ರಾಜ್ಯ ಸರ್ಕಾರದ ಅಮೃತ್‌ ನಗರೋತ್ಥಾನ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು ಮತ್ತು ಬಿಬಿಎಂಪಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ.

ಬೆಂಗಳೂರು(ಜೂ.28): ಬಿಬಿಎಂಪಿಯಲ್ಲಿ 2019 ರಿಂದ 2023ರ ಅವಧಿಯಲ್ಲಿ ಕೈಗೊಂಡ ಎಲ್ಲಾ ಕಾಮಗಾರಿಗಳನ್ನು ಪರಿಶೀಲನೆ ನಡೆಸುವುದಕ್ಕೆ ಒಟ್ಟು ಐದು ಸಮಿತಿ ರಚನೆ ಮಾಡುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಲಾಗಿದ್ದು, ಈ ಬಗ್ಗೆ ಸರ್ಕಾರಿ ಆದೇಶ ಹೊರ ಬೀಳುವುದು ಬಾಕಿ ಇದೆ.

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ ಸೂಚನೆಯ ಮೇರೆಗೆ ಈ ದಿಸೆಯಲ್ಲಿ ಸಿದ್ಧತೆ ನಡೆದಿದೆ. ಘನತ್ಯಾಜ್ಯ ನಿರ್ವಹಣೆ, ರಸ್ತೆ ಮತ್ತು ಮೂಲಸೌಕರ್ಯ, ಬೃಹತ್‌ ನೀರುಗಾಲುವೆ, ಕೆರೆ ಅಭಿವೃದ್ಧಿ ಹಾಗೂ ಒಎಫ್‌ಸಿ ಅನುಮತಿ ಹಾಗೂ ವಾರ್ಡ್‌ ಮಟ್ಟದ ಕಾಮಗಾರಿಗಳ ಪರಿಶೀಲನೆಗೆ ತೀರ್ಮಾನಿಸಲಾಗಿದೆ.

ಬಿಬಿಎಂಪಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹೆಚ್ಚಳಕ್ಕೆ ತಜ್ಞರಿಗೆ ಮೊರೆ

ರಾಜ್ಯ ಸರ್ಕಾರದ ಅಮೃತ್‌ ನಗರೋತ್ಥಾನ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು ಮತ್ತು ಬಿಬಿಎಂಪಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ.
ಕಾಮಗಾರಿಯ ಟೆಂಡರ್‌ ಅಂದಾಜು ಪಟ್ಟಿ, ಟೆಂಡರ್‌ ಪ್ರಕ್ರಿಯೆ, ಕಾಮಗಾರಿ ಗುಣಮಟ್ಟ, ಕಾಮಗಾರಿ ಪೂರ್ಣಗೊಂಡಿದೆಯೇ, ಬಿಲ್‌ ಪಾವತಿ ಹೀಗೆ ಸೇರಿದಂತೆ ವಿವಿಧ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪರಿಶೀಲನೆ ನಡೆಸಲು ಸೂಚಿಸಲಾಗುತ್ತಿದೆ.

ಅಧಿಕಾರಿಗಳ ನಿಯೋಜನೆ:

ಐದು ವಿಭಾಗದ ಕಾಮಗಾರಿ ನಡೆಸುವುದಕ್ಕೆ ಒಬ್ಬೊಬ್ಬ ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಅದರಂತೆ ವಿ.ರಶ್ಮಿ ಮಹೇಶ್‌ ಅವರಿಗೆ ಘನತ್ಯಾಜ್ಯ ವಿಭಾಗದ ಕಾಮಗಾರಿಯ ತನಿಖೆ ಸಾರಥ್ಯ ವಹಿಸಲಾಗಿದೆ. ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಯ ತನಿಖೆಯನ್ನು ಹರ್ಷಗುಪ್ತ, ಬೃಹತ್‌ ನೀರುಗಾಲುವೆ ಕಾಮಗಾರಿಯನ್ನು ಮುನೀಶ್‌ ಮೌದ್ಗಿಲ್‌, ಕೆರೆ ಅಭಿವೃದ್ಧಿ ಕಾಮಗಾರಿ ಮತ್ತು ಒಎಫ್‌ಸಿ ಅನುಮತಿಯ ಬಗ್ಗೆ ಡಾ.ಆರ್‌.ವಿಶಾಲ್‌ ಹಾಗೂ ವಾರ್ಡ್‌ ಮಟ್ಟದ ಕಾಮಗಾರಿಯ ತನಿಖೆಯನ್ನು ರಾಜೇಂದ್ರ ಕುಮಾರ್‌ ಕಠಾರಿಯ ಅವರಿಗೆ ವಹಿಸಲಾಗಿದೆ.

