ತುಮಕೂರು ಕುಣಿಗಲ್ ರಸ್ತೆಯಲ್ಲಿರುವ ಹೇಮಾವತಿ ಕಚೇರಿಯ ಆವರಣದಲ್ಲಿನ 28 ತೇಗದ ಮರಗಳನ್ನು ಕಟಾವು ಮಾಡಲಾಗಿದೆ.

ತುಮಕೂರು (ಸೆ.27): ನಗರದ ಕುಣಿಗಲ್ ರಸ್ತೆಯಲ್ಲಿರುವ ಹೇಮಾವತಿ ಕಚೇರಿಯ ಆವರಣದಲ್ಲಿನ 28 ತೇಗದ ಮರಗಳನ್ನು ಕಟಾವು ಮಾಡಲಾಗಿದೆ. ಭಾನುವಾರ ಕಚೇರಿಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ 28 ಮರಗಳನ್ನು ಕಡಿಯಲಾಗಿದೆ.

ಇನ್ನು ಸರ್ಕಾರಿ ಕಚೇರಿ ಆವರಣದಲ್ಲಿರುವ ಮರಗಳನ್ನು ಜಲೀಲ್ ಎಂಬ ವ್ಯಕ್ತಿ ಕಡಿದಿದ್ದಾನೆ ಎನ್ನಲಾಗಿದೆ. ಭಾನುವಾರ ಮಧ್ಯಾಹ್ನದ ವೇಳೆ ನಾಲ್ಕೈದು ಜನರನ್ನು ಕರೆದುಕೊಂಡು ಲಾರಿಯಲ್ಲಿ ಬಂದ ಜಲೀಲ್ ಎಂಬ ವ್ಯಕ್ತಿ ಮರ ಕಡಿಯಲು ಪ್ರಾರಂಭಿಸಿದ್ದಾನೆ. ಇನ್ನು ಸರ್ಕಾರಿ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಊಟಕ್ಕೆ ಹೋಗಿ ಬರುವಷ್ಟರಲ್ಲಿ 25ಕ್ಕೂ ಹೆಚ್ಚು ಮರಗಳನ್ನು ಕಡಿದು ನೆಲಕ್ಕುರುಳಿಸಿದ್ದನು. ಊಟ ಮಾಡಿಕೊಂಡು ವಾಪಸ್‌ ಬಂದ್ ಭದ್ರತಾ ಸಿಬ್ಬಂದಿ ಮರ ಕಡಿಯುವುದನ್ನು ತಡೆದಿದ್ದಾನೆ. ಜೊತೆಗೆ, ಮರ ಕಡಿಯಲು ಹೇಳಿದವರು ಯಾರು ಎಂದು ಕೇಳಿದಾಗ, ತಾನು ಟೆಂಡರ್‌ನಲ್ಲಿ ಮರ ಕಡಿಯಲು ಅನುಮತಿ ಪಡೆದಿದ್ದೇನೆ ಎಂದು ಹೇಳಿದ್ದಾನೆ. ನಂತರ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದಾಗ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲವೆಂದು ತಿಳಿಸಿದ್ದಾರೆ. ನಂತರ, ಮರ ಕಡಿಯುವುದನ್ನು ತಡೆದು ಪೊಲೀಸರಿಗೆ ಕರೆ ಮಾಡುವ ಮುನ್ನವೇ ಮರ ಕಡಿಯಲು ಬಂದಿದ್ದ ಜಲೀಲ್‌ ತನ್ನ ಸಹಚರರೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.‌

ರಾಮನಗರ ಚುನಾವಣಾ ಸಿಬ್ಬಂದಿಯ ಕಾರು ಅಡ್ಡಗಟ್ಟಿ ವೋಟಿಂಗ್‌ ಮಿಷನ್‌ ಕದ್ದೊಯ್ದ ದುಷ್ಕರ್ಮಿಗಳು

ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹೇಮಾವತಿ ಕಚೇರಿ ಆವರಣದಲ್ಲಿದ್ದ 30 ತೇಗದ ಮರಗಳನ್ನು ಕಡಿಯುವಂತೆ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳು ಟೆಂಡರ್ ಕರೆಯಲು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಈ ವಿಚಾರ ತಿಳಿದ ಜಲೀಲ್ ಟೆಂಡರ್ ಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳುವ ಮೊದಲೇ ಬಂದು ಮರಗಳನ್ನು ಕಡಿದಿದ್ದಾನೆ. ಇದರಿಂದ ಅಧಿಕಾರಿಗಳು ಹಾಗೂ ಜಲೀಲ್‌ ನಡುವೆ ಹಣದ ವ್ಯವಹಾರಗಳು ನಡೆದಿವೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಬೆಂಗಳೂರು ಮೆಟ್ರೋ ಸೇವೆ ವ್ಯತ್ಯಯ: ನೇರಳೆ ಮಾರ್ಗದ ದಕ್ಷಿಣ ಭಾಗದಲ್ಲಿ ಶುಕ್ರವಾರ ಮೆಟ್ರೋ ಸಂಚಾರ ಸ್ಥಗಿತ

ಹೇಮಾವತಿ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಪ್ರಶ್ನಿಸಿದ ಬಳಿಕ ಜಲೀಲ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇತ್ತ ಅರಣ್ಯ ಅಧಿಕಾರಿಗಳು ಜಲೀಲ್ ಕಡಿದ ಮರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಜಲೀಲ್ ವಿರುದ್ಧ ಎಫ್.ಐಆರ್ ಕೂಡ ದಾಖಲಿಸಿದ್ದಾರೆ. ಸುಮಾರು 5 ಲಕ್ಷ ಮೌಲ್ಯದ ಮರಗಳು ಕಡಿಯಲಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದಲ್ಲೇ ಮರ ಕಡಿಯಲಾಗಿದೆ ಎಂಬ ಅನುಮಾನ ಶುರುವಾಗಿದೆ.