ಕೊಪ್ಪಳ: ಸರ್ಕಾರದ ನಯಾಪೈಸೆ ಇಲ್ಲದೆಯೇ ಕೆರೆ ನಿರ್ಮಿಸಿದ ಯೋಧರು!
ಬಿಡುವಿನ ವೇಳೆಯಲ್ಲಿ ಯೋಧರಿಂದ ಕೆರೆ ನಿರ್ಮಾಣ | ಅಂತಿಮ ಹಂತದಲ್ಲಿ ಕಾಮಗಾರಿ, ತುಂಗಭದ್ರೆಯಿಂದ ಕೆರೆ ಭರ್ತಿ| ಸುಮಾರು 220 ಮೀಟರ್ ಉದ್ದ, 80 ಮೀಟರ್ ಅಗಲದ ಕೆರೆ ನಿರ್ಮಾಣಕ್ಕೆ ಮುಂದಾದ ಯೋಧರು|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಫೆ.20): ತುರ್ತು ಸಂದರ್ಭ ಮತ್ತು ಸಮಾಜದಲ್ಲಿ ಅಶಾಂತಿ, ದೊಂಬಿ ಸಂಭವಿಸಿದಾಗ ಕೈಯಲ್ಲಿ ಬಂದೂಕು ಹಿಡಿದು ಭದ್ರತೆ, ರಕ್ಷಣೆ ನೀಡುವ ಇಲ್ಲಿನ ‘ಭಾರತೀಯ ಸಶಸ್ತ್ರ ಮೀಸಲು ಪಡೆ’ಯ ಯೋಧರು ಬಿಡುವಿನ ವೇಳೆ ಕೈಯಲ್ಲಿ ಗುದ್ದಲಿ, ಸಲಿಕೆ, ಪಿಕಾಸಿ, ಡ್ರಿಲ್ಲಿಂಗ್ ಯಂತ್ರ ಹಿಡಿದು ಕೆರೆ ನಿರ್ಮಿಸಿದ್ದಾರೆ!
ಕೆರೆಯ ಕಾಮಗಾರಿ ಅಂತಿಮ ಹಂತದಲ್ಲಿದೆ. ಇನ್ನು ಸ್ವಲ್ಪ ಕೆಲಸವಾದರೆ ತುಂಗಭದ್ರಾ ನದಿಯಿಂದ ಕೆರೆ ತುಂಬುತ್ತದೆ. ಇದರಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ 1200 ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗಕ್ಕೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಲಭಿಸಲಿದೆ. ಸಹಾಯಕ ಕಮಾಂಡೆಂಟ್ ಸತೀಶ ಅವರ ಪ್ರಾಮಾಣಿಕ ಪ್ರಯತ್ನ, ಕರ್ತವ್ಯ ನಿಷ್ಠೆಯಿಂದಾಗಿ ಈ ಕಾರ್ಯ ಸಲೀಸಾಗಿ ನಡೆದಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಪ್ರದೇಶದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಟೊಂಕ ಕಟ್ಟಿ ನಿಂತಿರುವ ಈ ಯೋಧರ ಕಾಳಜಿಯ ವಿಷಯ ಇದೀಗ ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ. ಇಲ್ಲಿಯ ಜನರಿಗೆ ಕುಡಿಯಲು ಕೊಳವೆ ಬಾವಿಯೊಂದನ್ನು ಕೊರೆಸಲಾಗಿತ್ತು. ಇಲ್ಲಿಯ ಸಿಬ್ಬಂದಿ ಮತ್ತು ಕುಟುಂಬದವರು ಇದೇ ನೀರನ್ನು ಕುಡಿಯುತ್ತಿದ್ದರು. ಅದೂ ಅಲ್ಲದೇ ಸ್ವತಃ ಸತೀಶ್ ಅವರ ಮುತುವರ್ಜಿಯಿಂದ, ಕಾಳಜಿಯಿಂದ ಭಾರತೀಯ ಸಶಸ್ತ್ರ ಮೀಸಲು ಪಡೆ (ಐಆರ್‌ಬಿ) ಆವರಣದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಜೋಪಾನ ಮಾಡಲಾಗಿದ್ದು, ಅವಕ್ಕೂ ಇದೇ ನೀರನ್ನು ನೀಡಲಾಗುತ್ತಿತ್ತು. ಆದರೆ ನೀರನ್ನು ಪರೀಕ್ಷಿಸಿದಾಗ ಅದರಲ್ಲಿ ಫ್ಲೋರೈಡ್ ಮತ್ತು ಆರ್ಸೆನಿಕ್ ಪ್ರಮಾಣ ಹೆಚ್ಚಾಗಿರುವುದು ಪತ್ತೆಯಾಯಿತು. ನೀರನ್ನು ಸೇವನೆ ಮಾಡದಿರಲು ನಿರ್ಧರಿಸಲಾಯಿತು. ಆ ಸಂದರ್ಭದಲ್ಲೇ ನಿರ್ಮಾಣ ಕನಸು ಒಡಮೂಡಿತು.
