​ಕ ಪ್ರವೇಶಿಸುವ ಮುನ್ನ ಬೇಡಿಕೆ ಈಡೇ​ರಿ​ಸಿ| 

ಕೊಪ್ಪಳ(ಜ.21): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತಂತೆ ನಡೆಯುತ್ತಿರುವ ಪಾದಯಾತ್ರೆ ಕಲ್ಯಾಣ ಕರ್ನಾಟಕದಿಂದ ಮಧ್ಯ ಕರ್ನಾಟಕಕ್ಕೆ ತಲುಪುವದರೊಳಗೆ ಸರ್ಕಾರ ಸ್ಪಂದಿಸಿ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ದಾವಣಗೆರೆಯಲ್ಲಿ ಹೋರಾಟದ ರೂಪುರೇಷೆ ಬದಲಾಗುತ್ತದೆ. ಬೇರೊಂದು ರೀತಿಯ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯ ಕರ್ನಾಟಕಕ್ಕೆ ಪಾದಯಾತ್ರೆ ತಲುಪಿದಲ್ಲಿ ರಣಕಹಳೆ ಮೊಳಗಿಸಬೇಕಾಗುತ್ತದೆ. ಅದು ಆಗಲು ಸರ್ಕಾರ ಬಿಡಬಾರದು. ಎಚ್ಚೆತ್ತುಕೊಂಡು ಬೇಡಿಕೆ ಈಡೇರಿಸಬೇಕು, ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಜವಾಬ್ದಾರಿ ಎಂದರು.

ಯಡಿಯೂರಪ್ಪ ಅವರು ನಮ್ಮ ಜತೆಗೆ ನೇರವಾಗಿ ಮಾತುಕತೆಯನ್ನಾಡದಿದ್ದರೂ ಸಚಿವ ಮುರುಗೇಶ ನಿರಾಣಿ ಅವರ ಮೂಲಕ ಸಂದೇಶ ಕಳುಹಿಸಿದ್ದು, ಪಾದಯಾತ್ರೆ ಮೊಟಕುಗೊಳಿಸಿ, ಮಾತುಕತೆ ಮೂಲಕ ವಿಷಯ ಇತ್ಯರ್ಥ ಮಾಡಿಕೊಳ್ಳುವಂತೆ ತಿಳಿ​ಸಿ​ದ್ದಾರೆ. ಆದರೆ, ನಾವು ಅದಕ್ಕೆ ಒಪ್ಪುವ ಪ್ರಶ್ನೆಯೇ ಇಲ್ಲ. ಸರ್ಕಾರ ಮೊದಲು ನಮ್ಮ ಬೇಡಿಕೆ ಈಡೇ​ರಿ​ಸ​ಬೇಕು ಎಂದು ಹೇಳಿ​ದ​ರು.

ಸಚಿವ ಮುರುಗೇಶ ನಿರಾಣಿ ಯಾವುದೇ ವ್ಯತಿರಿಕ್ತ ಹೇಳಿಕೆ ನೀಡಿಲ್ಲ. ಆದರೆ, ಪಾದಯಾತ್ರೆ ಕೈಬಿಡುವಂತೆ ಮನವಿ ಮಾಡಿರುವುದು ನಿಜ. ನಾವು ಪಾದ​ಯಾತ್ರೆ ಕೈಬಿ​ಡುವ ಪ್ರಶ್ನೆಯೇ ಇಲ್ಲ ಎಂದ ಶ್ರೀಗಳು, ಸರ್ಕಾರದೊಂದಿಗೆ ಮಾತುಕತೆಗೆ ಸಂಸದ ಸಂಗಣ್ಣ ಕರಡಿ ಹಾಗೂ ಸಚಿವ ಸಿ.ಸಿ. ಪಾಟೀಲ್‌ ಅವರಿಗೆ ಜವಾಬ್ದಾರಿ ನೀಡಿದ್ದು ಅವರು ಮಾತ​ನಾ​ಡು​ತ್ತಾರೆ ಎಂದರು.

ಹರಿಹರ ಪೀಠಕ್ಕೂ ಮತ್ತು ಕೂಡಲಸಂಗಮ ಪೀಠಕ್ಕೂ ಯಾವುದೇ ವ್ಯತ್ಯಾಸವಿಲ್ಲ. ನಮ್ಮ (ಎರಡೂ ಪೀಠದ) ಬೇಡಿಕೆಗಳು ಒಂದೇ ಆಗಿದೆ. ಹರ ಜಾತ್ರೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಅವರು ಭಾಗವಹಿಸಿದ್ದರು. ಹೀಗಾಗಿ, ಇದಕ್ಕೂ-ಅದಕ್ಕೂ ತಳಕು ಹಾಕಬೇಡಿ. ಅಲ್ಲಿನ ಶ್ರೀಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂ​ದ​ರು.

