ಪತಿ ವಿರುದ್ಧ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ದೂರು
* ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಮುಂದಿನ ಕ್ರಮ
* ವಿಧಾನಸೌಧ ಠಾಣೆಯಲ್ಲಿ ಅವರು ದೂರು ಸಲ್ಲಿಸಿದ ವರ್ತಿಕಾ
* ಆ್ಯಸಿಡ್ ಹಾಕುವುದಾಗಿ ಬೆದರಿಕೆ
ಬೆಂಗಳೂರು(ಜೂ.05): ತಮ್ಮ ವಿರುದ್ಧ ಮಕ್ಕಳ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಪತಿ ವಿರುದ್ಧ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ತಿರುಗಿ ಬಿದ್ದಿದ್ದು, ಈಗ ವರದಕ್ಷಿಣೆ ಕಿರುಕುಳ ಪ್ರಕರಣ ಹಿಂಪಡೆದಿದ್ದರೆ ಆ್ಯಸಿಡ್ ಹಾಕುವುದಾಗಿ ಪತಿ ಬೆದರಿಕೆ ಹಾಕಿದ್ದಾರೆ ಆರೋಪಿಸಿ ವಿಧಾನಸೌಧ ಠಾಣೆಯಲ್ಲಿ ಅವರು ದೂರು ಸಲ್ಲಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿದ ಬಳಿಕವು ನನಗೆ ಪತಿ ಕಿರುಕುಳ ನೀಡುತ್ತಿದ್ದರು. ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೂಡಾ ನಿಯಮ ಉಲ್ಲಂಘಿಸಿ ನನ್ನ ಕಚೇರಿಗೆ ಬಂದು ಪತಿ ಜೀವ ಬೆದರಿಕೆ ಹಾಕಿದ್ದಾರೆ. ಮೇ 28ರಂದು ವಾಟ್ಸಾಪ್‌ನಲ್ಲಿ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ನನ್ನ ಮೇಲೆ ದೈಹಿಕ ಹಲ್ಲೆ ನಡೆಸಲು ಅವರು ಸಂಚು ನಡೆಸಿದ್ದಾರೆ ಎಂದು ವರ್ತಿಕಾ ಆರೋಪಿಸಿದ್ದಾರೆ.
ರಾಜ್ಯದ ಮಹಿಳಾ ಐಪಿಎಸ್ ಅಧಿಕಾರಿಗೇ ವರದಕ್ಷಿಣೆ ಕಿರುಕುಳ!
ಈ ದೂರು ಸ್ವೀಕರಿಸಿರುವ ವಿಧಾನಸೌಧ ಠಾಣೆ ಪೊಲೀಸರು, ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ನ್ಯಾಯಾಲಯದ ಆದೇಶವಿದ್ದರೂ ತಮಗೆ ಮಗನನ್ನು ಭೇಟಿಯಾಗಲು ಪತ್ನಿ ಅವಕಾಶ ನೀಡುತ್ತಿಲ್ಲ ಎಂದು ಆಪಾದಿಸಿ ವರ್ತಿಕಾ ಕಟಿಯಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗಕ್ಕೆ ಅವರ ಪತಿ ಹಾಗೂ ಕೇಂದ್ರ ವಿದೇಶಾಂಗ ಇಲಾಖೆಯ ಐಎಫ್‌ಎಸ್ ಅಧಿಕಾರಿ ನಿತಿನ್ ಸುಭಾಷ್ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಮುಂದಿನ ಕಾನೂನು ಕ್ರಮಕ್ಕೆ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಆಯೋಗ ವರ್ಗಾಯಿಸಿತ್ತು. ಇದಕ್ಕೂ ಮೊದಲು ಪತಿ ವಿರುದ್ಧ ವರದಕ್ಷಿಣೆ ಆರೋಪ ಹೊರಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ವರ್ತಿಕಾ ಕಟಿಯಾರ್ ದೂರು ಕೊಟ್ಟಿದ್ದರು.