ಸರಗೂರು (ಆ.30):  ನೆರೆಯಿಂದಾಗಿ ತಾಲೂಕಿನ ಹಳೇಹೆಗ್ಗುಡಿಲು ಗ್ರಾಮದ ನಿವಾಸಿ ಬೇಬಿ ನೀಲಕಂಠ ಅವರ ವಾಸದ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ವಾಸಿಸಲು ಯೋಗ್ಯ ಮನೆವಿಲ್ಲದೆ ಹೋಗೆಸೊಪ್ಪಿನ ಬ್ಯಾರನ್‌ನಲ್ಲಿ ವಾಸಿಸುತ್ತಿದ್ದಾರೆ

ಮಲಗಲು ಸೂಕ್ತ ಜಾಗವಿಲ್ಲದೆ ಮನೆಯಿಂದ ಹೊರಗಡೆ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ವಾರದ ಹಿಂದೆ ಸುರಿದ ನಿರಂತರ ಮಳೆಗೆ ವಾಸದ ಮನೆ ಸಂಪೂರ್ಣವಾಗಿ ಕುಸಿದಿತ್ತು. ಕುಟುಂಬಸ್ಥರು ಕುಸಿದ ಬಿದ್ದ ಮನೆಯ ಮುಂಭಾಗದಲ್ಲಿ ಶೆಡ್‌ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಆದರೆ, ಅದೂ ಸಂಪೂರ್ಣವಾಗಿ ಕುಸಿದಿದ್ದು, ವಾಸಿಸಲು ಮನೆ ಇಲ್ಲದೆ ಪರದಾಡುತ್ತಿದ್ದಾರೆ.

ಮನೆಯ ಪಕ್ಕದಲ್ಲೇ ಹೋಗೆಸೊಪ್ಪಿಗಾಗಿ ಬ್ಯಾರನ್‌ ನಿರ್ಮಿಸಿಕೊಂಡಿದ್ದು, ಅಲ್ಲಿಯೇ ವಾಸಿಸುತ್ತಿದ್ದಾರೆ. ಇಲ್ಲಿಯೇ ಮನೆಯ ಸಾಮಾನುಗಳನ್ನು ಇಟ್ಟುಕೊಂಡಿದ್ದು, ಮಲಗಲು ಜಾಗವಿಲ್ಲದಂತಾಗಿದೆ. ಕುಟುಂಬದಲ್ಲಿ ಐದು ಮಂದಿ ಸದಸ್ಯರಿದ್ದು, ಈ ಪೈಕಿ ಇಬ್ಬರು ಮನೆಯಿಂದ ಹೊರಗಡೆ ಮಲಗುತ್ತಿದ್ದಾರೆ. ಇದಲ್ಲದೆ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಬ್ಯಾರಲ್‌ನಲ್ಲೇ ಪಾಠ, ಪ್ರವಚನ ನಡೆಸುತ್ತಿದ್ದಾರೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೂ ತುಂಬಾ ತೊಂದರೆಯಾಗಿದೆ ಎನ್ನುತ್ತಾರೆ ಬೇಬಿ ನೀಲಕಂಠ.

ಬ್ರಹ್ಮಗಿರಿ ಬೆಟ್ಟ ಕುಸಿತ; ಈ ಕಾರಣಕ್ಕೆ ಕಾವೇರಿ ತಾಯಿ ಮುನಿಸಿಕೊಂಡಳಾ?...

ನೆರೆಯಿಂದಾಗಿ ಮನೆ ಕಳೆದುಕೊಂಡ ಬೇಬಿ ನೀಲಕಂಠ ಅವರ ಪತಿ ನೀಲಕಂಠ ವೀರಗಾಸೆ ಕಲಾವಿದ. ಅಂತಾರಾಷ್ಟ್ರೀಯ ವೀರಗಾಸೆ ಕಲಾವಿದ, ವೀರಗಾಸೆ ರತ್ನ ಪ್ರಶಸ್ತಿ ವಿಜೇತ. ಇವರು ತಲಾತಲಾಂತರದಿಂದ ವೀರಗಾಸೆ ಕಲೆಯನ್ನು ಮೈಗೂಡಿಸಿಕೊಂಡಿ ಬಂದಿದ್ದರೂ ಸರ್ಕಾರ ನಮಗೆ ಸೌಲಭ್ಯ ನೀಡದಿರುವುದು ಬೇಸರ ಸಂಗತಿಯಾಗಿದೆ ಎಂದು ನೀಲಕಂಠ ಅಳಲು ತೋಡಿಕೊಂಡರು.

ಗ್ರಾಮದ ವ್ಯಾಪ್ತಿಗೆ ಬರುವ ಕಂದಾಯ ಇಲಾಖಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಬಡ ಕಲಾವಿದರಾಗಿದ್ದರಿಂದಾಗಿ ತಾಲೂಕು ಆಡಳಿತ ಸೂಕ್ತ ಮನೆ ನಿರ್ಮಿಸಿಕೊಳ್ಳಲು ಪರಿಹಾರ ಧನವನ್ನು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.