ಬೆಂಗಳೂರು [ಆ.13]:  ಇತ್ತೀಚೆಗೆ ಪೊಲೀಸ್‌ ಇಲಾಖೆಯಲ್ಲಿ ತೀವ್ರ ವಿವಾದದ ಬಿರುಗಾಳಿ ಎಬ್ಬಿಸಿದ್ದ ಬೆಂಗಳೂರು ಆಯುಕ್ತರ ಫೋನ್‌ ಕದ್ದಾಲಿಕೆ ಪ್ರಕರಣ ಸಂಬಂಧ ಸೋಮವಾರ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಅವರಿಗೆ ಮಧ್ಯಂತರ ವರದಿ ಸಲ್ಲಿಕೆಯಾಗಿದ್ದು, ಇದರಲ್ಲಿ ಮಾಜಿ ಆಯುಕ್ತ ಅಲೋಕ್‌ ಕುಮಾರ್‌ ಹೆಸರು ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ.

ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಕಚೇರಿಗೆ ತೆರಳಿದ ಪ್ರಕರಣದ ವಿಚಾರಣಾಧಿಕಾರಿಯೂ ಆಗಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರು, ಕದ್ದಾಲಿಕೆ ಪ್ರಕರಣದ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಈ ವರದಿ ಆಧರಿಸಿ ಡಿಜಿಪಿ ಅವರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮಂಗಳವಾರ ಕ್ರಮ ಜರುಗಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಇನ್ನು ಡಿಜಿಪಿ ಅವರಿಗೆ ಫೋನ್‌ ಕದ್ದಾಲಿಕೆ ವರದಿ ಸಲ್ಲಿಕೆಯನ್ನು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌  ಖಚಿತಪಡಿಸಿದ್ದಾರೆ. ಆದರೆ ವರದಿ ಗೌಪ್ಯವಾಗಿದ್ದು, ಅದರಲ್ಲಿನ ಉಲ್ಲೇಖಿತ ಅಂಶಗಳ ಬಹಿರಂಗಪಡಿಸುವುದಿಲ್ಲ ಎಂದು ಆಯುಕ್ತರು ಹೇಳಿದ್ದಾರೆ.

ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಭಾಸ್ಕರ್‌ ರಾವ್‌ ಅವರು ದೆಹಲಿ ಮೂಲದ ಫರಾಜ್‌ ಎಂಬಾತನ ಜೊತೆ ಈ ಹಿಂದೆ ನಡೆಸಿದ್ದ ವಿವಾದಾತಾತ್ಮಕ ಆಡಿಯೋ ಬಹಿರಂಗವಾಗಿತ್ತು. ಈ ಸಂಭಾಷಣೆಯಲ್ಲಿ ಆಯುಕ್ತ ಹುದ್ದೆಗೆ ಭಾಸ್ಕರ್‌ ರಾವ್‌ ಲಾಬಿ ನಡೆಸಿದ್ದು, ಆಗ ಕಾಂಗ್ರೆಸ್‌ ವರಿಷ್ಠರ ಮೂಲಕ ಹುದ್ದೆ ಪಡೆಯಲು ಫರಾಜ್‌ ನೆರವು ಪಡೆದಿದ್ದರು ಎಂಬ ಆರೋಪ ಬಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ, ಕದ್ದಾಲಿಕೆ ಕುರಿತು ವಿಚಾರಣೆ ನಡೆಸುವಂತೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರಿಗೆ ಸೂಚಿಸಿದ್ದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದರಂತೆ ವಿಚಾರಣೆ ಕೈಗೊಂಡ ಸಂದೀಪ್‌ ಪಾಟೀಲ್‌ ಅವರು ಡಿಜಿಪಿ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಇದರಲ್ಲಿ ಫರಾಜ್‌ ಪೋನ್‌ ಕದ್ದಾಲಿಕೆ ನಡೆದಿದ್ದು, ಈ ಬಗ್ಗೆ ವಿಚಾರಣೆ ಮುಂದುವರಿಸಬೇಕಿದೆ ಎಂದಿದ್ದಾರೆ. ವರದಿಯಲ್ಲಿ ಮಾಜಿ ಆಯುಕ್ತ ಅಲೋಕ್‌ ಕುಮಾರ್‌, ಇನ್‌ಸ್ಪೆಕ್ಟರ್‌ಗಳಾದ ಮಾಲತೇಶ್‌, ಮಿರ್ಜಾ ಆಲಿ ಹಾಗೂ ಯತಿರಾಜ್‌ ಹೆಸರು ಸಹ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಸಿಸಿಬಿಯಿಂದ ಕದ್ದಾಲಿಕೆ:

ವಂಚನೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇರೆಗೆ ದೆಹಲಿ ಮೂಲದ ಫರಾಜ್‌ ಮೇಲೆ ಸಿಸಿಬಿ ನಿಗಾ ವಹಿಸಿತ್ತು. ಆಗ ಆತನ ಚಲವಲನಗಳ ಕುರಿತು ಮಾಹಿತಿ ಸಂಗ್ರಹಿಸುವ ಸಲುವಾಗಿ ಆಗಿನ ಸಿಸಿಬಿ ಮುಖ್ಯಸ್ಥ ಅಲೋಕ್‌ ಕುಮಾರ್‌ ಅವರ ಸೂಚನೆಗೆ ಫರಾಜ್‌ ಮೊಬೈಲ್‌ ಸಂಭಾಷಣೆಯನ್ನು ಕದ್ದಾಲಿಸಲಾಗಿತ್ತು. ಇದು ಲೋಕಸಭಾ ಚುನಾವಣೆ ಅಂತಿಮ ಹಂತದಿಂದ ಶುರುವಾಗಿ ಹೊಸ ಆಯುಕ್ತರ ನೇಮಕಾತಿ ಪ್ರಕ್ರಿಯೆ ಮುನ್ನ ದಿನಗಳವರೆಗೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಸಿಸಿಬಿ ತಾಂತ್ರಿಕ ವಿಭಾಗವು ನೇರವಾಗಿ ಸಿಸಿಬಿ ಮುಖ್ಯಸ್ಥ ಮತ್ತು ಡಿಸಿಪಿ ಅಧೀನಕ್ಕೆ ಬರಲಿದ್ದು, ಪ್ರಸುತ್ತ ಆ ವಿಭಾಗದಲ್ಲಿ ಏಕ ಮಾತ್ರ ಇನ್‌ಸ್ಟೆಕ್ಟರ್‌ ಮಿರ್ಜಾ ಆಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಸಿಬಿಗೆ ಹೊಸಕೋಟೆ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್‌ಸ್ಟೆಕ್ಟರ್‌ ಮಾಲತೇಶ್‌ ವರ್ಗಾವಣೆಗೊಂಡಿದ್ದರು. ಈ ಇನ್‌ಸ್ಟೆಕ್ಟರ್‌ ಮೊದಲಿನಿಂದಲೂ ಅಲೋಕ್‌ ಕುಮಾರ್‌ ಅವರಿಗೆ ಆಪ್ತರಾಗಿದ್ದು, ತಮ್ಮ ನಂಬಿಕಸ್ಥ ಇನ್‌ಸ್ಪೆಕ್ಟರ್‌ನನ್ನು ತಾಂತ್ರಿಕ ವಿಭಾಗಕ್ಕೆ ಅಲೋಕ್‌ ಕುಮಾರ್‌ ನಿಯೋಜಿಸಿದ್ದರು. ಅನಂತರ ಹಿರಿಯ ಅಧಿಕಾರಿ ನಿರ್ದೇಶನದ ಮೇರೆಗೆ ಮಾಲತೇಶ್‌ ಹಾಗೂ ಮಿರ್ಜಾ ಅಲಿ ಅವರು ಫರಾಜ್‌ನ ಮೊಬೈಲ್‌ ಮಾತುಕತೆಯನ್ನು ಕದ್ದು ಕೇಳಿದ್ದರು ಎಂದು ತಿಳಿದು ಬಂದಿದೆ.

ಚುನಾವಣೆ ಮುಗಿದ ನಂತರ ಮಾಲತೇಶ್‌ ಮತ್ತೆ ಹೊಸಕೋಟೆ ತಾಲೂಕಿಗೆ ವರ್ಗಾವಣೆಗೊಂಡರು. ಇತ್ತ ಅದೇ ಸ್ಥಾನದಲ್ಲಿ ಮಿರ್ಜಾ ಆಲಿ ಮುಂದುವರೆದಿದ್ದಾರೆ. ಭಾಸ್ಕರ್‌ ರಾವ್‌ ಅವರು ಆಯುಕ್ತರಾಗಿ ನೇಮಕಾತಿ ಆದೇಶ ಹೊರ ಬೀಳುವ ಕೆಲ ಗಂಟೆಗಳ ಮುಂಚೆ ಹಿರಿಯ ಅಧಿಕಾರಿ, ಮಿರ್ಜಾ ಅವರ ಸುಪರ್ದಿಯಲ್ಲಿರುವ ಇಲಾಖೆಯ ಲ್ಯಾಪ್‌ಟಾಪ್‌ನಲ್ಲಿ ಅಡಕವಾಗಿದ್ದ ಆಡಿಯೋವನ್ನು ಪಡೆದಿದ್ದರು. ನಂತರ ಆಡಿಯೋ ಮಾಧ್ಯಮಗಳಿಗೆ ಬಹಿರಂಗವಾಗಿದೆ ಎಂಬ ಅಂಶವು ಮಧ್ಯಂತರ ವರದಿಯಲ್ಲಿ ಉಲ್ಲೇಖಿತವಾಗಿದೆ ಎನ್ನಲಾಗುತ್ತಿದೆ.

