ಶಿರಾ ಕ್ಷೇತ್ರಕ್ಕೆ ವಿಶೇಷ ಅನುದಾನಕ್ಕಾಗಿ ಜಯಚಂದ್ರ ಮನವಿ
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಮತ್ತು ಕುಡಿಯುವ ನೀರು ಯೋಜನೆಗೆ ಹಾಗೂ ನರೇಗಾ ಯೋಜನೆಯಡಿ ಹೆಚ್ಚು ಕೆಲಸ ಮಾಡಲು ವಿಶೇಷ ಅನುದಾನ ನೀಡುವಂತೆ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ನವದೆಹಲಿ : ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಮತ್ತು ಕುಡಿಯುವ ನೀರು ಯೋಜನೆಗೆ ಹಾಗೂ ನರೇಗಾ ಯೋಜನೆಯಡಿ ಹೆಚ್ಚು ಕೆಲಸ ಮಾಡಲು ವಿಶೇಷ ಅನುದಾನ ನೀಡುವಂತೆ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಿರಾ ವಿಧಾನ ಸಭಾ ಕ್ಷೇತ್ರವನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿವೆ. ಬಹಳ ಹಿಂದುಳಿದ ವಿಧಾನಸಭಾ ಕ್ಷೇತ್ರವಾಗಿರುವ ಇಲ್ಲಿ ವಾರ್ಷಿಕವಾಗಿ ಸರಾಸರಿ 419 ರಿಂದ 723 ಮಿಲಿ ಮೀಟರ್ ಮಳೆ ಆಗುತ್ತಿದೆ . ಹೀಗಾಗಿ, ಈ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಜೀವನ ನಿರ್ವಹಿಸುವುದು ಕಷ್ಟವಾಗಿದೆ. ಕೆರೆ ಕುಂಟೆ ಒಣಗಿದ್ದು ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ವಿಶೇಷ ಯೋಜನೆಯಡಿ ಕುಡಿಯುವ ನೀರು ಒದಗಿಸಲು ಅನುದಾನ ನೀಡಬೇಕು. ಅಷ್ಟೇ ಅಲ್ಲ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಹಳ್ಳಿಯಿಂದ ಹೋಬಳಿ ಸಂಪರ್ಕಿಸುವ ಹಾಗೂ ಹೋಬಳಿಗಳಿಂದ ತಾಲೂಕು ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆಗಳು ಹದಗೆಟ್ಟಿವೆ. ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕನಿಷ್ಠ 200 ಕೋಟಿ ಹಣ ಒದಗಿಸಬೇಕೆಂದು ಇದೇ ವೇಳೆ ಜಯಚಂದ್ರ ಅವರು ಮನವಿ ಮಾಡಿದ್ದಾರೆ .
ಕೇಂದ್ರ ಸಚಿವರು ತಮ್ಮ ಎಲ್ಲಾ ಪ್ರಸ್ತಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಹಂತ ಹಂತವಾಗಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಜಯಚಂದ್ರ ಅವರು ತಿಳಿಸಿದ್ದಾರೆ.
ಶಿರಾದಲ್ಲಿ ಸಂಪೂರ್ಣ ಬೆಳೆ ವಿಪಲ
ಶಿರಾ: ಶಿರಾ ತಾಲೂಕಿನಲ್ಲಿ ರೈತರು ಬಿತ್ತಿದ್ದ ಬೆಳೆ ಸಂಪೂರ್ಣ ವಿಫಲವಾಗಿದ್ದು, ಹೆಚ್ಚಿನ ಬರ ಪರಿಹಾರವನ್ನು ರೈತರಿಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಒತ್ತಾಯಿಸಿದರು.
ಗುಳಿಗೇನಹಳ್ಳಿ, ನ್ಯಾಯಗೆರೆ, ಬೋರಸಂದ್ರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಕೇಂದ್ರ ಬರ ಅದ್ಯಯನ ತಂಡ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ರೈತರ ಜೊತೆಗಿದ್ದು, ಸ್ಥಳ ವೀಕ್ಷಣೆಗೆ ಬಂದ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳಿಗೆ ರೈತರು ಅನುಭವಿಸುತ್ತಿರುವ ಕಷ್ಟ ಹಾಗೂ ಬಿತ್ತಿರುವ ಬೆಳೆಗೆ ಆಗಿರುವಾಗ ನಷ್ಟ ಕುರಿತು ಮನವರಿಕೆ ಮಾಡಿದರು.
ಸತತ ಮಳೆ ವೈಫಲ್ಯದಿಂದ ರೈತರು ಸಂಕಷ್ಟದಲ್ಲಿದ್ದು, ಕಳೆದ ಒಂದೂವರೆ ತಿಂಗಳ ಹಿಂದೆ ತಾಲೂಕಿನ ಹಲವಾರು ಗ್ರಾಮಗಳ ರೈತರ ಜಮೀನುಗಳಿಗೆ ತಾವೇ ಖುದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ. ರೈತರ ವಾಸ್ತವ ಅರಿತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆದ್ದರಿಂದ, ಬರ ವರದಿಯನ್ನು ಶೀಘ್ರ ಸಲ್ಲಿಸಿ ಪರಿಹಾರ ಘೋಷಿಸುವುದರ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದರು.
ಕೇಂದ್ರದ ಅಶೋಕ್ ಕುಮಾರ್, ಕಿರಣ್ ಚೌದ್ರಿ, ಕಿರಣ್ ಕುಮಾರ್, ಜಿಲ್ಲಾಧಿಕಾರಿಗಳಾದ ಶ್ರೀನಿವಾಸ್, ಜಿ.ಪಂ. ಸಿಇಓ ಪ್ರಭು, ಉಪ ವಿಭಾಗಧಿಕಾರಿ, ರಿಷಿ ಆನಂದ್, ತಹಸೀಲ್ದಾರ್ ಮುರುಳೀಧರ, ಕೃಷಿ ಅಧಿಕಾರಿಗಳು ಇದ್ದರು.
ಬರಪೀಡಿತ ತಾಲೂಕು ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ
ಕೊರಟಗೆರೆ: ತುಮಕೂರನ್ನು ಬರ ಪೀಡಿತ ಜಿಲ್ಲೆ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕು ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ ತಾಲೂಕಿನ ಬೈರೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿತು.
ಕೇಂದ್ರದಿಂದ ಆಗಮಿಸಿರುವ ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಆಶೋಕ್‌ಕುಮಾರ್, ಎಂಎನ್‌ಸಿಎಫ್‌ಸಿಯು ಉಪನಿರ್ದೇಶಕ ಕರಣ್‌ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್‌ಕುಮಾರ್, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ.ಶ್ರೀನಿವಾಸರೆಡ್ಡಿ ಅವರನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ. ಸಿಇಒ ಪ್ರಭು ಅವರನ್ನು ಸ್ವಾಗತಿಸಿದರು.