Asianet Suvarna News Asianet Suvarna News

ಬಾಗಲಕೋಟೆ: ಬಯಲಾಟ ಅಕಾಡೆಮಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆಯಾ ಸರ್ಕಾರ..?

ಉಳಿದ ಅಕಾಡೆಮಿಗೆ ನೀಡುವಂತೆಯೇ ಬಯಲಾಟ ಅಕಾಡೆಮಿಗೂ ಅಷ್ಟೇ ಅನುದಾನ ನೀಡಲು ಬಯಲಾಟ ಅಕಾಡೆಮಿ ಅಧ್ಯಕ್ಷ ಅಜಿತ್ ಬಸಾಪೂರ ಆಗ್ರಹ 

Is It Government Discrimination to Karnataka Bayalata Academy grg
Author
First Published Sep 22, 2022, 11:34 AM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಸೆ.22): ರಾಜ್ಯದಲ್ಲಿ ವಿವಿಧ ಕಲಾಪ್ರಕಾರಗಳಿಗಾಗಿ ಸರ್ಕಾರ ಪ್ರತ್ಯೇಕ ಅಕಾಡೆಮಿಗಳನ್ನೇನೋ ಮಾಡಿದೆ. ಆದರೆ ಇವುಗಳ ಮಧ್ಯೆ ಅಕಾಡೆಮಿಗಳಲ್ಲಿಯೇ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿಯೇ ಕೇಂದ್ರಕೃತವಾಗಿ ಆರಂಭಿಸಿರೋ ಕರ್ನಾಟಕದ ಬಯಲಾಟ ಅಕಾಡೆಮಿಯೂ ಸಹ ತಾರತಮ್ಯಕ್ಕೊಳಗಾಗಿದೆ. ಅದ್ಯಾಕೆ? ಹೇಗೆ? ಅಂತೀರಾ. ಈ ಕುರಿತ ವರದಿ ಇಲ್ಲಿದೆ.  ಒಂದೆಡೆ ಉತ್ತರ ಕರ್ನಾಟಕದಲ್ಲಿಯೇ ಕೇಂದ್ರಿಕೃತವಾಗಿ ಆರಂಭವಾಗಿರೋ ಕರ್ನಾಟಕ ಬಯಲಾಟ ಅಕಾಡೆಮಿ ಕಚೇರಿ, ಅಕಾಡೆಮಿಯಲ್ಲಿ ನಿತ್ಯ ಸಂದರ್ಶನಕ್ಕೆ ಬರುವಂತಹ ಬಯಲಾಟದ ಕಲಾವಿದರು, ಇವುಗಳ ಮಧ್ಯೆ ರಾಜ್ಯ ಬಯಲಾಟ ಅಕಾಡೆಮಿಗೆ ಆಗುತ್ತಿರೋ ತಾರತಮ್ಯದ ಬಗ್ಗೆ ಅಕಾಡೆಮಿಯ ಅಧ್ಯಕ್ಷರಿಂದಲೇ ಅಪಸ್ವರ. ಅಂದಹಾಗೆ ಇಂತಹವೊಂದು ಪರಿಸ್ಥಿತಿ ಎದುರಾಗಿರೋದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. 