ಫರಾಜ್‌ ಕದ್ದಾಲಿಕೆಗೆ ಅನುಮತಿ?

ವಿಲ್ಸನ್‌ ಗಾರ್ಡನ್‌ ಠಾಣೆಯಲ್ಲಿ ವಂಚನೆ ಪ್ರಕರಣದಲ್ಲಿ ಫರಾಜ್‌ ಹೆಸರು ಕೇಳಿ ಬಂದಿತು. ಈ ಪ್ರಕರಣದ ಆಧರಿಸಿ ಆತನ ಫೋನ್‌ ಕದ್ದಾಲಿಕೆಗೆ ಆಯುಕ್ತರಿಂದ ಸಿಸಿಬಿ ಮುಖ್ಯಸ್ಥ ಅಲೋಕ್‌ ಕುಮಾರ್‌ ಅನುಮತಿ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಕದ್ದಾಲಿಕೆ ಬಳಿಕ ಫರಾಜ್‌ ಮೇಲೆ ಮುಂದಿನ ಕಾನೂನು ಪ್ರಕ್ರಿಯೆ ಕುರಿತು ಪ್ರಶ್ನೆಗಳು ಹುಟ್ಟುಕೊಂಡಿವೆ. ಆ ವಂಚನೆ ಪ್ರಕರಣದ ತನಿಖಾಧಿಕಾರಿ ಯತಿರಾಜ್‌ ಅವರಿಗೂ ಸಹ ಸಂಕಷ್ಟತಂದೊಡ್ಡಿದೆ ಎನ್ನಲಾಗಿದೆ.

 ಸಿಐಡಿ ತನಿಖೆಗೆ?

ಈ ಪೋನ್‌ ಕದ್ದಾಲಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು ಅವರು, ಈ ಬಗ್ಗೆ ಎಫ್‌ಐಆರ್‌ ದಾಖಲಿಸಿ ಸಮಗ್ರ ತನಿಖೆಗೆ ಒಳಪಡಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಕದ್ದಾಲಿಕೆಗೆ ಅನುಮತಿ ಪಡೆದಿದ್ದರೂ ಸಹ ಅದನ್ನು ಬಹಿರಂಗಗೊಳಿಸಿದ್ದು ಕಾನೂನು ಬಾಹಿರವಾಗುತ್ತದೆ. ಹೀಗಾಗಿ ಟೆಲಿಗ್ರಾಫ್‌ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ಡಿಜಿಪಿ ವಹಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

 ಕದ್ದಾಲಿಕೆಗೆ 7 ದಿನ ಮಾತ್ರ ಅನುಮತಿ!

ಅಪರಾಧ ಪ್ರಕರಣ ಮತ್ತು ದೇಶದ್ರೋಹಿ ಚಟುವಟಿಕೆಗಳಲ್ಲಿ ನಿರಂತರಾಗಿರುವ ಶಂಕಿತರ ಫೋನ್‌ ಕದ್ದಾಲಿಕೆಗೆ ಪೊಲೀಸರಿಗೆ ಕಾನೂನು ಪ್ರಕಾರ ಅವಕಾಶವಿದೆ. ಈ ಕದ್ದಾಲಿಕೆಗೆ ರಾಜ್ಯದಲ್ಲಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಪೊಲೀಸ್‌ ಆಯುಕ್ತ ಹಾಗೂ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥರಿಗೆ ಅನುಮತಿ ನೀಡುವ ಅಧಿಕಾರವಿದೆ. ಈ ಕದ್ದಾಲಿಕೆಗೆ ಒಳ ಪಡುವ ವ್ಯಕ್ತಿಯ ಮೇಲಿನ ಆರೋಪಗಳು ಹಾಗೂ ಕದ್ದಾಲಿಕೆ ನಂತರ ಸಹ ಇಡೀ ಸಂಭಾಷಣೆ ಕುರಿತು ಸರ್ಕಾರಕ್ಕೆ ತನಿಖಾಧಿಕಾರಿಗಳು ಸಮಗ್ರ ವರದಿ ಸಲ್ಲಿಸುವ ನಿಯಮವಿದೆ.

