ಬೆಂಗಳೂರು [ಜು.13] :  ನಗರದಲ್ಲೇ ಅತ್ಯಂತ ಹೆಚ್ಚು ವಾಹನ ದಟ್ಟಣೆಯ ಜಂಕ್ಷನ್‌ ಎನಿಸಿರುವ ಸಿಲ್ಕ್ ಬೋರ್ಡ್‌ ಜಂಕ್ಷನ್‌ ಅನ್ನು ಈ ಕುಖ್ಯಾತಿಯಿಂದ ಹೊರತರಲು ಬಿಎಂಆರ್‌ಸಿಎಲ್‌ 134 ಕೋಟಿ ರು.ಗಳ ಮಹಾತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲು ಮುಂದಾಗಿದೆ. ಅದು ಕೇಂದ್ರ ಸಿಲ್ಕ್ ಬೋರ್ಡ್‌ ಜಂಕ್ಷನ್‌ ಅನ್ನು ಸಿಗ್ನಲ್‌ ಫ್ರೀ ಮಾಡಲು ಮೆಟ್ರೋ ರೈಲು ಮಾರ್ಗ ಮತ್ತು ರಸ್ತೆ ಮೇಲ್ಸೇತುವೆ ನಿರ್ಮಾಣ.

ಶೀಘ್ರವೇ ಆರಂಭವಾಗಲಿರುವ ಈ ಯೋಜನೆ ಯಶಸ್ವಿಯಾದರೆ ಈ ಭಾಗದಲ್ಲಿ ವಾಹನ ಸಂಚಾರ ಸುಗಮಗೊಳ್ಳಲಿದೆ ಎನ್ನುತ್ತದೆ ಬಿಎಂಆರ್‌ಸಿಎಲ್‌. ಆದರೆ, ಸುಮಾರು 36 ತಿಂಗಳು ನಡೆಯಲಿದೆ ಎಂದು ಅಂದಾಜಿಸಲಾಗಿರುವ ಈ ಯೋಜನೆಯ ಕಾಮಗಾರಿ ಅವಧಿಯಲ್ಲಿ ಮಾತ್ರ ಈ ಭಾಗದ ವಾಹನ ಚಾಲಕರು ಅಕ್ಷರಶಃ ನಲುಗಬೇಕಿದೆ.

ಬಿಎಂಆರ್‌ಸಿಎಲ್‌ ಈ ಯೋಜನೆಗಾಗಿ ಈಗಾಗಲೇ ಟೆಂಡರ್‌ ಕೂಡ ನೀಡಲಾಗಿದೆ. ಶೀಘ್ರವೇ ಕಾಮಗಾರಿಯೂ ಆರಂಭಗೊಳ್ಳಲಿದೆ. ರೆನಾಟಸ್‌ ಪ್ರಾಜೆಕ್ಟ್ಸ್ ಪ್ರೈ.ಲಿಮಿಟೆಡ್‌ ಕಂಪನಿ ಗುತ್ತಿಗೆ ಪಡೆದಿದ್ದು, ಕೇಂದ್ರ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿ ಸುಮಾರು 134 ಕೋಟಿ ರು. ವೆಚ್ಚದಲ್ಲಿ 2.8 ಕಿ.ಮೀ ಉದ್ದದ ಮೇಲ್ಸೇತುವೆ, ರಸ್ತೆ ಅಗಲೀಕರಣ ಮತ್ತು ಮೆಟ್ರೋ ರೀಚ್‌-5(ಆರ್‌.ವಿ.ರಸ್ತೆ- ಬೊಮ್ಮಸಂದ್ರ) ಯೋಜನೆ ಕಾಮಗಾರಿ ಕೈಗೊಳ್ಳಲಿದೆ.

