Asianet Suvarna News Asianet Suvarna News

ಹಸಿರುಮಕ್ಕಿ ಸೇತುವೆ ವಿಳಂಬ ಮಾಡುವುದು ಸರಿಯಲ್ಲ; ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕಾಗೋಡು ತಿಮ್ಮಪ್ಪ

 ಹಸಿರುಮಕ್ಕಿಯಲ್ಲಿ ನಿರ್ಮಾಣಗೊಳ್ಳುತ್ತಿರುವುದು ಕೇವಲ ಸೇತುವೆಯಲ್ಲ. ಸಂತ್ರಸ್ಥರ ಬದುಕಿನ ಸಂಪರ್ಕ ಜೀವನಾಡಿ. ಈ ಸೇತುವೆಯ ಕಾಮಗಾರಿ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

It is not right to delay hasirumakki Bridge says Kagodu Thimmappa rav
Author
First Published Sep 28, 2022, 9:18 AM IST

ಹೊಸನಗರ (ಸೆ.28) : ಹಸಿರುಮಕ್ಕಿಯಲ್ಲಿ ನಿರ್ಮಾಣಗೊಳ್ಳುತ್ತಿರುವುದು ಕೇವಲ ಸೇತುವೆಯಲ್ಲ. ಸಂತ್ರಸ್ಥರ ಬದುಕಿನ ಸಂಪರ್ಕ ಜೀವನಾಡಿ. ಈ ಸೇತುವೆಯ ಕಾಮಗಾರಿ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಕೊಡಚಾದ್ರಿ ಬೆಟ್ಟದಲ್ಲಿ ಯೆಲ್ಲೋ ಬೋರ್ಡ್, ವೈಟ್ ಬೋರ್ಡ್ ಜಟಾಪಟಿ

ನಿಟ್ಟೂರು ಗ್ರಾಪಂ ವ್ಯಾಪ್ತಿಯ ಹಸಿರುಮಕ್ಕಿ ಹಿನ್ನೀರು ತೀರದಲ್ಲಿ ನಿಟ್ಟೂರು ಕಾಂಗ್ರೆಸ್‌ ಘಟಕ ಹಮ್ಮಿಕೊಂಡಿದ್ದ ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಸಿರುಮಕ್ಕಿ ಸೇತುವೆ ಮಂಜೂರು ಮಾಡಿಸುವಲ್ಲಿ ಸಾಕಷ್ಟುಶ್ರಮ ಹಾಕಿದ್ದೆ. ಸೇತುವೆ ಕಾಮಗಾರಿ ಆರಂಭವಾಗಿದೆ. ಬೃಹತ್‌ ಯಂತ್ರಗಳುು ಬಂದಿವೆ. ಆದರೆ ಕಾಮಗಾರಿ ಸ್ಥಗಿತಗೊಂಡಿದೆ. ಇದಕ್ಕೆ ಏನೆನ್ನಬೇಕೋ ಗೊತ್ತಿಲ್ಲ. ಮೊದಲು ಲಾಂಚ್‌ ತರಲಾಯಿತು. ಆಮೇಲೆ ಲಾಂಚ್‌ ಸಂಖ್ಯೆ ಹೆಚ್ಚಿಸಲಾಯಿತು. ಆದರೂ ಗೋಳು ಮುಗಿದಿಲ್ಲ. ಸೇತುವೆ ನಿರ್ಮಾಣಕ್ಕೂ ಚಾಲನೆ ನೀಡಲಾಯಿತು. ಆದರೆ ಈಗ ನೋಡಿದರೆ ಯಾವತ್ತು ಸೇತುವೆ ಪೂರ್ಣಗೊಳ್ಳುತ್ತದೋ ಎಂಬ ಆತಂಕ ಶುರುವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸೇತುವೆ ವಿಳಂಬಕ್ಕೆ ಶಾಸಕ ಹಾಲಪ್ಪ ಕಾರಣ:

