ಮೈಸೂರು(ಡಿ.01): ಹುಣಸೂರು ವಿಧಾನಸಭಾ ಕ್ಷೇತ್ರದ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಅಭ್ಯರ್ಥಿಯನ್ನು ಮಣಿಸಿ ಆಡಳಿತ ರೂಢ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌, ಗೆಲ್ಲಲು ಕಳೆದ 40 ವರ್ಷಗಳ ಸೇವಾನುಭವ ಮತ್ತು ಅಭಿವೃದ್ಧಿಯ ಜೊತೆಗೆ ನೂರಾರು ಕನಸುಗಳ ಯೋಜನೆಯೊಂದಿಗೆ ಕಮಲ ಅರಳಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ 93 ಸಾವಿರ ಮತಗಶಳನ್ನು ಪಡೆದು ಆಯ್ಕೆಯಾಗಿದ್ದ ವಿಶ್ವನಾಥ್‌, ಈಗ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದು, ಕಳೆದ 14 ತಿಂಗಳು ಅವರು ಮಾಡಿರುವ ಕೆಲಸ ಮತ್ತು ಸರ್ಕಾರದ ನೂರಾರು ಕನಸುಗಳೊಂದಿಗೆ ಹುಣಸೂರಿನ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಈ ವೇಳೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

1.ಹುಣಸೂರು ಕ್ಷೇತ್ರದಲ್ಲಿ ನಿಮ್ಮ ಗುರಿ ಏನು?

ಕ್ಷೇತ್ರದಲ್ಲಿ ದೂರದೃಷ್ಟಿಇಟ್ಟುಕೊಂಡು ಕೃಷಿ, ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿ ಮಾಡುವ ಮೂಲಕ ಹುಣಸೂರು ಕ್ಷೇತ್ರ ಮಾದರಿ ಕ್ಷೇತ್ರ ಮಾಡುವ ಪಣ ಹೊಂದಿದ್ದೇನೆ.

2. ಈ ಉಪ ಚುನಾವಣೆಯಲ್ಲಿ ನಿಮ್ಮ ಪ್ರತಿಸ್ಪರ್ಧಿ ಯಾರು? ಏಕೆ ಸ್ಪರ್ಧೆ ಮಾಡಿದ್ದೀರಿ?

ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದೆ ಎನ್ನುತ್ತಿದ್ದಾರೆ. ಆದರೆ, ನನಗೆ ಜೆಡಿಎಸ್‌ ಅಭ್ಯರ್ಥಿ ಸೋಮಶೇಖರ್‌ ನನ್ನ ಪ್ರತಿಸ್ಪರ್ಧಿಯಾಗಿದ್ದಾರೆ. ಕಳೆದ ಸಮಿಶ್ರ ಸರ್ಕಾರ ನಡೆಸುವಾಗ ಎಚ್‌.ಡಿ. ಕುಮಾರಸ್ವಾಮಿ ಅವರು ನನ್ನ ಸಲಹೆಗಳನ್ನು ತೆಗೆದುಕೊಳ್ಳಲಿಲ್ಲ. ಕ್ಷೇತ್ರದ ಅಭಿವೃದ್ಧಿಗೂ ವಿಶೇಷ ಅನುದಾನ ಕೊಡಲಿಲ್ಲ. ಹಾಗಾಗಿ ನಾನು ರಾಜ್ಯದ ಹಿತ ಕಾಯಲು ಮತ್ತು ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ನಾನು ರಾಜೀನಾಮೆ ನೀಡಿದ್ದರಿಂದ ಈ ಉಪ ಚುನಾವಣೆ ಬಂದಿದೆ. ಈ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಚಿವನಾಗಿ ಹುಣಸೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವೆ.

3. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರನ್ನು ಏಕೆ ಹೊಗಳುತ್ತಿದ್ದೀರಿ?

ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ನನ್ನ ವೈರಿಗಳಲ್ಲ. ನನ್ನ ಅತ್ಮೀಯರು. ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ಶ್ಲಾಘಿಸಿದ್ದೇನೆ. ಕೆಟ್ಟವಿಚಾರಗಳನ್ನು ಖಂಡಿಸಿ ಬುದ್ಧಿ ಹೇಳಿದ್ದೇನೆ. ಬದಲಾವಣೆ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ತಿಳಿಹೇಳಿದ್ದೇನೆಯೇ ಹೊರೆತು, ಆರೋಪಗಳಲ್ಲ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತೀನಿ ಎಂದಿರುವುದು ಸತ್ಯ. ನನಗೆ ರಾಜಕೀಯವಾಗಿ ಸಹಾಯ ಮಾಡಿದ್ದಾರೆ. ಹೊಗಳಿಕೆಯಲ್ಲಿ ಯಾವುದೇ ಚುನಾವಣೆ ಗಿಮಿಕ್‌ ಇಲ್ಲ ಎಂದರು.

4. ಈ ಉಪ ಚುನಾವಣೆಯಲ್ಲಿ ಗೆಲ್ಲಲು ಯಾವ ತಂತ್ರಗಾರಿಕೆ ಮಾಡಿದ್ದೀರಿ?