ಬಿಎಂಆರ್‌ಸಿಎಲ್‌ ಯೋಜನೆ ಪ್ರಕಾರ ನಿರ್ಮಾಣಗೊಳ್ಳಲಿರುವ ರಸ್ತೆ ಮೇಲ್ಸೇತುವೆಯು ಸಿಗ್ನಲ್‌ಫ್ರೀ ಇರಲಿದೆ. ಇದರಿಂದ ಹೆಚ್ಚು ದಟ್ಟಣೆ ಪ್ರದೇಶವಾದ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿ ಯೋಜನೆ ಪೂರ್ಣಗೊಂಡ ಬಳಿಕ ವಾಹನ ದಟ್ಟಣೆ ಕಡಿಮೆ ಆಗಲಿದೆ. ಈ ಮೇಲ್ಸೇತುವೆಯು ಭೂಮಿ ಮಟ್ಟದಿಂದ ಎಂಟು ಮೀಟರ್‌ ಎತ್ತರದಲ್ಲಿ ಮತ್ತು ಮೆಟ್ರೋ ರೈಲು ಮಾರ್ಗದ ಲೇನ್‌ 16 ಮೀಟರ್‌ ಎತ್ತರದಲ್ಲಿ ಇರಲಿದೆ ಎಂದು ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚತುಷ್ಪಥ ಮೇಲ್ಸೇತುವೆ ರಸ್ತೆಯು 20 ಮೀಟರ್‌ ಅಗಲ ಇರಲಿದ್ದು, ಎಲೆಕ್ಟ್ರಾನಿಕ್‌ ಸಿಟಿ, ಬಿಟಿಎಂ ಲೇಔಟ್‌ ಮತ್ತು ಎಚ್‌ಎಸ್‌ಆರ್‌ ಲೇಔಟ್‌ ಕಡೆಗೆ ಹೋಗಲು ಮಾರ್ಗ ಕಲ್ಪಿಸಲಾಗುವುದು. ಇದರಿಂದಾಗಿ ವಾಹನ ಸವಾರರು ಸುಲಭವಾಗಿ ಕೇಂದ್ರ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್‌ ಸಿಟಿ, ಬಿಟಿಎಂ ಲೇಔಟ್‌, ಮಾರತ್ತಹಳ್ಳಿ ಮತ್ತು ಎಚ್‌ಎಚ್‌ಆರ್‌ ಲೇಔಟ್‌ ಕಡೆಗೆ ಸಂಚರಿಸಲು ಅನುಕೂಲವಾಗಲಿದೆ. ಆರ್‌.ವಿ.ರಸ್ತೆ- ಬೊಮ್ಮನಹಳ್ಳಿ ಮತ್ತು ಸಿಲ್ಕ್ ಬೋರ್ಡ್‌- ಕೆ.ಆರ್‌.ಪುರಂ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ಎರಡು ಮೆಟ್ರೋ ಲೇನ್‌ಗಳು ಇದೇ ಜಂಕ್ಷನ್‌ (ಇಂಟರ್‌ ಚೇಂಜ್‌) ಮೂಲಕ ಹಾದುಹೋಗಲಿವೆ.

ಓಲಾ ಸಂಸ್ಥೆ ನಡೆಸಿರುವ ಸಮೀಕ್ಷೆಯೊಂದರಲ್ಲಿ ದೇಶದ ಏಳು ಅತ್ಯಂತ ಕುಖ್ಯಾತ ವಾಹನ ದಟ್ಟಣೆಯ ಕೇಂದ್ರಗಳಲ್ಲಿ ಕೇಂದ್ರ ಸಿಲ್ಕ್ ಬೋರ್ಡ್‌ ಜಂಕ್ಷನ್‌ ಕೂಡ ಒಂದು ಎನ್ನಲಾಗಿದೆ. ಈ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಇರುವುದರಿಂದ ಅತ್ಯಂತ ನಿಧಾನವಾಗಿ ವಾಹನಗಳು ಸಂಚರಿಸುತ್ತವೆ. ಜತೆಗೆ ಆಗಾಗ ವಾಹನ ದಟ್ಟಣೆಯಿಂದ ಟ್ರಾಫಿಕ್‌ ಜಾಮ್‌ ಉಂಟಾಗುವುದು ಇಲ್ಲಿ ಸಾಮಾನ್ಯ ಎಂಬುದು ವಾಹನ ಸವಾರರ ಆರೋಪವಾಗಿದೆ. ರಸ್ತೆ ಮೇಲ್ಸೇತುವೆ ಮತ್ತು ಮೆಟ್ರೋ ರೈಲು ಮಾರ್ಗ ನಿರ್ಮಾಣದಿಂದ ವಾಹನ ದಟ್ಟಣೆ ಕಡಿಮೆಯಾಗಲಿದ್ದು, ವಾಹನ ಸಂಚಾರ ಸುಗಮಗೊಳ್ಳಲಿದೆ ಎಂದು ಮೆಟ್ರೋ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

 2 ವರ್ಷ ಹಿಂದೆಯೇ ಶುರು ಆಗಬೇಕಿತ್ತು

2017ರಲ್ಲಿಯೇ ರಾಜ್ಯ ಸರ್ಕಾರ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿ ಫ್ಲೈಓವರ್‌ ನಿರ್ಮಾಣದ ನೀಲನಕ್ಷೆ ಬಿಡುಗಡೆ ಮಾಡಿತ್ತು. 2020ಕ್ಕೆ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಅದಕ್ಕಾಗಿ ಬಿಎಂಆರ್‌ಸಿಎಲ್‌ ಟೆಂಡರ್‌ ನೀಡಿತ್ತು. ಆದರೆ, ಗುತ್ತಿಗೆ ಪಡೆದ ಎರಡು ಖಾಸಗಿ ಕಂಪನಿಗಳು ಕಾಮಗಾರಿಗೆ ಮುಂದಾಗಲೇ ಇಲ್ಲ. ಇದೀಗ ಮೆಟ್ರೋ ನಿಗಮವು ರಾಗಿಗುಡ್ಡ- ಸಿಲ್ಕ್ ಬೋರ್ಡ್‌ ನಡುವೆ ಮೆಟ್ರೋ ರೈಲು ಮಾರ್ಗ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದೆ.