ಐಐಎಸ್ಸಿ, ರೈಟ್ಸ್‌, ಮೆಟ್ರೋ ಆಂತರಿಕ ಸಮಿತಿ ತನಿಖೆ ಆರಂಭ, ತಾಯಿ-ಮಗು ಸಾವಿಗೆ ತಾಂತ್ರಿಕ ದೋಷ ಕಾರಣವೇ ಎಂಬ ಬಗ್ಗೆ ತನಿಖೆ, ಗುತ್ತಿಗೆದಾರ ಕಂಪನಿಗೆ ನೋಟಿಸ್‌, 3 ದಿನದಲ್ಲಿ ವರದಿಗೆ ಸೂಚನೆ, ಯಾರೇ ತಪ್ಪಿತಸ್ಥರಾದರೂ ಕಾನೂನು ಕ್ರಮ ಖಚಿತ: ಮೆಟ್ರೋ ಎಂಡಿ ಅಂಜುಮ್‌ ಪರ್ವೇಜ್‌ 

ಬೆಂಗಳೂರು(ಜ.12): ಮೆಟ್ರೋದ ನಿರ್ಮಾಣ ಹಂತದ ಪಿಲ್ಲರ್‌ ಉರುಳಿ ತಾಯಿ ಮಗು ಮೃತಪಟ್ಟಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ರೈಟ್ಸ್‌ ಹಾಗೂ ಬಿಎಂಆರ್‌ಸಿಎಲ್‌ ಆಂತರಿಕ ತಂಡ ದುರಂತಕ್ಕೆ ಕಾರಣ ಕಂಡುಕೊಳ್ಳಲು ತಾಂತ್ರಿಕ ತನಿಖೆ ಆರಂಭಿಸಿವೆ.

ಬಿಎಂಆರ್‌ಸಿಎಲ್‌ ಮನವಿ ಮೇರೆಗೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಅಧಿಕಾರಿಗಳು ಬುಧವಾರ ಪರಿಶೀಲನೆ ಆರಂಭಿಸಿದರು. ಪಿಲ್ಲರ್‌ ಕುಸಿಯಲು ತಾಂತ್ರಿಕ ದೋಷ ಕಾರಣವೇ ಅಥವಾ ಅಧಿಕಾರಿಗಳ ನಿರ್ಲಕ್ಷ್ಯವೇ ಎಂಬುದರ ಬಗ್ಗೆ ವರದಿ ನೀಡಲಿದೆ. ಇದರ ಜೊತೆಗೆ ರೈಟ್ಸ್‌ ಸಂಸ್ಥೆ ಕೂಡ ತನಿಖೆ ನಡೆಸುತ್ತಿದೆ. ಬಿಎಂಆರ್‌ಸಿಎಲ್‌ ಸಹ ರಚಿಸಿರುವ ಮೂವರು ಅಧಿಕಾರಿಗಳ ಆಂತರಿಕ ತಾಂತ್ರಿಕ ತನಿಖಾ ಸಮಿತಿ ಬುಧವಾರ ಸಂಜೆ ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ, ಸೈಟ್‌ ಎಂಜಿನಿಯರ್‌ಗಳು ಗುತ್ತಿಗೆ ಸಂಸ್ಥೆಯ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ.

ಮೆಟ್ರೋ ಪಿಲ್ಲರ್‌, ರಸ್ತೆ ಗುಂಡಿಯಿಂದ ಜನರ ಸಾವಿಗೆ ಸರ್ಕಾರ ಹೊಣೆ: ರಾಮಲಿಂಗಾರೆಡ್ಡಿ

ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಸಂಸ್ಥೆ ಹೈದ್ರಾಬಾದ್‌ ಮೂಲದ ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿ (ಎನ್‌ಸಿಸಿ) ಆಡಳಿತ ವಿಭಾಗಕ್ಕೆ ಮತ್ತೊಂದು ನೋಟಿಸ್‌ ನೀಡಲಾಗಿದ್ದು, ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.
ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌, ‘ತನಿಖೆಗೆ ರಚಿಸಲಾದ ಐಐಎಸ್‌ಸಿ, ರೈಟ್ಸ್‌ ಹಾಗೂ ಬಿಎಂಆರ್‌ಸಿಎಲ್‌ ಆಂತರಿಕ ತಂಡಗಳಿಂದ ಶೀಘ್ರ ವರದಿ ಪಡೆಯಲಾಗುವುದು. ಯಾರು ತಪ್ಪಿತಸ್ಥರೆಂದು ತಿಳಿದ ಬಳಿಕ ಕ್ರಮ ವಹಿಸುತ್ತೇವೆ. ಬಿಎಂಆರ್‌ಸಿಎಲ್‌ ಅಧಿಕಾರಿಗಳಿದ್ದರೆ ಅವರನ್ನು ಅಮಾನತ್ತು ಮಾಡಲಾಗುವುದು. ಗುತ್ತಿಗೆದಾರ ಕಂಪನಿಯ ದೋಷ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಬಿಎಂಆರ್‌ಸಿಎಲ್‌ ಹತ್ತು ವರ್ಷ ಪೂರೈಸಿದ್ದು, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಗುತ್ತಿಗೆದಾರರು ತರುವ ನಿರ್ಮಾಣ ಪರಿಕರ, ಕಚ್ಚಾ ವಸ್ತುಗಳನ್ನು ತಪಾಸಣೆ ಮಾಡಲು ಪ್ರತ್ಯೇಕ ತಂಡವಿದೆ. ಸಿಮೆಂಟ್‌, ಮರಳು, ಸ್ಟೀಲನ್ನು ತಪಾಸಣೆ ಮಾಡಿಯೇ ಕ್ರಮ ವಹಿಸುತ್ತೇವೆ. ಕೆಲಸ ಮಾಡುವಾಗಲೂ ನಿರಂತರ ತಪಾಸಣೆ ನಡೆಸಲಾಗುತ್ತದೆ ಅಂತ ಮೆಟ್ರೋ ಎಂಡಿ ಅಂಜುಮ್‌ ಪರ್ವೇಜ್‌ ತಿಳಿಸಿದ್ದಾರೆ. 

