ಮಂಗಳೂರು[ಜ.08]: ‘ಪ್ರೊ.ಭಗವಾನ್‌ ಅವರು ದೊಡ್ಡ ದುರಂತ. ಶ್ರೀರಾಮನ ಬಗ್ಗೆ ಮಾತನಾಡಲು ಶ್ರೀರಾಮ ಇದ್ದಾಗ ಭಗವಾನ್‌ ಇದ್ದರೇ? ಶ್ರೀರಾಮ ಮಾಂಸ ತಿನ್ನುವುದನ್ನು ಭಗವಾನ್‌ ನೋಡಿದ್ದಾರೆಯೇ? ಆಗ ಭಗವಾನ್‌ ಹುಟ್ಟಿದ್ದರೇ? ನಾಲಗೆ ಇದೆ ಎಂದು ಏನೇನೋ ಮಾತನಾಡುವುದಲ್ಲ.’

-ಶ್ರೀರಾಮನ ಬಗ್ಗೆ ಚಿಂತಕ ಪ್ರೊ.ಭಗವಾನ್‌ ನೀಡಿರುವ ಹೇಳಿಕೆ ಬಗ್ಗೆ ಹಿರಿಯ ಕಾಂಗ್ರೆಸಿಗ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ.

ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶ್ರೀರಾಮನನ್ನು ಹಿಂದೂ ದೇವರು ಎಂದು ನಂಬುತ್ತೇನೆ. ಪೈಗಂಬರ್‌, ಏಸು ಅವರನ್ನೂ ದೇವರು ಎಂದು ನಂಬುತ್ತೇನೆ. ಭಗವಾನ್‌ ಅವರು ನಂಬಿದರೆ ನಂಬಲಿ, ಬಿಟ್ಟರೆ ಬಿಡಲಿ. ಆದರೆ ಏನೆಲ್ಲಾ ಮಾತನಾಡುವುದು ಬೇಡ ಎಂದರು.

ಈ ರೀತಿ ಮಾತನಾಡಿ ಗಲಾಟೆ ಮಾಡುವ ಉದ್ದೇಶವೇ? ಇದರಿಂದ ಊರಿಗೆ ಏನಾದರೂ ಪ್ರಯೋಜನವಾಯಿತೇ? ಹಿಂಸೆ ನಡೆದರೆ ಕುಟುಂಬಗಳಿಗೆ ಹಾನಿಯಾಗುವುದಷ್ಟೆಎಂದು ಹೇಳಿದರು.

ಇದೇವೇಳೆ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅವರು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೆರಡನ್ನೂ ತರಾಟೆಗೆ ತೆಗೆದುಕೊಂಡರು. ಮಹಿಳೆಯರು ದೇವಸ್ಥಾನ ಪ್ರವೇಶ ಮಾಡಬಾರದು ಎನ್ನುವುದು ರಾಜಕೀಯ ಪ್ರೇರಿತವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನವರು ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಎಲ್ಲ ಮಹಿಳೆಯರು ದೇವಸ್ಥಾನ ಪ್ರವೇಶ ಮಾಡುವಂತಾಗಲು ಕೇರಳ ಸಿಎಂ ಧೈರ್ಯ ತೋರಿಸಲಿ ಮತ್ತು ವಿರೋಧಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಕಣಕ್ಕಿಳಿಯಲು ಸಿದ್ಧ:

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್‌ ಟಿಕೆಟ್‌ ನೀಡಿದರೆ ಮತ್ತೆ ದ.ಕ. ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧವಿರುವುದಾಗಿ ಜನಾರ್ದನ ಪೂಜಾರಿ ಪುನರುಚ್ಚರಿಸಿದರು. ನನಗೇನು ವಯಸ್ಸಾಗಿಲ್ಲ. ವಯಸ್ಸಾಗಿ ಅಶಕ್ತನಾಗಿದ್ದರೆ ನಾನು ಮಂಗಳೂರಿಗೆ ಬಂದು, ಇಷ್ಟುಹೊತ್ತು ಇರುತ್ತೇನೆಯೇ ಎಂದು ಮರು ಪ್ರಶ್ನಿಸಿದ ಜನಾರ್ದನ ಪೂಜಾರಿ, ಟಿಕೆಟ್‌ಗಾಗಿ ದೆಹಲಿಗೆ ಹೋಗುತ್ತೇನೆ. ಅಲ್ಲಿ ಹೈಕಮಾಂಡ್‌ನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದರು.