ಕೊಪ್ಪಳ ಏತ ನೀರಾವರಿ ಈಗ ಕುಡಿಯುವ ನೀರಿಗೆ ಸೀಮಿತ: ರೈತರಿಗೆ ಬಿಗ್ ಶಾಕ್!
ಮಾಹಿತಿ ಹಕ್ಕು ಅರ್ಜಿಯಿಂದ ಬಹಿರಂಗ| ಪ್ರವಾಹ ಬಂದಾಗ ಮಾತ್ರ ಕೆರೆಗೆ ನೀರು| 1.12 ಲಕ್ಷ ಏಕರೆ ನೀರಾವರಿ ಯೋಜನೆ ಬಿಸಿಲ್ಗುದುರೆ| ಶಾಕ್ ಆದ ಕೊಪ್ಪಳ ಜಿಲ್ಲೆಯ ಜನರು|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜ.08): ಕೊಪ್ಪಳ ಏತ ನೀರಾವರಿ ಯೋಜನೆಯಡಿ ನೀರು ಬಂದೇ ಬಿಟ್ಟಿತು ಎಂದು ಹೇಳುವಾಗಲೇ ಯೋಜನೆ ಈಗ ಕೇವಲ ಕುಡಿಯುವ ನೀರಿಗಾಗಿ ಕೆರೆ ತುಂಬಿಸಿಕೊಳ್ಳಲು ಮಾತ್ರ ಸೀಮಿತವಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಏತ ನೀರಾವರಿ ಯೋಜನೆಯ ವ್ಯಾಪ್ತಿಯ ಕೊಪ್ಪಳ, ಬಾಗಲಕೋಟೆ ಹಾಗೂ ಗದಗ ರೈತರಿಗೆ ಇದು ದೊಡ್ಡ ಶಾಕ್ ಸುದ್ದಿಯಾಗಿದೆ. ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ, ಕೃಷ್ಣಾ ಭಾಗ್ಯ ಜಲನಿಗಮದ ಅಧೀಕ್ಷಕ ಅಭಿಯಂತರರು ನೀಡಿರುವ ಲಿಖಿತ ಮಾಹಿತಿಯಲ್ಲಿಯೇ ಇದು ಬೆಳಕಿಗೆ ಬಂದಿದೆ.
ಅರ್ಜಿಯ ಪ್ರಶ್ನೆ 8ಕ್ಕೆ ನೀಡಿರುವ ಉತ್ತರದ ಪ್ರಕಾರ ಕೊಪ್ಪಳ ಏತ ನೀರಾವರಿ ಯೋಜನೆಯಡಿ ಈಗಾಗಲೇ ನಿರ್ಮಾಣವಾಗಿರುವ 1 ಹಾಗೂ 2ನೇ ಸ್ಥಾವರಗಳಿಂದ ಪ್ರವಾಹದ ಸಮಯದಲ್ಲಿ ನದಿ ಕೆರೆಗಳನ್ನು ತುಂಬಿಸಲು ಕುಡಿಯುವ ನೀರಿನ ಸೌಕರ್ಯ ಒದಗಿಸುವ ಹಾಗೂ ಅಂತರ್ಜಲ ಅಭಿವೃದ್ಧಿಗೆ ಸಹಕಾರಿಯಾಗಲು ಉದ್ದೇಶಿಸಲಾಗಿದೆ. ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಪ್ಯಾಕೇಜ್ ಅಡಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಇದರಲ್ಲಿ ಯಾವುದೇ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಕೊಪ್ಪಳ ಏತ ನೀರಾವರಿ ಯೋಜನೆಯಡಿ 1.12 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸುವ ಕುರಿತು ವಿಸ್ತೃತ ಸರ್ವೇ ತನಿಖಾ ಕಾರ್ಯ ಹಾಗೂ ಅಂದಾಜು ಪತ್ರಿಕೆಗಳನ್ನು ತಯಾರಿಸಲಾಗಿದ್ದು, ಕಾಮಗಾರಿಗಳನ್ನು ಅಂತಿಮ ತೀರ್ಪು ಕೇಂದ್ರ ಸರ್ಕಾರದ ಗೆಜೆಟ್ ಪ್ರಕಟಣೆಗೆ ಅನುಗುಣವಾಗಿ ಹಂತವಾಗಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ ಎಂದು ಹೇಳಿರುವುದನ್ನು ನೋಡಿದರೆ ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಸದ್ಯಕ್ಕಂತೂ ನೀರಾವರಿಗೆ ನೀರು ಒದಗಿಸುವ ಪ್ರಸ್ತಾಪವೇ ಇಲ್ಲ ಎನ್ನುವುದು ಪಕ್ಕಾ ಆಗುತ್ತದೆ.
ರಾಜಕೀಯ ಗುದ್ದಾಟ
ಇದು ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಹಾಗೂ ಮಾಜಿ ಶಾಸಕರ ನಡುವೆ ದೊಡ್ಡ ಗುದ್ದಾಟಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕರಾದ ಹಾಲಪ್ಪ ಆಚಾರ್ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಗೆ ನೀರು ತಂದೇ ತರುತ್ತೇವೆ. ವರ್ಷದೊಳಗಾಗಿ ನೀರಾವರಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗೆ ತಂದಿದ್ದೇ ಆದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತೇನೆ ಎಂದು ಹಾಲಿ ಶಾಸಕ ಅಮರೇಗೌಡ ಭಯ್ಯಾಪುರ ಅವರು ಸವಾಲು ಹಾಕಿದ್ದಾರೆ.
ವರ್ಷದೊಳಗೆ ನೀರು ತರುವುದು ಅಸಾಧ್ಯ, ಆದರೆ ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಇನ್ನೈದು ವರ್ಷದಲ್ಲಿಯಾದರೂ ನೀರು ಬರಬಹುದು ಎಂದು ಅಮರೇಗೌಡ ಭಯ್ಯಾಪುರ ಅವರು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸ್ಥಳೀಯ ಶಾಸಕ ಹಾಲಪ್ಪ ಆಚಾರ್ ಅವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ವಾಸ್ತವದ ಮಾಹಿತಿಯನ್ನು ನೀಡುತ್ತಲೇ ಇಲ್ಲ. ಬರೀ ಸುಳ್ಳು ಹೇಳಿಕೊಂಡು ಜನರನ್ನು ಹಾದಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪಿಸಿದ್ದಾರೆ.
ಭಾರಿ ಹಿನ್ನಡೆ:
ಕೊಪ್ಪಳ ಏತ ನೀರಾವರಿ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಯಲಬುರ್ಗಾ, ಕುಷ್ಟಗಿ ತಾಲೂಕಿನ ಬಹುತೇಕ ಭಾಗ ಹಾಗೂ ಕೊಪ್ಪಳ, ಕನಕಗಿರಿ ಹಾಗೂ ಗಂಗಾವತಿ ಕೆಲವೊಂದು ಭಾಗಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತದೆ ಎನ್ನುವ ಕನಸು ಭಗ್ನವಾದಂತೆ ಆಗಿದೆ. ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ನೀಡಿರುವ ಮಾಹಿತಿಯಿಂದ.
ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ನೀರು ತರಬೇಕು ಎನ್ನುವುದು ಸುಮಾರು 10-15 ವರ್ಷಗಳ ಸತತ ಹೋರಾಟದ ಫಲವಾಗಿದೆ. ಆದರೆ, ಇನ್ನೇನು ನೀರಾವರಿಯಾಯಿತು ಎನ್ನುವಾಗಲೇ ಈ ಮಾಹಿತಿ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕಾಲುವೆ ನಿರ್ಮಾಣವೂ ಪ್ರಾರಂಭವಾಗಿರುವ ವೇಳೆಯಲ್ಲಿ ಇಂಥ ಮಾಹಿತಿ ಅಘಾತವನ್ನಂತೂ ಜಿಲ್ಲೆಯ ಜನರಿಗೆ ನೀಡಿದೆ.
ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು, ಕೊಪ್ಪಳ ಏತ ನೀರಾವರಿ ಯೋಜನೆಯ ಸಮಗ್ರ ಮಾಹಿತಿಯನ್ನು ಮಾಹಿತಿ ಹಕ್ಕು ಅರ್ಜಿಯಿಂದ ಪಡೆದಿದ್ದು, ಕೇವಲ ಕೆರೆ ತುಂಬಿಸುವ ಯೋಜನೆಗೆ ಮಾತ್ರ ಇದು ಸೀಮಿತ ಮಾಡಲಾಗಿರುವ ಮಾಹಿತಿ ಬಂದಿದೆ. ಅದು ಪ್ರವಾಹದ ವೇಳೆಯಲ್ಲಿ ಮಾತ್ರ ಎಂದು ತಿಳಿಸಿದ್ದಾರೆ.