ಕೆರೆ ನಿರ್ಮಾಣ ಸಾಹಸ:
ಐಆರ್‌ಬಿಗೆ ಸೇರಿದಂತೆ ಸುತ್ತಮುತ್ತಲ ಪ್ರದೇಶದವರಿಗೂ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಬೇಕು ಎಂದು ಯೋಚಿಸಿ, ಸುಮಾರು 220 ಮೀಟರ್ ಉದ್ದ, 80 ಮೀಟರ್ ಅಗಲದ ಕೆರೆ ನಿರ್ಮಾಣಕ್ಕೆ ಮುಂದಾಗುತ್ತಾರೆ. ಸರ್ಕಾರದ ನಯಾಪೈಸೆ ಇಲ್ಲದೆಯೇ ಸುಮಾರು 2.5 ಕೋಟಿ ವೆಚ್ಚದ ಕೆರೆಯನ್ನು ಸಿಬ್ಬಂದಿಗಳು ಶ್ರಮದಾನದ ಮೂಲಕವೇ ನಿರ್ಮಾಣ ಮಾಡಿದ್ದಾರೆ. ಯಾರ ಸಹಾಯವೂ ಇಲ್ಲದೆ ಇರುವ ಸಿಬ್ಬಂದಿ ಬಿಡುವಿನ ವೇಳೆ ಬಳಕೆ ಮಾಡಿಕೊಂಡು ಮಹಾನ್ ಕಾರ್ಯ ಮಾಡಿದ್ದಾರೆ. ಇಲ್ಲಿರುವ 1200 ಸಿಬ್ಬಂದಿಗಳು ಬಿಡುವಿನ ವೇಳೆಯಲ್ಲಿ ಈ ಕಾರ್ಯ ನಡೆಸಿದ್ದು, 2017 ರಲ್ಲಿ ಕೆರೆಯ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು 2019 ರಲ್ಲಿ ಮುಗಿದಿದೆ. ಇದೀಗ ಅಂತಿಮ ಹಂತದ ಕೆಲ ಕಾಮಗಾರಿ ಮಾತ್ರ ಬಾಕಿ ಇದೆ.
ಸರ್ಕಾರದಿಂದ 2 ಕೋಟಿ:
ಐಆರ್‌ಬಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಕೊಳ್ಳಲು ಅಲ್ಲಿಯ ಸಿಬ್ಬಂದಿ ತಾವೇ ಸ್ವಯಂ ಪ್ರೇರಿತವಾಗಿ ಕೆರೆ ನಿರ್ಮಾಣ ಮಾಡಿಕೊಂಡಿರುವುದಕ್ಕೆ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರ ಅಳಿದುಳಿದ ಕೆಲಸಕ್ಕೆ ಸರ್ಕಾರ 2 ಕೋಟಿ ನೀಡಿದೆ. ಈ 2ಕೋಟಿ ಬಳಕೆ ಮಾಡಿಕೊಂಡು ಕೆರೆಯ ಸುತ್ತಲೂ ಬೇಲಿ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ತುಂಗಭದ್ರಾ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪೈಪ್ ಲೈನ್ ಒಯ್ಯಲಾಗಿದೆ. ಇದರಲ್ಲಿ ಕೆರೆ ತುಂಬಿಸುವುದಕ್ಕೆ ಅನುಮತಿ ಪಡೆದು, ಅಲ್ಲಿಂದ ಪ್ರತ್ಯೇಕ ಪೈಪ್‌ಲೈನ್ ಅಳವಡಿಸಲಾಗಿದೆ. ಇನ್ನೇನು ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಕೆರೆ ಭರ್ತಿಯಾಗಲಿದೆ. ಇದರಿಂದ ಐಆರ್‌ಬಿಯಲ್ಲಿ ನೀರಿನ ಸಮಸ್ಯೆಯೇ ನಿವಾರಣೆಯಾಗುತ್ತದೆ.