ಹೌದು. ನವನಗರದ ಕಲಾಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಕೇಂದ್ರ ಕಚೇರಿ ಇದ್ದು,  ರಾಜ್ಯದ 23 ಜಿಲ್ಲೆಗಳಲ್ಲಿ ಜನಪ್ರಿಯತೆಯನ್ನ ಹೊಂದಿರೋ ಬಯಲಾಟ ಕಲಾವಿದರಿಗೆ ಅನುಕೂಲವಾಗಲಿ ಅನ್ನೋ ಉದ್ದೇಶದಿಂದ ಬಾಗಲಕೋಟೆಯಲ್ಲಿ ಅಕಾಡೆಮಿಯ ಕೇಂದ್ರ ಕಚೇರಿ ತೆರೆಯಲಾಗಿದೆ. ಆದ್ರೆ ಇದಕ್ಕೆ ಸಿಗಬೇಕಾದ ಅಗತ್ಯತೆಗಳು ಮಾತ್ರ ಮರೀಚಿಕೆಯಾಗಿವೆ. ಮುಖ್ಯವಾಗಿ ರಾಜ್ಯದಲ್ಲಿ ಇರುವಂತಹ ಅನೇಕ ಅಕಾಡೆಮಿಗಳಿಗೆ ಹೆಚ್ಚೆಚ್ಚು ಅನುದಾನವನ್ನ ಸರ್ಕಾರ ಬಿಡುಗಡೆ ಮಾಡುತ್ತೇ, ಇದರಿಂದ ಆಯಾ ಕಲಾಪ್ರಕಾರಗಳ ಅಭಿವೃದ್ಧಿಗೂ ಸಹಕಾರವಾಗುತ್ತೇ ಆದ್ರೆ ಬಯಲಾಟ ಅಕಾಡೆಮಿಗೆ ಮಾತ್ರ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಅನುದಾನವನ್ನ ನೀಡುತ್ತಿಲ್ಲ, ಉಳಿದೆಲ್ಲಾ ಅಕಾಡೆಮಿಗಳಿಗೆ 100ರಷ್ಟು ಅನುದಾನ ನೀಡಿದರೆ, ನಮ್ಮ ಬಯಲಾಟ ಅಕಾಡೆಮಿಗೆ ಶೇಕಡಾ 30ರಷ್ಟು ಮಾತ್ರ ಅನುದಾನವನ್ನ ನೀಡುತ್ತಿದ್ದಾರೆ. ಇದ್ರಿಂದ ಉಳಿದ ಅಕಾಡೆಮಿಗಳಿಗೆ ಹೋಲಿಸಿಕೊಂಡರೆ ಅನುದಾನದ ತಾರತಮ್ಯತೆ ಕಂಡು ಬರುತ್ತಿದೆ ಅಂತಾರೆ ಸ್ವತ: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಅಜಿತ್​ ಬಸಾಪೂರ.

KARNATAKA RAINS: ಮಳೆ, ಪ್ರವಾಹದಿಂದಾದ ಹಾನಿಗೆ ಶೀಘ್ರ ಪರಿಹಾರ: ಸಚಿವ ಸಿ.ಸಿ. ಪಾಟೀಲ

ಬಯಲಾಟ ಕಲಾಪ್ರಕಾರಕ್ಕೆ ವಿದ್ಯಾರ್ಥಿಗಳನ್ನ ಸೆಳೆಯಲು ವಿಶೇಷ ಕಾರ್ಯಕ್ರಮ ಅಗತ್ಯತೆ 

ಇನ್ನು ಈ ಕರ್ನಾಟಕ ಬಯಲಾಟ ಅಕಾಡೆಮಿ ಅಡಿಯಲ್ಲಿ ಬರುವ ದೊಡ್ಡಾಟ, ಸಣ್ಣಾಟ, ಸೂತ್ರದಗೊಂಬೆ, ತೊಗಲಗೊಂಬೆ ಮತ್ತು  ಶ್ರೀಕೃಷ್ಣ ಪಾರಿಜಾತಗಳನ್ನ ಕಲಾವಿದರಿಗೆ ಪ್ರೋತ್ಸಾಹಿಸುವ ಮೂಲಕ ಇನ್ನಷ್ಟು  ಪ್ರಚುರಪಡಿಸಬೇಕಿದೆ. ಇದರೊಂದಿಗೆ ವಿಶ್ವವಿದ್ಯಾಲಯ ಸೇರಿದಂತೆ ಶಾಲಾ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳನ್ನ ಸೆಳೆಯಲು ಹೆಚ್ಚೆಚ್ಚು ವಿಚಾರ ಸಂಕಿರಣ, ಕಮ್ಮಟ, ಪ್ರದರ್ಶನ, ಕಲಾವಿದರ ದಾಖಲೀಕರಣ ಮಾಡಲು ಮತ್ತು ವಿಶೇಷ ಕಾರ್ಯಕ್ರಮಗಳ ಆಯೋಜನೆಯಾಗಲು ಸರ್ಕಾರ ಹೆಚ್ಚೆಚ್ಚು ಅನುದಾನ ನೀಡಬೇಕಿದೆ.

ಉತ್ತರ ಕರ್ನಾಟಕದ ಜನಪ್ರತಿನಿಧಿಗಳಿಂದ ಬಯಲಾಟಕ್ಕೆ ಬೇಕಿದೆ ಪ್ರೋತ್ಸಾಹ

ಇನ್ನೊಂದೆಡೆ ನಮ್ಮ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಸಹ ಬಯಲಾಟದ ಆಟಗಳನ್ನ  ಅಲ್ಲಗಳೆಯುತ್ತಿದ್ದಾರಂತೆ. ಇದರಿಂದ ನಾವೇ ನಮ್ಮ ಭಾಗದ ವಿಶೇಷ ಕಲೆಯನ್ನು ಅಳಿಸಿದಂತಾಗುತ್ತೇ ಹೀಗಾಗಿ ಅದನ್ನು ಬಿಟ್ಟು  ನಮ್ಮ ಜನಪ್ರತಿನಿಧಿಗಳು ಬಯಲಾಟ ಕಲಾ ಪ್ರಕಾರಗಳಿಗೆ ಹೆಚ್ಚೆಚ್ಚು ಪ್ರಾಮುಖ್ಯತೆ  ನೀಡಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕಲಾವಿದರಿಗೆ ಅವಕಾಶ ನೀಡಿ ಉತ್ತೇಜನ ನೀಡಬೇಕಿದೆ. ಈ ಮೂಲಕ ಕಲಾವಿದರ ಸಹ ಬದುಕಲು ಸಾಧ್ಯವಾಗುತ್ತದೆ ಅಂತಾರೆ ಬಯಲಾಟದ ಕಲಾವಿದರಾದ ಗದಗಯ್ಯ ಹಿರೇಮಠ.

ವಾಹನಗಳ ಮೇಲೆ Press ಪದ ಬಳಸುವಂತಿಲ್ಲ: ಡಿಸಿ ಪಿ.ಸುನೀಲ್‌ಕುಮಾರ

ಉತ್ತರ ಕರ್ನಾಟಕದಲ್ಲಿ ಬಯಲಾಟದ ಕೇಂದ್ರ ಕಚೇರಿ ಮಾಡಿದ್ದೇ ಸರ್ಕಾರದ ನಿರ್ಲಕ್ಷಕ್ಕೆ ಕಾರಣವಾಯ್ತಾ?

ಹೌದು, ಇಂತಹವೊಂದು ಚಿಂತನೆ ಬಯಲಾಟದ ಕಲಾವಿದರನ್ನು ಬಾಧಿಸುತ್ತಿದೆ. ಯಾಕೆಂದರೆ ಉಳಿದ ಅಕಾಡೆಮಿಗಳ ಕೇಂದ್ರ ಕಚೇರಿ ಬೆಂಗಳೂರಲ್ಲಿದ್ದು, ಅಗತ್ಯ ಬಿದ್ದಾಗಲೆಲ್ಲಾ ಸಿಎಂ ಮತ್ತು ಸಚಿವರಾದಿಯಾಗಿ ಎಲ್ಲರನ್ನ ಭೇಟಿ, ಹೆಚ್ಚಿನ ಅನುದಾನ ಸಹಿತ ಸೌಲಭ್ಯ ಪಡೆಯುತ್ತಾರೆ. ಆದರೆ ಬಯಲಾಟ ಅಕಾಡೆಮಿ ಪರಿಸ್ಥಿತಿ ಕೇಳೋರಿಲ್ಲ. ಹೀಗಾಗಿ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಬಯಲಾಟಕ್ಕೆ ಹೆಚ್ಚೆಚ್ಚು ಅನುದಾನ ನೀಡುವಂತೆ ಮಾಡಿ ಬಯಲಾಟ ಕಲಾಪ್ರಕಾರದ ಪೋಷಣೆಗೆ ಮುಂದಾಗಬೇಕಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಉಳಿದ ಅಕಾಡೆಮಿಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ಬಯಲಾಟ ಅಕಾಡೆಮಿಗೆ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಕೂಡಲೇ ಈ ಸಂಭಂದ ಹೆಚ್ಚು ಅನುದಾನ ಬಿಡುಗಡೆ ಮಾಡಿ ಬಯಲಾಟಕ್ಕೆ ಉತ್ತೇಜನ ನೀಡಬೇಕು ಮತ್ತು ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಸಹ ಬೆಂಬಲಿಸುವಂತಾಬೇಕೆಂದು ಬಯಲಾಟ ಕಲಾವಿದರ ಕಳಕಳಿಯಾಗಿದೆ. 
 

Follow Us:
Download App:
  • android
  • ios