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ನಾಲ್ಕೂವರೆ ವರ್ಷ ಕಳೆದರೂ ಕಾಮಗಾರಿ ಕಡೆ ಗಮನಹರಿಸದ ಶಾಸಕ ಹರತಾಳು ಹಾಲಪ್ಪ ಈಗ ಬಂದು ತಾಂತ್ರಿಕ ಕಾರಣ ಎನ್ನುತ್ತಾರೆ. ಆದರೆ ಕಾಮಗಾರಿ ವಿಳಂಬಕ್ಕೆ ಅವರೇ ಕಾರಣ ಎಂದು ವಾಗ್ದಾಳಿ ನಡೆಸಿದರು. ಹೊಳೆಬಾಗಿಲು ಸೇತುವೆ ನಿರ್ಮಾಣ ಸ್ಥಳಕ್ಕೆ ತಿಂಗಳಿಗೆ ಮೂರ್ನಾಲ್ಕು ಸಲ ಬಂದು ಹೋಗುತ್ತಾರೆ. ಸಂಸದರನ್ನು ಅಧಿಕಾರಿಗಳನ್ನು ಕರೆತಂದು ಫೋಟೋ ಹೊಡೆಸಿಕೊಳ್ತಾರೆ. ಆದರೆ ಹಸಿರುಮಕ್ಕಿ ಸೇತುವೆ ಮೇಲೆ ಯಾಕೆ ನಿರ್ಲಕ್ಷ ಎಂದು ಪ್ರಶ್ನಿಸಿದರು.

7ಕಿ.ಮೀ. ಪಾದಯಾತ್ರೆಯಲ್ಲಿ ಕಾಗೋಡು ಹೆಜ್ಜೆ:

ಕೆ.ಬಿ.ಸರ್ಕಲ್‌ನಿಂದ ಹಸಿರುಮಕ್ಕಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲಾಯಿತು. 93 ವರ್ಷದ ಹಿರಿಯ ಕಾಗೋಡು ತಿಮ್ಮಪ್ಪ ಕೂಡ ಕೆಲಹೊತ್ತು ಪಾದಯಾತ್ರೆ ನಡೆಸಿ ಗಮನ ಸೆಳೆದರು. ಪಾದಯಾತ್ರೆ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ, ರಾಜನಂದಿನಿ, ಕಲಗೋಡು ರತ್ನಾಕರ್‌, ಮಲ್ಲಿಕಾರ್ಜುನ್‌ ಹಕ್ರೆ, ತೀನಾ ಶ್ರೀನಿವಾಸ್‌ ಮಾತನಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಐದು ವರ್ಷ ಪಿಎಫ್​ಐ ಬ್ಯಾನ್: ನಿಷೇಧ ಕ್ರಮವನ್ನು ಸ್ವಾಗತಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ನಿಟ್ಟೂರು ಕಾಂಗ್ರೆಸ್‌ ಅಧ್ಯಕ್ಷ ನಾಗೇಂದ್ರ ಜೋಗಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ.ನಾಗರಾಜ್‌, ನಗರ ಹೋಬಳಿ ಕಾಂಗ್ರೆಸ್‌ ಅಧ್ಯಕ್ಷ ಕರುಣಾಕರಶೆಟ್ಟಿ, ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆಸುಬ್ರಹ್ಮಣ್ಯ, ಅಮ್ರಪಾಲಿ ಸುರೇಶ್‌, ಬಂಡಿ ರಾಮಚಂದ್ರ, ಗುರುಶಕ್ತಿ ವಿದ್ಯಾಧರ್‌, ಹಾಲಗದ್ದೆ ಉಮೇಶ್‌, ಆದರ್ಶ ಹುಂಚದ ಕಟ್ಟೆ, ಕೂಡ್ಲುಕೊಪ್ಪ ಸುರೇಶ್‌, ಚಂದಯ್ಯ ಜೈನ್‌, ವಿಶ್ವನಾಥ ನಾಗೋಡಿ, ಚಂದ್ರಶೇಖರ ಶೆಟ್ಟಿ, ಹೊಸನಗರ, ತೀರ್ಥಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಪ್ರಮುಖರು ಪಾಲ್ಗೊಂಡಿದ್ದರು.

Follow Us:
Download App:
  • android
  • ios