ನಾವು ಜೀವವನ್ನಾದರೂ ಬಿಡುತ್ತೇವೆ, ಮೀಸಲಾತಿ ಬಿಡೋದಿಲ್ಲ: ಕಾಶಪ್ಪನವರ್‌

ಬಿಎಸ್‌ವೈ ಲಿಂಗಾಯಿತರ ಅರಸು ಆಗಲಿ

ಹಿಂದುಳಿದ ವರ್ಗಗಳಿಗೆ ದೇವರಾಜ ಅರಸು, ಒಕ್ಕಲಿಗರಿಗೆ ಎಚ್‌.​ಡಿ. ದೇವೇಗೌಡರು ಆದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಲಿಂಗಾಯಿತರ ಪಾಲಿಗೆ ಆಗಬೇಕು. ಇದರಲ್ಲಿ ಹಿಂಜರಿಕೆ ಸಲ್ಲದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿ​ದ​ರು.

ಎಸ್ಟಿ ಸಮುದಾಯಕ್ಕೆ ಶೇ. 7.5 ಮೀಸಲಾತಿ, ಕುರುಬ ಸಮುದಾಯವನ್ನು ಎಸ್ಟಿಗೆ ಹಾಗೂ ನಮ್ಮ (ಪಂಚಮಸಾಲಿ) ಸಮಾಜವನ್ನು 2ಎಗೆ ಸೇರಿಸಬೇಕು ಎಂದ ಅವರು ಮೀಸಲು ಪ್ರಮಾಣ ಈಗಾಗಲೇ ಶೇ. 50 ಇರುವುದರಿಂದ ಪ್ರಮಾಣ ಹೆಚ್ಚಳ ಕಾನೂನು ತೊಡಕಾಗುತ್ತದೆ ಎಂಬ ಪ್ರಶ್ನೆಗೆ, ಅದು ನಮಗೆ ಬೇಕಾಗಿಲ್ಲ. 2ಎ ಮೀಸಲು ಸೌಲಭ್ಯವನ್ನು ಸರ್ಕಾರ ನೀಡ​ಬೇಕು ಎಂದು ಆಗ್ರಹಿಸಿದರು.

ಅಧ್ಯ​ಯನ ಸಮಿತಿ ರಚ​ನೆಯ ಅಗ​ತ್ಯ​ವಿ​ಲ್ಲ

ಯಾವ ಅಧ್ಯಯನ ಸಮಿತಿ ರಚನೆಯ ಅಗತ್ಯವಿಲ್ಲ , ಸರ್ಕಾರ ಪಂಚಮಸಾಲಿ ಬೇಡಿಕೆ ಈಡೇರಿಸುವ ಕಾರ್ಯ ಮೊದಲು ಮಾಡಲಿ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಆಗ್ರಹಿಸಿದರು.
ಉಪಮು​ಖ್ಯ​ಮಂತ್ರಿ ಗೋವಿಂದ ಕಾರಜೋಳ ಮೀಸ​ಲಾತಿ ಕಲ್ಪಿ​ಸುವ ಮೊದಲು ಅಧ್ಯ​ಯನ ಸಮಿತಿ ರಚನೆ ಮಾಡ​ಬೇಕು ಎಂದಿ​ದ್ದಾರೆ. ಅವರು ಗೆದ್ದಿರುವುದೇ ನಮ್ಮ ಪಂಚಮಸಾಲಿ ಸಮಾಜದಿಂದ. ಮೊದಲು ಅವರು ನಮ್ಮ ಬೇಡಿಕೆ ಈಡೇರಿಸುವ ಕುರಿತು ಮಾತನಾಡಲಿ. ಅವ​ರಿಗೆ ಮೀಸ​ಲಾತಿ ಕಲ್ಪಿ​ಸ​ಲಾ​ಗಿದೆ. ಅವರು ಮನೆ​ಯಲ್ಲೇ ಇರಲಿ. ನಮಗೆ ಮೀಸ​ಲಾತಿ ಬೇಕಿದೆ, ನಾವು ಹೋರಾಟ ಮಾಡು​ತ್ತೇವೆ ಎಂದು ಕಾರಜೋಳ ಅವರಿಗೆ ತಿರುಗೇಟು ನೀಡಿದರು.

ಇದು ಅಂತಿಮ ಹೋರಾಟ. ನಾವು ಜೀವ ಬೇಕಾ​ದರೆ ಬಿಡು​ತ್ತೇವೆ. ಆದ​ರೆ, ಮೀಸ​ಲಾತಿ ಬಿಡು​ವು​ದಿಲ್ಲ. ಮೀಸ​ಲಾತಿ ದೊರ​ಕ​ದಿ​ದ್ದರೆ ಶಾಂತಿ​ಯು​ತ​ವಾಗಿ ನಡೆ​ಯು​ತ್ತಿ​ರು​ವ ಹೋರಾಟ ಕ್ರಾಂತಿ ಸ್ವರೂಪ ಪಡೆ​ಯು​ತ್ತದೆ ಎಂದು ಕಾಶಪ್ಪನವರ ಎಚ್ಚ​ರಿ​ಸಿ​ದ​ರು.