ಬೆಂಗಳೂರು ನಗರದಲ್ಲಿ ಆಯುಕ್ತರಿಂದ ಫೋನ್‌ ಕದ್ದಾಲಿಕೆಗೆ ಅಧಿಕಾರಿಗಳು ಅನುಮತಿ ಪಡೆಯುತ್ತಾರೆ. ಹಾಗೆ ಜಿಲ್ಲೆ ಮತ್ತು ನಗರಗಳ ಪೊಲೀಸರು, ಆಯಾ ವಲಯ ಐಜಿಪಿ ಅಥವಾ ಆಯುಕ್ತರ ಮೂಲಕ ಗೃಹ ಇಲಾಖೆಗೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಅನುಮತಿ ಪಡೆದುಕೊಳ್ಳುತ್ತಾರೆ. ಈ ಕದ್ದಾಲಿಕೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ನಗರದಲ್ಲಿ ಡಿಸಿಪಿ ಕಚೇರಿಗಳಲ್ಲಿ ಪ್ರತ್ಯೇಕ ವಿಭಾಗವಿದೆ. ಇನ್ನು ಫೋನ್‌ ಕದ್ದಾಲಿಕೆ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಸಹ ಪೊಲೀಸರಿಗೆ ಮಾರ್ಗಸೂಚಿ ನೀಡಿದ್ದು, ಅದರಂತೆ ಪ್ರಕ್ರಿಯೆ ನಡೆಸಬೇಕಿದೆ. ಇಲ್ಲಿ ಬಂದ್‌ ಮತ್ತು ಪ್ರತಿಭಟನೆ ಸಂದರ್ಭದಲ್ಲಿ ಕೆಲವು ಸಂಘಟನೆಗಳ ಮುಖಂಡರ ಕದ್ದಾಲಿಕೆಗೆ ವಿನಾಯತಿ ಇದೆ. ಇವುಗಳನ್ನು ವಿಶೇಷ ಸಂದರ್ಭಗಳು ಎಂದು ಪರಿಗಣಿಸಲಾಗುತ್ತದೆ.

ಯಾವುದೇ ವ್ಯಕ್ತಿಯ ಫೋನ್‌ ಕದ್ದಾಲಿಕೆಗೆ ಏಳು ದಿನಗಳು ಮಾತ್ರ ಅವಕಾಶವಿದೆ. ನಮ್ಮ ರಾಜ್ಯದಲ್ಲಿ ಫೋನ್‌ ಕದ್ದಾಲಿಕೆಗೆ ಅತ್ಯಾಧುನಿಕ ಪರಿಕರವೊಂದನ್ನು ಬಳಸಲಾಗುತ್ತದೆ. ಆ ಪರಿಕರದಲ್ಲಿ ಶಂಕಿತ ದೂರವಾಣಿ ಸಂಖ್ಯೆ ನಮೂದಿಸಿದರೆ, ತಾನಾಗಿ ಆ ಸಂಖ್ಯೆಗೆ ನಡೆಸುವ ಸಂಭಾಷಣೆಗಳ ಆಡಿಯೋ ರೆಕಾರ್ಡಿಂಗ್‌ ಆಗಲಿದೆ. ಅದೇ ರೀತಿ ಹೊರ ರಾಜ್ಯಗಳಲ್ಲಿ ದೂರವಾಣಿ ಸಂಸ್ಥೆಗಳಿಂದ ಪ್ರತ್ಯೇಕ ಸಿಮ್‌ ಅನ್ನು ಪಡೆಯುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಳಕಿಗೆ ಬಂದಿದ್ದು 2ನೇ ಪ್ರಕರಣ

ಬೆಂಗಳೂರು ನಗರದ ಕಮಿಷನರೇಟ್‌ ಮಟ್ಟದಲ್ಲಿ ಬಹಿರಂಗವಾದ ಎರಡನೇ ಕದ್ದಾಲಿಕೆ ಪ್ರಕರಣವಾಗಿದೆ. 2016ರಲ್ಲಿ ನಗರದಲ್ಲಿ ಕಾವೇರಿ ಗಲಾಟೆ ಸಂದರ್ಭದಲ್ಲಿ ಅಂದಿನ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಮತ್ತು ಕನ್ನಡಪರ ಸಂಘಟನೆಯೊಂದರ ಮುಖ್ಯಸ್ಥರ ನಡುವಿನ ಫೋನ್‌ ಸಂಭಾಷಣೆ ಬಹಿರಂಗವಾಗಿತ್ತು. ಈ ಸಂಬಂಧ ಅಂದಿನ ಪಶ್ಚಿಮ ವಿಭಾಗದ ಡಿಸಿಪಿ ಅಜಯ್‌ ಹಿಲೋರಿ ವಿರುದ್ಧ ಹೆಚ್ಚುವರಿ ಆಯುಕ್ತ ಚರಣ್‌ ರೆಡ್ಡಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರು. ಆ ವರದಿ ಇನ್ನೂ ಡಿಜಿಪಿ ಕಚೇರಿಯಲ್ಲಿ ಧೂಳು ತಿನ್ನುತ್ತಿದೆ.