ಈ ಅಧಿಕಾರಿಗಳನ್ನು ಆಯಾ ತನಿಖಾ ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ಜತೆಗೆ, ನಿವೃತ್ತ ಎಂಜಿನಿಯರ್‌ಗಳನ್ನು ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಗುತ್ತಿದೆ. ಸದಸ್ಯರನ್ನು ಬದಲಾವಣೆ ಮಾಡುವ ಮತ್ತು ಹೆಚ್ಚಿನ ಸದಸ್ಯರ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಸಮಿತಿಯ ಅಧ್ಯಕ್ಷರಿಗೆ ನೀಡಲಾಗಿದೆ.

ಡಿಸೆಂಬರ್‌ ಒಳಗೆ ಬಿಬಿಎಂಪಿ ಚುನಾವಣೆ: ಸಚಿವ ರಾಮಲಿಂಗಾರೆಡ್ಡಿ

30 ದಿನದಲ್ಲಿ ವರದಿ

ರಚನೆ ಮಾಡಿರುವ ಸಮಿತಿಯುವ ಸರ್ಕಾರ ಸೂಚಿಸಿದಂತೆ ಪರಿಶೀಲನೆ ನಡೆಸಿ 30 ದಿನದಲ್ಲಿ ವರದಿ ನೀಡುವಂತೆ ನಿರ್ದೇಶಿಸಲಾಗಿದೆ. ಒಟ್ಟು 10 ಅಂಶಗಳ ಪಟ್ಟಿ ನೀಡಲಾಗಿದ್ದು, ಈ ಅಂಶಗಳನ್ನು ಆಧಾರಿಸಿ ತನಿಖೆ ನಡೆಸಬೇಕು ಎಂದು ಸೂಚಿಸಲಾಗಿದೆ.

ತನಿಖೆಯ 10 ಅಂಶಗಳು

1. ಕಾನೂನಾತ್ಮಕವಾಗಿ ಅನುಮತಿ ಪಡೆದು ಕಾಮಗಾರಿ ನಡೆಸಲಾಗಿದೆಯೇ?
2.ಕೆಪಿಟಿಪಿ ಕಾಯ್ದೆಯಡಿ ಸರ್ಕಾರದ ಅನುಮೋದನೆ ಪಡೆಯಲಾಗಿದೆಯೇ?
3.ಟೆಂಡರ್‌ ಪ್ರಕ್ರಿಯೆಯಲ್ಲಿ ನಿಯಮ ತಿರುಚುವಿಕೆ, ಅನರ್ಹರಿಗೆ ಟೆಂಡರ್‌ ಮೊದಲಾದ ಅಕ್ರಮ ನಡೆದಿದೆಯೇ?
4.ಗುತ್ತಿಗೆದಾರರ ದಾಖಲಾತಿ ಮತ್ತು ಅರ್ಹತೆ ಪರಿಶೀಲನೆ.
5.ಒಬ್ಬ ಗುತ್ತಿಗೆದಾರರ ಹೆಸರಲ್ಲಿ ಕಾಮಗಾರಿ ನೀಡಿ ಮತ್ತೊಬ್ಬರ ಹೆಸರಲ್ಲಿ ಹಣ ಬಿಡುಗಡೆಯಾಗಿದೆಯೇ?
6.ಟೆಂಡರ್‌ ನಡೆಸದೇ, ಹಳೆ ಗುತ್ತಿಗೆದಾರರನ್ನು ಮುಂದುವರೆಸಲಾಗಿದೆಯೇ?
7.ಅಧಿಕ ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನವಾಗಿದೆಯೇ?
8.ಅನಗತ್ಯ ಕಾಮಗಾರಿ ಕೈಗೊಳ್ಳಲಾಗಿದೆಯೇ?
9.ಅನುದಾನ ದುರುಪಯೋಗಕ್ಕೆ ಕಾಮಗಾರಿ ಕೈಗೊಳ್ಳಲಾಗಿದೆಯೇ?
10.ಸಮಿತಿಯ ಗಮನಿಸುವ ಇತರ ಗಂಭೀರ ವಿಷಯಗಳು