ಮಯೂರ ಹೆಗಡೆ

ಹುಬ್ಬಳ್ಳಿ(ಏ.27): ಲಾಕ್‌ಡೌನ್‌ ಕಾರಣದಿಂದಾಗಿ ನಗರದಲ್ಲಿ ಸಿಲುಕಿರುವ ಅನ್ಯ ರಾಜ್ಯಗಳ ನಿವಾಸಿಗಳು ಇಂದಿಗೂ ಆಹಾರಕ್ಕಾಗಿ ಪರದಾಡುವ ಸ್ಥಿತಿಯಿದೆ. ಹೀಗೆ ಸಮಸ್ಯೆಯಲ್ಲಿ ಸಿಲುಕಿದವರು ಸಾಮಾಜಿಕ ಜಾಲತಾಣದ ಮೂಲಕ ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ.

ಜಮ್ಮುವಿನ ಕಟುವಾ ಜಿಲ್ಲೆಯಿಂದ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ಹಮಾಲಿ ಕೆಲಸಕ್ಕಾಗಿ ಬಂದವರು ಇಲ್ಲಿನ ಗೋಕುಲ ರಸ್ತೆಯ ಬಳಿಯ ವಿಕಾಸ ನಗರದಲ್ಲಿ ಸಿಲುಕಿದ್ದಾರೆ. ಅಲ್ಲದೆ ಕೈಯಲ್ಲಿರುವ ಹಣವೆಲ್ಲ ಖಾಲಿಯಾಗಿ ಏನನ್ನೂ ಖರೀದಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದಾರೆ.

ಲಾಕ್‌ಡೌನ್‌ ಮಧ್ಯೆ ನೈರುತ್ಯ ರೈಲ್ವೆಯಿಂದ ಪಾರ್ಸಲ್‌ ರೈಲು ಸೇವೆ ಆರಂಭ

ಕಂಪನಿಯ ಟ್ರಾನ್ಸ್‌ಪೋರ್ಟ್‌ ಕಟ್ಟಡದಲ್ಲಿ ವಸತಿ ಇರುವ ಇವರಿಗೆ ಊಟವಾಗಲಿ, ದಿನಸಿಯಾಗಲಿ ಸಿಗುತ್ತಿಲ್ಲ. ಇನ್ನು ಕಂಪನಿಯ ಸಿಬ್ಬಂದಿ, ಮುಖ್ಯಸ್ಥರು ಕೂಡ ಸಹಾಯ ಮಾಡಲಾಗದೆ ಕೈಚೆಲ್ಲಿದ್ದಾರೆ. ಹೀಗಾಗಿ ಒಪ್ಪತ್ತಿನ ಊಟಕ್ಕೆ ಪರಿತಪಿಸುವಂತಾಗಿದೆ. ಅಕ್ಕಪಕ್ಕದವರ ಬಳಿ ನೆರವು ಕೇಳಿಕೊಂಡು ದಿನ ದೂಡುತ್ತಿದ್ದಾರೆ. ಇವರ ಪರಿಸ್ಥಿತಿ ಕಂಡ ಸ್ಥಳೀಯ ನಿವಾಸಿಯೊಬ್ಬರು ಟ್ವಿಟ್ಟರ್‌ ಮೂಲಕ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ.

ಎರಡು ಟ್ರಾಸ್ಸ್‌ಪೋರ್ಟ್‌ ಸಂಸ್ಥೆ ಸೇರಿದಂತೆ ಒಟ್ಟಾರೆ 30 ಜನರಿದ್ದೇವೆ. ವಿಕಾಸ ನಗರದ ಪೆಟ್ರೋಲ್‌ ಬಂಕ್‌ ಬಳಿ 14 ಜನರು ಒಟ್ಟಾಗಿ ನೆಲೆಸಿದ್ದೇವೆ. ಉಳಿದವರು ಅನತಿ ದೂರದಲ್ಲಿದ್ದಾರೆ. ಫೆ. 17ಕ್ಕೆ ನಾವು ಹುಬ್ಬಳ್ಳಿಗೆ ಬಂದು ವಾಪಸ್‌ ಜಮ್ಮುವಿಗೆ ತರಳಲಾಗದೆ ಸಮಸ್ಯೆಯಲ್ಲಿ ಸಿಲುಕಿದ್ದೇವೆ. ಫೆ. 22ರಂದು ವಾಪಸ್‌ ಹೋಗಬೇಕಿತ್ತು. ಆದರೆ ಅಂದು ಜನತಾ ಕರ್ಫ್ಯೂ ಜಾರಿಯಾಯಿತು. ಬಳಿಕ ಎರಡು ಬಾರಿ ಲಾಕ್‌ಡೌನ್‌ ಜಾರಿಯಾಗಿ ಇಲ್ಲೇ ಸಿಲುಕಿದ್ದೇವೆ. ಊರಿನಲ್ಲಿ ನಮ್ಮವರು ನಮಗಾಗಿ ಕಂಗಾಲಾಗಿದ್ದಾರೆ ಎಂದು ರಾಕೇಶ ಸಿಂಗ್‌, ಶೈನಿ ಎಸ್‌. ಹೇಳುತ್ತಾರೆ.

ಆರಂಭದಲ್ಲಿ ಕೈಲಿದ್ದ ಹಣದಲ್ಲಿ ಹೇಗೋ ದಿನಸಿ ಖರೀದಿ ಮಾಡಿ ಅಡುಗೆ ಮಾಡಿಕೊಂಡು ಜೀವನ ನಡೆಸಿದೆವು. ಆದರೆ ಈಗ ಹಣ ಖಾಲಿಯಾಗಿದೆ. ಒಪ್ಪತ್ತಿನ ಅಡುಗೆ ಮಾಡಿಕೊಳ್ಳಲು ಅಕ್ಕಿ, ಬೇಳೆಯಿಲ್ಲ. ಅನಾರೋಗ್ಯ ಸಮಸ್ಯೆ ಎದುರಾದರೆ ಕಷ್ಟವಿದೆ. ಸ್ಥಳೀಯ ಆಡಳಿತ ನಮಗೆ ನೆರವಾಗಲಿ ಎಂದು ಲಬೇಲ್‌ ಚಲಂದರ್‌ ಮನವಿ ಮಾಡಿಕೊಂಡರು.

ಈಗ ಮೇ 3ಕ್ಕೆ ಲಾಕ್‌ಡೌನ್‌ ಮುಕ್ತಾಯವಾದರೂ ನಮಗೆ ಊರಿಗೆ ತೆರಳಲು ರೈಲು ಆರಂಭವಾಗುವಂತಿಲ್ಲ. ಅಲ್ಲಿವರೆಗೆ ನಮಗೆ ನೆರವು ಕಲ್ಪಿಸಿ ಎಂದು ಹುಬ್ಬಳ್ಳಿಲಿ ಸಿಲುಕಿರುವ ಜಮ್ಮು ನಿವಾಸಿ ಜಗದೇವ ಸಿಂಗ್‌ ಅವರು ಹೇಳಿದ್ದಾರೆ.