ನಾನು ಕಳೆದ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾವುದೇ ತಂತ್ರಗಾರಿಕೆ ಮತ್ತು ಕುತಂತ್ರ ಮಾಡಿ ಗೆದ್ದಿಲ್ಲ. ಆದರೆ, ನಾನೊಬ್ಬ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜು ಅರಸು ಶಿಷ್ಯ. ಶಾಂತಿ ಸಮಾಧಾನದಿಂದ ಎಲ್ಲ ವರ್ಗಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಮನೋಭಾವ ಇರುವ ವ್ಯಕ್ತಿತ್ವ ನನ್ನಲಿದೆ. ಹಾಗಾಗಿ ಸಣ್ಣಪುಟ್ಟಸಮುದಾಯಗಳು ದೊಡ್ಡ ಮಟ್ಟದ ಸಮುದಾಗಳನ್ನು ಪ್ರೀತಿಸುವುದರಿಂದ ಯಾವುದೇ ತಂತ್ರಗಾರಿಕೆ ಬೇಕಿಲ್ಲ.

ಹುಣಸೂರು ವಿಧಾನಸಭೆ, ಮೈಸೂರು ಲೋಕಸಭಾ ಚುನಾವಣೆಗೂ ನಂಟು!

5. ಹುಣಸೂರು ಜಿಲ್ಲೆಯ ಕನಸು ಏಕೆ? ನಿಮಗೆ ಜನ ಮತ್ತು ಸರ್ಕಾರದ ಸ್ಪಂದನೆ ನೀಡುತ್ತಿದ್ದರಾ?

ಹುಣಸೂರು ಜಿಲ್ಲೆ ಮಾಡುವ ವಿಚಾರ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಕೆಲವರು ಪ್ರಸ್ತಾಪಿಸಿದ್ದರು. ಹಾಗಾಗೀ ನಾನು ಹುಣಸೂರು ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ಇದರ ವ್ಯಾಪ್ತಿಯಲ್ಲಿ ಬರುವ ಹುಣಸೂರು, ಸರಗೂರು, ಎಚ್‌.ಡಿ. ಕೋಟೆ, ಪಿರಿಯಾಪಟ್ಟಣ, ಕೆ.ಆರ್‌. ನಗರ ಹಾಗೂ ಸಾಲಿಗ್ರಾಮ ಸೇರಿದಂತೆ 6 ತಾಲೂಕಗಳನ್ನೊಳಗೊಂಡು ಜಿಲ್ಲಾ ಕೇಂದ್ರ ಮಾಡಿ ಜಿಲ್ಲಾ ಕಚೇರಿ ಮತ್ತು ಮಾರುಕಟ್ಟೆಗಳು ಬರುವುದರಿಂದ ಸಮಗ್ರ ಅಭಿವೃದ್ಧಿ ಮಾಡುವ ಕನಸು ಇದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ, ಬೆಂಬಲ ನೀಡುತ್ತಿದ್ದಾರೆ. ಸರ್ಕಾರವು ಕೂಡ ಸ್ಪಂದಿಸುತ್ತಿದೆ. ಜಿಲ್ಲೆ ಮಾಡಲು ಯಾವುದೇ ಸಮಸ್ಯೆ ಇಲ್ಲ.

ಮಂಡ್ಯ: ಜೆಡಿಎಸ್‌, ಬಿಜೆಪಿ ಕಾರ‍್ಯಕರ್ತರ ಹೊಡೆದಾಟ

6. ಹುಣಸೂರು ಕ್ಷೇತ್ರದಲ್ಲಿ ಕಾಯಕ ಸಮುದಾಯದ ಮತ ಸೆಳೆಯುವ ಪ್ಲಾನ್‌ ಏನು?

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹುಣಸೂರು ಕ್ಷೇತ್ರದಲ್ಲಿ ಸಣ್ಣ ಪುಟ್ಟಸಮುದಾಯಗಳ ಅಭಿವೃದ್ಧಿಗಾಗಿ ಶ್ರಮವಹಿಸಿದ್ದರು. ಅವರ ಶಿಷ್ಯನಾದ ನಾನು ಅವರ ತತ್ವ ಆದರ್ಶಗಳನ್ನು ಇಟ್ಟುಕೊಂಡು ಕಳೆದ 40 ವರ್ಷದಿಂದ ರಾಜಕೀಯವಾಗಿ ಸೇವೆ ಮಾಡಿಕೊಂಡು ಬಂದಿದ್ದೇನೆ. ಹಾಗಾಗಿ ಮತ ಸೆಳೆಯಲು ಪ್ಲಾನ್‌ ಮಾಡುವ ಬದಲು ಅವರ ಪ್ರೀತಿ- ವಿಶ್ವಾಸವೆ ನನ್ನ ಮತದಾನ ಮಾಸ್ಟರ್‌ ಪ್ಲಾನ್‌ ಆಗಿದೆ.

-ಧರ್ಮಾಪುರ ನಾರಾಯಣ್‌