ಎತ್ತರದ ಪಿಲ್ಲರ್‌ ಸ್ಟ್ರಕ್ಚರ್‌ ತೆರವು

ಪಿಲ್ಲರ್‌ ನಿರ್ಮಾಣಕ್ಕಾಗಿ ನಿಲ್ಲಿಸಲಾದ 18-20 ಅಡಿ ಎತ್ತರದ ಸ್ಟೀಲ್‌, ಕಬ್ಬಿಣದ ಸ್ಟ್ರಕ್ಚರ್‌ಗಳನ್ನು ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಎರಡು ಹಂತದಲ್ಲಿ ಕಾಂಕ್ರೀಟ್‌ ಹಾಕಲು ನಿರ್ಧರಿಸಲಾಗಿದೆ. ದುರಂತಕ್ಕೆ ಕಾರಣವಾದ ಪಿಲ್ಲರ್‌ ಮಾದರಿಯಂತೆ ಎತ್ತರದ ಥ್ರೆಡ್‌ ವೈರ್‌ ತೆಗೆದು ಸ್ಟೀಲ್‌ ಕಂಬಿಗಳನ್ನು ಕೆಳಕ್ಕೆ ಇಳಿಸಲಾಯಿತು. ಈ ರೀತಿ ನಾಲ್ಕು ಪಿಲ್ಲರ್‌ಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ತೆರವು ಮಾಡಲಾಗುತ್ತಿದೆ. ಕೆ.ಆರ್‌.ಪುರ-ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವೆ ಮೇಲ್ಸೇತುವೆ ಬರುವ ಕಾರಣ ಕಂಬಗಳನ್ನು ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿವರೆಗೆ ನಿರ್ವಹಣೆ ಕಾರಣಕ್ಕೆ ಈ ಮಾರ್ಗದಲ್ಲಿ ಏಕಕಾಲಕ್ಕೆ ಪಿಲ್ಲರ್‌ ಸ್ಟ್ರಕ್ಚರ್‌ ರೂಪಿಸಿಕೊಂಡು ಬಳಿಕ ಕಾಂಕ್ರೀಟ್‌ ಹಾಕಲಾಗುತ್ತಿತ್ತು. ಇನ್ನು ಮುಂದೆ ಮೊದಲ ಹಂತದಲ್ಲಿ 10 ಅಡಿ ಎತ್ತರ ಸ್ಟೇಜಿಂಗ್‌ ಮಾಡಿಕೊಂಡು ಬಳಿಕ ಇನ್ನುಳಿದ ಹಂತವನ್ನು ಕಾಂಕ್ರಿಟಿಕರಣ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಏರ್‌ಪೋರ್ಚ್‌ ಮಾರ್ಗದಲ್ಲಿನ ಎತ್ತರದ ಪಿಲ್ಲರ್‌ಗಳನ್ನು ಗುರುತಿಸಿ ಕಂಬಿಗಳನ್ನು ಇಳಿಸಲು ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್‌ಗೆ ತಾಯಿ-ಮಗು ಬಲಿ: ಕಾಮಗಾರಿ ಸ್ಥಳದಲ್ಲಿ ಮೃತ್ಯು ರಣಕೇಕೆ

ವೈರ್‌ ತುಂಡಾಗಿ ದುರ್ಘಟನೆ?

ಪ್ರಾಥಮಿಕ ಮಾಹಿತಿ ಪ್ರಕಾರ ಪಿಲ್ಲರ್‌ಗೆ ನಾಲ್ಕು ಕಡೆಯಿಂದ ಗೈ ವೈರ್‌ (ಟ್ವಿಸ್ಟೆಡ್‌ ಸ್ಟೀಲ್‌ ವೈರ್‌) ಅಳವಡಿಸಲಾಗಿತ್ತು. ಅದರಲ್ಲಿ ಒಂದು ವೈರ್‌ ತುಂಡಾಗಿ ಸಂಪೂರ್ಣ ಒತ್ತಡ ಒಂದೆಡೆ ವಾಲಿ ಪಿಲ್ಲರ್‌ ಸ್ಟ್ರಕ್ಚರ್‌ ಬಿದ್ದಿದೆ ಎನ್ನಲಾಗಿದೆ.

ವರದಿ ಕೇಳಿದ ಕೇಂದ್ರ

ಪಿಲ್ಲರ್‌ ಬೀಳಲು ಕಾರಣವೇನು ಎಂಬುದು ಸೇರಿ ಸಮಗ್ರ ವರದಿ ನೀಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಬಿಎಂಆರ್‌ಸಿಎಲ್‌ಗೆ ಸೂಚಿಸಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ಅವರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಕರೆ ಮಾಡಿ ಮಾಹಿತಿ ಕೇಳಿದ್ದಾರೆ. ಎರಡು ದಿನಗಳಲ್ಲಿ ವರದಿ ನೀಡುವುದಾಗಿ ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದರು.