Asianet Suvarna News Asianet Suvarna News

ಬದಲಾಗುತ್ತಿರುವ ವ್ಯವಸಾಯದ ಕ್ರಮಗಳಿಗೆ ಹೊಂದಿಕೊಳ್ಳಬೇಕಿದೆ

ಬದಲಾಗುತ್ತಿರುವ ವ್ಯವಸಾಯದ ಕ್ರಮಗಳಿಗೆ ನಾವು ಹೊಂದಿಕೊಳ್ಳಬೇಕಾಗಿದೆ. ವ್ಯವಸಾಯ ಇಂದು ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಮುಂದುವರೆದಿದ್ದು, ಲಾಭದಾಯಕ ಕೃಷಿಯತ್ತ ಸಾಗುತ್ತಿದೆ ಎಂದು ಮಂಡ್ಯ ವಿ.ಸಿ. ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್. ಶಿವಕುಮಾರ್ ತಿಳಿಸಿದರು.

It has to adapt to changing farming practices snr
Author
First Published Mar 13, 2024, 10:40 AM IST

  ಮೈಸೂರು :  ಬದಲಾಗುತ್ತಿರುವ ವ್ಯವಸಾಯದ ಕ್ರಮಗಳಿಗೆ ನಾವು ಹೊಂದಿಕೊಳ್ಳಬೇಕಾಗಿದೆ. ವ್ಯವಸಾಯ ಇಂದು ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಮುಂದುವರೆದಿದ್ದು, ಲಾಭದಾಯಕ ಕೃಷಿಯತ್ತ ಸಾಗುತ್ತಿದೆ ಎಂದು ಮಂಡ್ಯ ವಿ.ಸಿ. ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್. ಶಿವಕುಮಾರ್ ತಿಳಿಸಿದರು.

ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕ, ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿಸ್ತರಣಾ ನಿರ್ವಹಣಾ ರಾಷ್ಟ್ರೀಯ ಸಂಸ್ಥೆ, ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ,ಎಸ್, ಕೌಶಲ್ಯಾಭಿವೃಧ್ದಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೃಷಿ ವಿವಿ ಸಹಯೋಗದೊಂದಿಗೆ ನೈಸರ್ಗಿಕ ಕೃಷಿ ಕುರಿತು 30 ಕೃಷಿ ಸಖಿಯರಿಗೆ 5 ದಿನಗಳ ತರಬೇತಿ ಕಾರ್ಯಕ್ರಮವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಇಂದಿನ ಆರೋಗ್ಯ ಸಮಸ್ಯೆಗಳನ್ನು ಆಧರಿಸಿ ರಾಸಾಯನಿಕ ಮುಕ್ತ ಕೃಷಿಯತ್ತ ಗಮನ ಹರಿಸಬೇಕಾಗಿದೆ. ಮೂಲ ವ್ಯವಸಾಯ ಇರುವುದೇ ಕೊಟ್ಟಿಗೆ ಗೊಬ್ಬರದಲ್ಲಿ. ಆದ್ದರಿಂದ ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯತ್ತ ಸಾಗುವುದು ಅವಶ್ಯಕವಾಗಿದೆ. ಹಾಗೂ ಅದರತ್ತ ರೈತರನ್ನು ಸಾಗಿಸುವುದು ಕೃಷಿ ಸಖಿಯರು, ವಿಜ್ಞಾನಿಗಳು ಹಾಗೂ ಕೃಷಿ ಆಧಿಕಾರಿಗಳ ಕರ್ತವ್ಯವಾಗಿದೆ. ಹೀಗಾಗಿ, ಹಂತ ಹಂತವಾಗಿ ಈ ತರಬೇತಿಗಳಲ್ಲಿ ಭಾಗವಹಿಸಿ ಜ್ಞಾನಾರ್ಜನೆ ಪಡೆದು ರೈತರಿಗೆ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಜಿ.ಎಚ್. ಯೋಗೇಶ್ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಎನ್.ಆರ್.ಎಲ್.ಎಂ ವತಿಯಿಂದ ನೈಸರ್ಗಿಕ ಕೃಷಿಯ ಬಗ್ಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ವೀಡಿಯೋ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮಣ್ಣಿನಲ್ಲಿ ಸಾವಯವ ಅಂಶ ಕ್ಷೀಣಿಸುತ್ತಿರುವುದರಿಂದ ಪರಿಕರಗಳ ಬಳಕೆ ಸಾಮರ್ಥ್ಯ ಕುಸಿಯುತ್ತಿದೆ. ಆರೋಗ್ಯವಂತ ಮಣ್ಣಿಗಾಗಿ ಕನಿಷ್ಠ ಶೇ.5 ರಷ್ಟು ಸಾವಯವ ಅಂಶವಿರಬೇಕು. ಇದಕ್ಕಾಗಿ ಬೆಳೆಗಳ ತ್ಯಾಜ್ಯಗಳನ್ನು ಜಮೀನಿನಲ್ಲಿಯೇ ಸೇರಿಸಬೇಕು ಎಂದರು.

ಚಾಮರಾಜನಗರ ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಯೋಗೇಶ್ ಮಾತನಾಡಿ, ಪ್ರತೀ ವರ್ಷವೂ ಮಣ್ಣು ನಶಿಸುತ್ತಿದೆ, ಮಣ್ಣು ಕೊಚ್ಚಿ ಹೋಗಿ ಸಮುದ್ರ ಸೇರುತ್ತಿರುವುದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ ಹವಾಮಾನ ವೈಪರೀತ್ಯಗಳು ಹೆಚ್ಚಾಗುತ್ತಿದೆ. ಆದ್ದರಿಂದ ಮಣ್ಣಿನ ಇಂಗಾಲದ ಪ್ರಮಾಣವನ್ನು ಹೆಚ್ಚಿಸಿ ಮಣ್ಣಿನ ಹೀರುವಿಕೆ ಸ್ಥಿತಿಯನ್ನು ಅಭಿವೃಧ್ದಿ ಪಡಿಸಬೇಕಾಗಿದೆ ಎಂದು ತಿಳಿಸಿದರು.

ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ.ಸಿ. ರಾಮಚಂದ್ರ ಮಾತನಾಡಿ, ನೈಸರ್ಗಿಕ ಕೃಷಿ ಎಂದರೆ ರಾಸಾಯನಿಕ ಮುಕ್ತ ಜಾನುವಾರು ಆಧಾರಿತ ಕೃಷಿ. ನೈಸರ್ಗಿಕ ಕೃಷಿಯ ಮೂಲತತ್ವ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು ಎಂದರು.

ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಎನ್. ಪುಷ್ಪಾ, ಡಾ.ಎ. ನಾಗಮಣಿ, ಕ್ಷೇತ್ರ ಸಹಾಯಕರಾದ ಆಸಿಫ್ ಪಾಷಾ, ಧರಣೇಶ್, ಸಂದೇಶ್ ಇದ್ದರು.

Follow Us:
Download App:
  • android
  • ios