ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರವು ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಆರೋಪ

ಎಚ್‌.ಡಿ. ಕೋಟೆ (ಜು.28): ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರವು ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಆರೋಪಿಸಿದ್ದಾರೆ.

ಪಟ್ಟಣದ ಕೃಷ್ಣಾಪುರ ವೃತ್ತದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಸೈಕಲ್‌ ಜಾಥಾಕ್ಕೆ ಚಾಲನೆ ನೀಡಿ, ನಂತರ ಪಟ್ಟಣದ ಡಾ. ಅಂಬೇಡ್ಕರ್‌ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ಬಿಜೆಪಿ ಸರ್ಕಾರ ಏರಿಕೆ ಮಾಡಿರುವುದನ್ನು ಖಂಡಿಸಿ ಮಂಗಳವಾರ ಸೈಕಲ್‌ ಜಾಥಾ ನಡೆಯಿತು. ಕಡಿಮೆ ಸಮಯದಲ್ಲಿ 56 ಬಾರಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚು ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ಪೆಟ್ರೋಲ್‌ ಮತ್ತು ಡೀಸೆಲ್‌ ಏರಿಕೆ ಮಾಡಿದರೆ ಬಿಜೆಪಿ ಪತ್ರಿಭಟನೆ ನಡೆಸುತ್ತಿದ್ದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುಖಂಡರು

ಒಂದು ಬ್ಯಾರಲ್‌ಗೆ 120 ಡಾಲರ್‌ಗೆ ಸಿಗುತ್ತಿತ್ತು, ಈಗ ಮೋದಿ ಸರ್ಕಾರದಲ್ಲಿ ಒಂದು ಬ್ಯಾರಲ್‌ಗೆ 35 ರಿಂದ 40 ಡಾಲರ್‌ಗೆ ಲಭ್ಯವಾಗುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ 7 ವರ್ಷದ ಆಡಳಿತದಲ್ಲಿ ಜನಪರ ಕಾರ್ಯಕ್ರಮ ನೀಡುವಲ್ಲಿ ವಿಫಲ ವಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ನಿಂದ ಸುಮಾರು 20 ಲಕ್ಷಕೋಟಿ ತೆರಿಗೆ ಬಂದಿದೆ. ಕೊರೋನಾ ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಾವಿಗೀಡಾಗಿದ್ದಾರೆ. ಕೋವಿಡ್‌ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲ ವಾಗಿದೆ. ಎಚ್‌.ಡಿ. ಕೋಟೆ ತಾಲೂಕಿನಲ್ಲಿ ಶಾಸಕ ಅನಿಲ್‌ ಚಿಕ್ಕಮಾದು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದೆ ಬರುವ ಜಿಲ್ಲಾ ಮಾತ್ತು ತಾಪಂ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದರೆ ತಾಲೂಕಿನಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯ ಎಂದರು.

ಎಚ್‌.ಡಿ. ಕೋಟೆ ಮತ್ತು ಸರಗೂರು ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಯಾಜ್‌ ಮತ್ತು ಶಿವರಾಜು ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.

ಜಿಲ್ಲಾ ಜಯ ಕರ್ನಾಟಕ ಅಧ್ಯಕ್ಷ ಸತೀಶ್‌ಗೌಡ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.