ಗವಿಮಠ ಶ್ರೀಗಳ ಭೇಟಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಐಆರ್‌ಬಿಯಲ್ಲಿ ಕೆರೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಈ ಕೆರೆಯನ್ನು ಅನೇಕರು ಬಂದು ನೋಡಿ ಹೋಗುತ್ತಿದ್ದಾರೆ.
ಐಆರ್‌ಬಿ ಸಿಬ್ಬಂದಿ ಶ್ರಮದಾನದಿಂದ ಕಾರ್ಯ
ಯಾವುದೇ ಅನುದಾನವಿಲ್ಲದೇ 2.5 ಕೋಟಿ ವೆಚ್ಚದ ಕೆರೆ ನಿರ್ಮಿಸಿದ್ದು. ಇದೀಗ ಸರ್ಕಾರ ಉಳಿದ ಕಾರ್ಯಕ್ಕೆ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕೆರೆಯ ನೀರನ್ನು ವಸತಿ ಗೃಹಗಳಿಗೆ ಸರಬರಾಜು ಮಾಡಲು 40 ಲಕ್ಷ ಅನುದಾನದಲ್ಲಿ ಒಎಚ್‌ಟಿ ನಿರ್ಮಿಸಲಾಗುತ್ತಿದೆ. ಕೆರೆಯ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲು 52 ಲಕ್ಷ ಅನುದಾನದ ಯೋಜನೆ. 600 ವಸತಿಗೃಹ ಹಾಗೂ 30 ಸಾವಿರ ಗಿಡಗಳಿಗೆ ನೀರು ಸರಬರಾಜು. ಸುಮಾರು 12 ಸಾವಿರ ಗಿಡಮರಗಳನ್ನು ಉಚಿತವಾಗಿ ನೆಡಲಾಗಿದೆ. ಸುಂದರ ಉದ್ಯಾನ ಯಾವುದೇ ಸಹಾಯವಿಲ್ಲದೆ ನಿರ್ಮಾಣ.ಆಟದ ಮೈದಾನ ನಿರ್ಮಾಣ. ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಉಚಿತವಾಗಿ ಬೇಕರಿ, ತರಕಾರಿ ಮಳಿಗೆ, ಔಷಧಾಲಯ, ವಾಹನ ದುರಸ್ತಿ ಕಾರ್ಯಾಗಾರ, ಜಿಮ್ ಕಟ್ಟಡಗಳನ್ನು ಉಚಿತವಾಗಿ ನಿರ್ಮಾಣ ಮಾಡಲಾಗಿದೆ.
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೆರೆ ನಿರ್ಮಾಣ ಮಾಡಲಾಗಿದೆ. ಇನ್ನೇನು ಮುಕ್ತಾಯದ ಹಂತದಲ್ಲಿದ್ದು, ಕೆರೆಗೆ ಬೇಲಿ ನಿರ್ಮಾಣ ಕಾರ್ಯ ಮುಗಿಯುತ್ತಿದ್ದಂತೆ ನೀರು ತುಂಬಿಸಲಾಗುತ್ತದೆ ಎಂದು ಐಆರ್‌ಬಿ ಮುನಿರಾಬಾದ್ ಸಹಾಯಕ ಕಮಾಂಡೆಂಟ್ ಸತೀಶ್ ಈ ಅವರು ಹೇಳಿದ್ದಾರೆ.
ಕೆರೆ ನಿರ್ಮಾಣದಲ್ಲಿ ಹೆಚ್ಚು ಆಸಕ್ತಿ ವಹಿಸಿರುವುದು ಸಹಾಯಕ ಕಮಾಂಡೆಂಟ್ ಸತೀಶ್ ಅವರೇ. ನಾನು ಇತ್ತೀಚೆಗೆ ಬಂದಿದ್ದೇನೆ. ಕೆರೆ ನಿರ್ಮಾಣ ಇನ್ನೊಂದುವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ಐಆರ್‌ಬಿ ಮುನಿರಾಬಾದ್ ಕಮಾಂಡೆಂಟ್ ಮಹದೇವ ಪ್ರಸಾದ ತಿಳಿಸಿದ್ದಾರೆ.