ಜುಲೈ 15ರಿಂದ ಬನ್ನೇರುಘಟ್ಟದಿಂದ ಕೇಂದ್ರ ಸಿಲ್ಕ್ ಬೋರ್ಡ್ ಕಡೆಗೆ ಸಂಚರಿಸುವ ಫ್ಲೈಓವರ್ ರೋಡ್ ಮುಚ್ಚಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಬೆಂಗಳೂರು [ಜು.13]: ವಾಹನ ದಟ್ಟಣೆಯ ಜಯದೇವ ಮೇಲ್ಸೇತುವೆ ಜಂಕ್ಷನ್ ಸಮೀಪ 2ನೇ ಹಂತದ ಮೆಟ್ರೋ ರೀಚ್-5 (ಆರ್.ವಿ.ರಸ್ತೆ- ಬೊಮ್ಮಸಂದ್ರ) ಮಾರ್ಗ ನಿರ್ಮಾಣ ಕಾರ್ಯ ಮತ್ತು ರೀಚ್-6(ಗೊಟ್ಟಿಗೆರೆ- ನಾಗವಾರ) ಮಾರ್ಗದ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಜುಲೈ 15ರಿಂದ ಬನ್ನೇರುಘಟ್ಟದಿಂದ ಕೇಂದ್ರ ಸಿಲ್ಕ್ ಬೋರ್ಡ್ ಕಡೆಗೆ ಸಂಚರಿಸುವ ಫ್ಲೈಓವರ್ ರೋಡ್ ಮುಚ್ಚಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಇದೇ ವೇಳೆ ಈ ಮಾರ್ಗದ ‘ಲೂಪ್’ನ್ನು ತೆರವುಗೊಳಿಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.
ಅಲ್ಲದೇ ಈ ಮಾರ್ಗದಲ್ಲಿ ಕಟ್ಟಡ ತೆರವು ಕಾರ್ಯಾಚರಣೆಯೂ ನಡೆಯಲಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ಸರ್ವೀಸ್ ರಸ್ತೆಯನ್ನು ಕೂಡ ಮುಚ್ಚಲು ತೀರ್ಮಾನಿಸಲಾಗಿದ್ದು, ವಾಹನ ಸವಾರರಿಗೆ ಅನುಕೂಲವಾಗುವಂತೆ ಮಾರ್ಗವನ್ನು ಬದಲಿಸಲಾಗಿದೆ. ಆದರೆ ಸುತ್ತಮುತ್ತಲ ಪ್ರದೇಶದಲ್ಲಿ ಇರುವ ನಿವಾಸಿಗಳಿಗೆ ಸಂಚರಿಸಲು ಸರ್ವೀಸ್ ರಸ್ತೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲೆ ಹೆಚ್ಚು ದಟ್ಟಣೆಯ ಸಿಲ್ಕ್ ಬೋರ್ಡ್ ಜಂಕ್ಷನ್ ಟ್ರಾಫಿಕ್‌ಗೆ ಮುಕ್ತಿ!
ಮಾರ್ಗ ಬದಲು: ಜೆ.ಡಿ.ಮರ ಜಂಕ್ಷನ್ ಆಥವಾ 9ನೇ ಅಡ್ಡ ರಸ್ತೆಯಲ್ಲಿ ಎಡಕ್ಕೆ ತಿರುಗಿ, ಈಸ್ಟ್ ಎಂಡ್ ಮುಖ್ಯ ರಸ್ತೆಗೆ ತಲುಪಬಹುದು. ಬಳಿಕೆ ಮಾರೇನಹಳ್ಳಿ ಮುಖ್ಯ ರಸ್ತೆಯ ಮೂಲಕ ಕೇಂದ್ರ ಸಿಲ್ಕ್ ಬೋರ್ಡ್ ತಲುಪಲು ಅವಕಾಶ ನೀಡಲಾಗಿದೆ. ಇಲ್ಲವೇ ವಾಹನ ಸವಾರರು ಬನ್ನೇರುಘಟ್ಟರಸ್ತೆಯಿಂದ 6ನೇ ಅಡ್ಡರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ 29ನೇ ಮುಖ್ಯ ರಸ್ತೆಯ ಮೂಲಕ ಹಾದು 6ನೇ ಮುಖ್ಯರಸ್ತೆಗೆ ಎಡಕ್ಕೆ ತಿರುಗಿ ಮಾರೇನಹಳ್ಳಿ ಮುಖ್ಯ ರಸ್ತೆಯ ಮೂಲಕ ಕೇಂದ್ರ ಸಿಲ್ಕ್ ಬೋರ್ಡ್ ತಲುಪಬಹುದಾಗಿದೆ.
ಕೇಂದ್ರ ಸಿಲ್ಕ್ ಬೋರ್ಡ್‌ನಿಂದ ಬನ್ನೇರುಘಟ್ಟರಸ್ತೆಗೆ ತಲುಪಲು ಮಾರೇನಹಳ್ಳಿ ಮುಖ್ಯರಸ್ತೆಯಿಂದ 29ನೇ ಮುಖ್ಯ ರಸ್ತೆಗೆ ಎಡಕ್ಕೆ ತಿರುಗಿ, 7ನೇ ಅಡ್ಡರಸ್ತೆಯಿಂದ ಬನ್ನೇರುಘಟ್ಟರಸ್ತೆ ಸೇರಬಹುದು. ಜಯದೇವ ಅಂಡರ್‌ಪಾಸ್‌ನ ಎರಡೂ ಬದಿಗಳ ಸಂಚಾರ ಚಾಲನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ವಾಹನ ಸವಾರರು ಯಾವುದೇ ಅಡಚಣೆ ಇಲ್ಲದೇ ಬನಶಂಕರಿಯಿಂದ ಕೇಂದ್ರ ಸಿಲ್ಕ್ ಬೋರ್ಡ್ ಕಡೆಗೆ ಇರುವ ಜಯದೇವ ಮೇಲ್ಸೇತುವೆ ಮೇಲೆ ಸುಗಮವಾಗಿ ಸಂಚರಿಸಬಹುದಾಗಿದೆ.
