Asianet Suvarna News Asianet Suvarna News

ಬಿಬಿಎಂಪಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹೆಚ್ಚಳಕ್ಕೆ ತಜ್ಞರಿಗೆ ಮೊರೆ

ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಶಾಲಾ-ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಶಿಕ್ಷಣ ಇಲಾಖೆಯ ನಿವೃತ್ತ ಹಿರಿಯ ಶಿಕ್ಷಣ ಅಧಿಕಾರಿಗಳನ್ನು ಸಲಹೆಗಾರರಾಗಿ ನೇಮಕಕ್ಕೆ ಪಾಲಿಕೆ ಮುಂದಾಗಿದೆ. 

Appeal to experts to increase the quality of education in BBMP schools gvd
Author
First Published Jun 26, 2023, 5:43 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಜೂ.26): ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಶಾಲಾ-ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಶಿಕ್ಷಣ ಇಲಾಖೆಯ ನಿವೃತ್ತ ಹಿರಿಯ ಶಿಕ್ಷಣ ಅಧಿಕಾರಿಗಳನ್ನು ಸಲಹೆಗಾರರಾಗಿ ನೇಮಕಕ್ಕೆ ಪಾಲಿಕೆ ಮುಂದಾಗಿದೆ. ಬಿಬಿಎಂಪಿಯು ನಗರ ವ್ಯಾಪ್ತಿಯಲ್ಲಿ ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ನಡೆಸುತ್ತಿದೆ. 

ಈ ಶಾಲಾ-ಕಾಲೇಜುಗಳಿಗೆ ಮಧ್ಯಮ ಮತ್ತು ಕೆಳ ವರ್ಗದ ಕುಟುಂಬದ ವಿದ್ಯಾರ್ಥಿಗಳೇ ಹೆಚ್ಚಾಗಿ ದಾಖಲಾಗುತ್ತಾರೆ. ಇನ್ನು ಕೊರೋನಾ ಬಳಿಕ ದಾಖಲಾತಿ ಪ್ರಮಾಣ 17 ಸಾವಿರದಿಂದ 23 ಸಾವಿರಕ್ಕೆ ಏರಿಕೆಯಾಗಿದೆ. ಹೀಗಾಗಿ, ಬಿಬಿಎಂಪಿ ಶಾಲಾ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮಾಡುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಇದೀಗ ಬಿಬಿಎಂಪಿಯು ಶೈಕ್ಷಣಿಕ ಸಲಹೆಗಾರರನ್ನು ನಿಯೋಜನೆ ಮಾಡಿಕೊಳ್ಳುತ್ತಿದೆ.

