Asianet Suvarna News Asianet Suvarna News

1871ರಲ್ಲಿ ಪಂಚಮಸಾಲಿ ಶೂದ್ರರ ಪಟ್ಟಿಯಲ್ಲಿತ್ತು!

1871ರಲ್ಲಿ ಪಂಚಮಸಾಲಿ ಶೂದ್ರರ ಪಟ್ಟಿಯಲ್ಲಿತ್ತು!| ಹಿಂದುಳಿದ ವರ್ಗಗಳ ಆಯೋಗಕ್ಕೆ ಮಹತ್ವದ ದಾಖಲೆ ಸಲ್ಲಿಕೆ| 1891ರ ಜನಗಣತಿಯಲ್ಲಿ ಇದನ್ನು ಪಟ್ಟಿಯಿಂದ ತೆಗೆಯಲಾಗಿತ್ತು| ಇದು ಏಕೆ ಮುಖ್ಯ?| ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಹೋರಾಟ ನಡೆಯುತ್ತಿದೆ| ಈ ವೇಳೆ ಬ್ರಿಟಿಷರ ಕಾಲದಲ್ಲಿ ಸಮುದಾಯ ಶೂದ್ರರ ಪಟ್ಟಿಯಲ್ಲಿತ್ತು ಎಂಬುದು ಬೆಳಕಿಗೆ| ವಚನಾನಂದ ಶ್ರೀ ನೇತೃತ್ವದಲ್ಲಿ ಆಯೋಗಕ್ಕೆ ದಾಖಲೆ ಹಾಜರು| ಮೀಸಲಾತಿ ಶಿಫಾರಸು ಮಾಡುವ ವೇಳೆ ಈ ಅಂಶಕ್ಕೆ ಮಹತ್ವ?

In 1871 Panchamasali Under Shudra Varna says report pod
Author
Bangalore, First Published Mar 24, 2021, 7:31 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮಾ.24): ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ರಾಜ್ಯಾದ್ಯಂತ ಹೋರಾಟ ನಡೆದಿರುವ ಬೆನ್ನಲ್ಲೇ ಪಂಚಮಸಾಲಿ ಸಮುದಾಯ ಬ್ರಿಟಿಷರ ಆಡಳಿತಾವಧಿಯಲ್ಲಿ ಹಿಂದುಳಿದ ವರ್ಗಗಳ ಶೂದ್ರರ ಪಟ್ಟಿಯಲ್ಲಿದ್ದುದು ಬೆಳಕಿಗೆ ಬಂದಿದ್ದು, ಇದಕ್ಕೆ ಸಂಬಂಧಪಟ್ಟದಾಖಲೆಗಳನ್ನು ಹಿಂದುಳಿದ ವರ್ಗಗಳ ಆಯೋಗದ ಮುಂದೆ ಹಾಜರುಪಡಿಸಲಾಗಿದೆ.

ಕೃಷಿಯನ್ನು ನೆಚ್ಚಿಕೊಂಡಿದ್ದ, ಆರ್ಥಿಕವಾಗಿ ತೀರಾ ಹಿಂದುಳಿದಿದ್ದ, ಕಡಿಮೆ ಜನ ಸಂಖ್ಯೆ ಹೊಂದಿದ್ದ ಲಿಂಗಾಯತ ಸಮುದಾಯದ 22 ಉಪಪಂಗಡಗಳನ್ನು ಬ್ರಿಟಿಷರ ಅವಧಿಯಲ್ಲಿದ್ದ ಮೈಸೂರು ಮಹಾರಾಜರ ಸರ್ಕಾರ 1871ರಲ್ಲಿ ತನ್ನ ಜಾತಿ ಮತ್ತು ಜನಗಣತಿಯ ವರದಿಯಲ್ಲಿ ಹಿಂದುಳಿದ ವರ್ಗಗಳ ಶೂದ್ರರೆಂದು ಪರಿಗಣಿಸಿ ವಿಶೇಷ ಸ್ಥಾನಮಾನ ನೀಡಿತ್ತು. ಈ ಬಗ್ಗೆ ಆಯೋಗದ ಮುಂದೆ ಸುಮಾರು ಎರಡೂವರೆ ಗಂಟೆ ವಾದ ಮಂಡಿಸಿದ ನ್ಯಾಯವಾದಿ ಬಿ.ಎಸ್‌.ಪಾಟೀಲ್‌ ಸಂಬಂಧಪಟ್ಟದಾಖಲೆಗಳನ್ನು ಪ್ರಸ್ತುತಪಡಿಸಿದ್ದಾರೆ. ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ನೇತೃತ್ವದಲ್ಲಿ ಈ ದಾಖಲೆಗಳನ್ನು ಹಾಜರುಪಡಿಸಲಾಗಿದ್ದು, ‘ಕನ್ನಡಪ್ರಭ’ಕ್ಕೂ ಇದರ ಪ್ರತಿಗಳು ಲಭ್ಯವಾಗಿವೆ.

