ವಾಹನಗಳ ಮೇಲೆ Press ಪದ ಬಳಸುವಂತಿಲ್ಲ: ಡಿಸಿ ಪಿ.ಸುನೀಲ್‌ಕುಮಾರ
ಅಧಿಕೃತ ಪತ್ರಕರ್ತರು ಸೇರಿದಂತೆ ಇನ್ನು ಮುಂದೆ ಯಾವುದೇ ವಾಹನಗಳ ಮೇಲೆ ಪ್ರೆಸ್ ಪದ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದರು. ಅನಧಿಕೃತ ಪತ್ರಕರ್ತರಿಂದ ಅಧಿಕೃತ ಪತ್ರಕರ್ತರಿಗೆ ಆಗುವ ತೊಂದರೆ, ಅಧಿಕಾರಿಗಳಿಗೆ ಆಗುತ್ತಿರುವ ತೊಂದರೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ
ಬಾಗಲಕೋಟೆ (ಸೆ.17) :ಅಧಿಕೃತ ಪತ್ರಕರ್ತರು ಸೇರಿದಂತೆ ಇನ್ನು ಮುಂದೆ ಯಾವುದೇ ವಾಹನಗಳ ಮೇಲೆ ಪ್ರೆಸ್ ಪದ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದರು. ನವನಗರದ ಪತ್ರಿಕಾಭವನದಲ್ಲಿಂದು ಜರುಗಿದ ಪತ್ರಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯಲ್ಲಿರುವ ಅಧಿಕೃತ ಪತ್ರಕರ್ತರಿಗೆ ಕ್ಯೂಆರ್ ಕೋಡ್ ಹೊಂದಿರುವ ಗುರುತಿನ ಚೀಟಿಯನ್ನು ನೀಡಲಾಗುತ್ತಿದ್ದು, ಈ ಗುರುತಿನ ಚೀಟಿ ಹೊರತುಪಡಿಸಿ ವಾಹನಗಳ ಮೇಲೆ ಪ್ರೆಸ್ ಪದ ಬಳಕೆ ಮಾಡುವುದನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪತ್ರಿಕೆಗಳನ್ನು ಸಾಗಿಸುವ ವಾಹನಗಳಿಗೆ ಪತ್ರಿಕೆ ಸಾಗಿಸುವ ವಾಹನ ಎಂದು ಬರೆಯಿಸಬೇಕು. ಈ ಕಾರ್ಯ ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
.ರಸ್ತೆಗಳಲ್ಲೇ ಜಾನುವಾರು ಠಿಕಾಣಿ; ವಾಹನ ಸವಾರರು ಪರದಾಟ
ಅನಧಿಕೃತ ಪತ್ರಕರ್ತರಿಂದ ಅಧಿಕೃತ ಪತ್ರಕರ್ತರಿಗೆ ಆಗುವ ತೊಂದರೆ, ಅಧಿಕಾರಿಗಳಿಗೆ ಆಗುತ್ತಿರುವ ತೊಂದರೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಹಾಗೂ ತಾಲೂಕುಮಟ್ಟದ ಪತ್ರಕರ್ತರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಧಿಕೃತ ಪತ್ರಕರ್ತರಿರುವುದನ್ನು ಪರಿಶೀಲಿಸಿ ಶಿಫಾರಸ್ಸು ಪತ್ರದೊಂದಿಗೆ ವಾರ್ತಾ ಇಲಾಖೆಯ ಮೂಲಕ ಜಿಲ್ಲಾಡಳಿತಕ್ಕೆ ಪಟ್ಟಿಸಲ್ಲಿಸಿದಲ್ಲಿ ಅಂತವರಿಗೆ ಮಾತ್ರ ಕ್ಯೂಆರ್ ಕೋಡ್ ಹೊಂದಿರುವ ಗುರುತಿನ ಚೀಟಿ ನೀಡಲಾಗುತ್ತದೆ ಎಂದು ತಿಳಿಸಿದರು.
ಪತ್ರಕರ್ತರಿಗೆ ನಿಗದಿತ ಸಮಯದಲ್ಲಿ ಜಿಲ್ಲಾಡಳಿತದಿಂದ ಮಾಹಿತಿ ನೀಡಲು ಕ್ರಮವಹಿಸಲಾಗುತ್ತಿದೆ. 3 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಅಭಿವೃದ್ಧಿ ಹಾಗೂ ಜನರ ಸೇವೆಗೆ ಆದ್ಯತೆ ನೀಡಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಇನ್ನು ಆಗಬೇಕಿರುವ ಕೆಲಸಗಳಿಗೆ ಹೆಚ್ಚಿನ ಗಮನ ಹರಿಸಲಾಗುವುದು. ಜಿಲ್ಲೆಯ ಭೂಮಿ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದೆ. ಪ್ರತಿ ತಾಲೂಕಿನಲ್ಲಿರುವ ಕೋರ್ಚ್ ಪ್ರಕರಣಗಳು ಸೇರಿದಂತೆ ಇತರ ಕಡತಗಳ ವಿಲೇವಾರಿಗೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಮಾತನಾಡಿ, ವಾಹನಗಳ ಮೇಲೆ ಇರುವ ಪ್ರೆಸ್ ಪದವನ್ನು ಮೊದಲು ಅಧಿಕೃತ ಪತ್ರಕರ್ತರು ಸ್ವಯಂಪ್ರೇರಿತವಾಗಿ ತೆಗೆದುಹಾಕಬೇಕು. ನಂತರ ಉಳಿದ ವಾಹನಗಳ ಮೇಲೆ ಇರುವ ಪ್ರೆಸ್ ಪದ ಬಳಕೆಯಾಗದಂತೆ ಪೊಲೀಸ್ ಇಲಾಖೆ ಕ್ರಮವಹಿಸಲಾಗುತ್ತದೆ. ಪತ್ರಕರ್ತರ ಸಮ್ಮುಖದಲ್ಲಿ ನಿರ್ಧರಿಸಿದಂತೆ ಎಲ್ಲರೂ ಪಾಲನೆ ಮಾಡಬೇಕು ಎಂದರು.
ಬಾಗಲಕೋಟೆಯಲ್ಲಿ ಉಕ್ಕಿ ಹರಿಯುತ್ತಿರೋ ಮಲಪ್ರಭಾ ಮತ್ತು ಘಟಪ್ರಭಾ ನದಿ, ಓರ್ವ ಯುವಕ ಬಲಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳಿ, ವಾರ್ತಾ ಸಹಾಯಕರಾದ ಕಸ್ತೂರಿ ಪಾಟೀಲ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ದಲಭಂಜನ, ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ, ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯ ಮಹೇಶ ಅಂಗಡಿ, ಹಿರಿಯ ಪತ್ರಕರ್ತರಾದ ರಾಮ ಮನಗೂಳಿ, ಈಶ್ವರ ಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.