ರಸ್ತೆಯಲ್ಲಿ ಹಾಡಹಗಲೇ ಎಣ್ಣೆಪಾರ್ಟಿ: ಮೂವರು ಪೊಲೀಸರು ಅಮಾನತು

ಐವರು ಸಲಹೆಗಾರರು: ಒಬ್ಬ ಹಿರಿಯ ಶೈಕ್ಷಣಿಕ ಸಲಹೆಗಾರರು ಹಾಗೂ ನಾಲ್ವರು ಶೈಕ್ಷಣಿಕ ಸಲಹೆಗಾರರನ್ನು ನೇಮಕ ಮಾಡಿಕೊಳ್ಳುತ್ತಿರುವ ಬಿಬಿಎಂಪಿ ಶಿಕ್ಷಣ ವಿಭಾಗವು ಈಗಾಗಲೇ ಅರ್ಜಿ ಆಹ್ವಾನಿಸಿ ಅಭ್ಯರ್ಥಿಗಳನ್ನು ಸಂದರ್ಶನ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದೆ. ಆದರೆ, ಅಂತಿಮಗೊಳಿಸಿಲ್ಲ. ಶಿಕ್ಷಣ ಇಲಾಖೆಯ ಸೇವೆಯಿಂದ ಕಳೆದ ಐದು ವರ್ಷದೊಳಗೆ ನಿವೃತ್ತರಾಗಿರುವವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಡಿಡಿಪಿಐ, ಜಂಟಿ ನಿರ್ದೇಶಕರ ದರ್ಜೆಯ ಅಧಿಕಾರಿಯನ್ನು ಹಿರಿಯ ಶೈಕ್ಷಣಿಕ ಸಲಹೆಗಾರರ ಹುದ್ದೆಗೆ, ಬಿಇಒ ಹಾಗೂ ಹಿರಿಯ ಉಪನ್ಯಾಸಕರನ್ನು ಶೈಕ್ಷಣಿಕ ಸಲಹೆಗಾರ ಹುದ್ದೆಗೆ ನೇಮಿಸಲಾಗುತ್ತಿದೆ. ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಲಹೆಗಾರರ ಕೆಲಸ ಏನು?: ನೇಮಕಗೊಳ್ಳುವ ಸಲಹೆಗಾರರು ಬಿಬಿಎಂಪಿಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಹೆಚ್ಚಿಸುವುದಕ್ಕೆ ಬೇಕಾದ ಕ್ರಮ ಕೈಗೊಳ್ಳುವುದು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯ ಫಲಿತಾಂಶ ಹೆಚ್ಚಿಸುವುದು. ಬಿಬಿಎಂಪಿ ಶಾಲಾ-ಕಾಲೇಜು ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವುದು. ಬೋಧನಾ ಸಾಮರ್ಥ್ಯ ಹೆಚ್ಚಿಸುವುದಾಗಿದೆ.

25 ಸಾವಿರ ವಿದ್ಯಾರ್ಥಿಗಳ ದಾಖಲು ಗುರಿ: 2023-24ನೇ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಜೂನ್‌ 30ರ ವರೆಗೆ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದ್ದು, ಈವರೆಗೆ 21 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬಿಬಿಎಂಪಿಯ ಶಾಲಾ ಕಾಲೇಜಿನಲ್ಲಿ ದಾಖಲಾತಿ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಸುಮಾರು 23 ಸಾವಿರ ವಿದ್ಯಾರ್ಥಿಳು ದಾಖಲಾಗಿದ್ದರು. ಈ ವರ್ಷ ಸುಮಾರು 25 ಸಾವಿರ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಗುರಿಯನ್ನು ಬಿಬಿಎಂಪಿ ಶಿಕ್ಷಣ ವಿಭಾಗ ಹಾಕಿಕೊಂಡಿದೆ ಎಂದು ಬಿಬಿಎಂಪಿ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಶಾಲಾ ಕಾಲೇಜಿನ ದಾಖಲಾತಿ ವಿವರ
ಹಂತ ವಿದ್ಯಾರ್ಥಿಗಳ ಸಂಖ್ಯೆ

ಶಿಶು ವಿಹಾರ 3,751
ಪ್ರಾಥಮಿಕ ಶಾಲೆ 3,744
ಪ್ರೌಢ ಶಾಲೆ 7,636
ಪದವಿ ಪೂರ್ವ 4,105
ಪದವಿ 1298
ಸ್ನಾತಕೋತ್ತರ ಪದವಿ 88
ಒಟ್ಟು 20,622

ಬಿಜೆಪಿ-ಜೆಡಿ​ಎಸ್‌ ಮೈತ್ರಿ ಆಗಬಹುದು ಎಂದು ಅನಿಸುತ್ತಿದೆ: ಯೋಗೇಶ್ವರ್‌

ಪಾಲಿಕೆ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಅಗತ್ಯ ತರಬೇತಿ, ಕಾರ್ಯಗಾರ, ಸಲಹೆ, ಸೂಚನೆ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಹೆಚ್ಚಿಸುವ ಉದ್ದೇಶದಿಂದ ಶಿಕ್ಷಣ ತಜ್ಞರನ್ನು ನಿಯೋಜನೆ ಮಾಡಲಾಗುತ್ತಿದೆ.
-ವೆಂಕಟರಾಜು, ಉಪ ಆಯುಕ್ತ, ಪಾಲಿಕೆ ಶಿಕ್ಷಣ ವಿಭಾಗ

Follow Us:
Download App:
  • android
  • ios