1881ರಲ್ಲಿ ನಡೆದ ಜಾತಿ ಮತ್ತು ಜನಗಣತಿಯ ವೇಳೆಯಲ್ಲಿಯೂ ಈ ಉಪಪಂಗಡಗಳನ್ನು ಹಿಂದುಳಿದ ವರ್ಗದ ಶೂದ್ರರ ಯಾದಿಗೆ ಸೇರಿಸಲಾಗಿತ್ತು. ಆದರೆ 1891ರಲ್ಲಿ ನಡೆದ ಜಾತಿ ಮತ್ತು ಜನಗಣತಿ ವೇಳೆ ಲಿಂಗಾಯತ ಸಮುದಾಯ ಇದರ ವಿರುದ್ಧ ಧ್ವನಿ ಎತ್ತಿ ನಮ್ಮನ್ನು ಶೂದ್ರರ ಯಾದಿಯಲ್ಲಿ ಸೇರಿಸಬೇಡಿ ಎಂದು ಹೋರಾಟ ನಡೆಸಿತು. ಇದರ ಪರಿಣಾಮ 1891ರ ಜ.5ರಂದು ಅಧಿಸೂಚನೆ ಹೊರಡಿಸಿ ಈ 22 ಉಪಪಂಗಡಗಳನ್ನು ಶೂದ್ರರ ಯಾದಿಯಿಂದ ತೆಗೆದು ಹಾಕಲಾಯಿತು. ಆದರೆ 1918ರವರೆಗೂ ಆರ್ಥಿಕ ಹಿಂದುಳಿದ ವರ್ಗ ಎಂದು ಪರಿಗಣಿಸಲಾಯಿತು.

ಇದಾದ ಮೇಲೆ 1919ರಲ್ಲಿ ಜಸ್ಟಿಸ್‌ ಮಿಲ್ಲರ್‌ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಅಧ್ಯಯನ ಮಾಡಿ 2 ತಿಂಗಳಲ್ಲಿ ವರದಿ ಸಲ್ಲಿಸಲು ಆಗಿನ ಮೈಸೂರು ಮಹಾರಾಜ ಸರ್ಕಾರ ಆದೇಶ ಮಾಡಿತು. ಮಿಲ್ಲರ್‌ ಆಗ ಹಿಂದುಳಿದ ವರ್ಗದವರು ಮತ್ತು ಮುಂದುವರಿದವರು ಎಂದು ಮಾತ್ರ ವರ್ಗೀಕರಣ ಮಾಡಿದರು.

ಅದಾದ ಮೇಲೆ 1960ರಲ್ಲಿ ಮೈಸೂರು ಸರ್ಕಾರ ನಾಗನಗೌಡ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಜಾತಿಪಟ್ಟಿತಯಾರು ಮಾಡಲು ಮತ್ತು ಮೀಸಲಾತಿ ಕಲ್ಪಿಸಲು ಸಮಿತಿ ರಚಿಸಲಾಯಿತು. ಆ ವರದಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲ್ಪಟ್ಟು ರದ್ದುಗೊಂಡಿತು.

ಇದಾದ ಮೇಲೆ ಎಲ್‌.ಜಿ.ಹಾವನೂರು ಅಧ್ಯಕ್ಷತೆಯಲ್ಲಿ ಜಾತಿ ಗಣತಿ ಮತ್ತು ಮೀಸಲಾತಿ ವಿಸ್ತರಣೆಗೆ ಸಮಿತಿ ಮಾಡಿತು. ಆ ಸಮಿತಿಯಲ್ಲಿ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗದಿಂದ ಕೈಬಿಡಲಾಯಿತು. ಇತರೆ ಲಿಂಗಾಯತ ಉಪಪಂಗಡಗಳು ಹಿಂದುಳಿದ ವರ್ಗದಲ್ಲಿ ಸೇರ್ಪಡೆಗೊಂಡವು. ಈ ಆದೇಶವನ್ನೂ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಈ ವೇಳೆ ಹಾವನೂರು ವರದಿಯನ್ನು ಭಾಗಶಃ ರದ್ದುಗೊಳಿಸಿದ ನ್ಯಾಯಾಲಯ ಮರುಪರಿಶೀಲನೆಗೆ ಮತ್ತೊಂದು ಸಮಿತಿ ರಚಿಸಲು ನಿರ್ದೇಶಿಸಿತು. ನಂತರ ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಆ ಆಯೋಗವು 200 ಹಿಂದುಳಿದ ವರ್ಗಗಳ ಬದಲಾಗಿ ಕೇವಲ 30 ಜಾತಿಗಳನ್ನು ಮಾತ್ರ ಹಿಂದುಳಿದ ವರ್ಗಗಳೆಂದು ಪರಿಗಣಿಸಿತು. ಆದ್ದರಿಂದ ಸರ್ಕಾರ ಈ ಸಮಿತಿಯ ವರದಿಯನ್ನು ತಿರಸ್ಕಾರ ಮಾಡಲಾಯಿತು.

ಇದಾದ ಮೇಲೆ 1990ರಲ್ಲಿ ನ್ಯಾಯಮೂರ್ತಿ ಓ.ಚಿನ್ನಪ್ಪರಡ್ಡಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಇವರು ಹಿಂದುಳಿದ ವರ್ಗದಲ್ಲಿ ಐದು ಪ್ರವರ್ಗಗಳನ್ನಾಗಿ ವಿಂಗಡಣೆ ಮಾಡಿದರು. ಇದರಲ್ಲಿಯೂ ಪಂಚಮಸಾಲಿ ಸಮಾಜವನ್ನು ಕೈಬಿಡಲಾಯಿತು. ಇದೀಗ 1871ರಲ್ಲಿನ ಮೂಲದಾಖಲೆಗಳನ್ನು ಹಿಡಿದುಕೊಂಡು ಹಿಂದುಳಿದ ವರ್ಗದ ಆಯೋಗದ ಮುಂದೆ ವಾದ ಮಂಡನೆ ಮಾಡಿ, ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸುವಂತೆ ಪಟ್ಟು ಹಿಡಿಯಲಾಗಿದೆ.

ಪಂಚಮಸಾಲಿ ಸಮಾಜ ಸಂಘ ಸ್ಥಾಪನೆ

1993ರಲ್ಲಿ ಕೊಪ್ಪಳದಲ್ಲಿ (ಆಗಿನ್ನೂ ಪ್ರತ್ಯೇಕ ಜಿಲ್ಲೆ ಆಗಿರಲಿಲ್ಲ) ಪಂಚಮಸಾಲಿ ಸಮಾಜ ಸಂಘವನ್ನು ಸ್ಥಾಪಿಸಲಾಯಿತು. ಅಲ್ಲದೇ ಬೃಹತ್‌ ಸಮಾವೇಶ ಮಾಡಲಾಯಿತು. ಇದರ ಪರಿಣಾಮ 1994ರಲ್ಲಿ ವೀರಪ್ಪ ಮೊಯ್ಲಿ ಮೀಸಲಾತಿಯನ್ನು ಶೇ.73ಕ್ಕೆ ಹೆಚ್ಚಳ ಮಾಡಿ ಆದೇಶಿಸಿದರು. ಆದರೆ ಇದು ಜಾರಿಯಾಗಲಿಲ್ಲ. ಆ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇದೆ. ಇದು ಜಾರಿಯಾಗಿದ್ದರೆ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಭರವಸೆ ಸಿಗುತ್ತಿತ್ತು ಎನ್ನುವುದನ್ನು ವಾದದ ವೇಳೆ ಉಲ್ಲೇಖ ಮಾಡಲಾಗಿದೆ.

ಪಂಚಮಸಾಲಿ ಸಮಾಜ 1871ರಲ್ಲಿಯೇ ಹಿಂದುಳಿದ ವರ್ಗ ಶೂದ್ರರು ಎಂದು ಗುರುತಿಸಿದ ಬಗ್ಗೆ ದಾಖಲೆ ಪತ್ತೆಯಾಗಿವೆ. ಈ ದಾಖಲೆಗಳನ್ನು ಹಿಂದುಳಿದ ವರ್ಗದ ಆಯೋಗದ ಮುಂದೆ ಸಲ್ಲಿಸಲಾಗಿದೆ. ಹೀಗಾಗಿ ಆಯೋಗದಿಂದ ಸಕಾರಾತ್ಮಕ ಆದೇಶ ನಿರೀಕ್ಷೆಯಲ್ಲಿದ್ದೇವೆ.

-ಬಿ.ಎಸ್‌.ಪಾಟೀಲ್‌ ತಾವರಗೇರಾ, ಸರ್ಕಾರಿ ಅಭಿಯೋಜಕರು

Follow Us:
Download App:
  • android
  • ios