ಬೆಂಗಳೂರು[ನ.23]: ಮುಂದಿನ ಎರಡು ವರ್ಷಗಳಲ್ಲಿ ಆರ್‌.ವಿ.ರಸ್ತೆ- ಬೊಮ್ಮಸಂದ್ರದ ನಡುವಿನ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದ್ದು, ಆರ್‌.ವಿ.ರಸ್ತೆ (ಹಸಿರು ಮಾರ್ಗ) ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಇಂಟರ್‌ಲಿಂಕ್‌ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಬೊಮ್ಮಸಂದ್ರ(2ನೇ ಹಂತ)ದಿಂದ ಎಲಿವೇಟೆಡ್‌ ಮಾರ್ಗವನ್ನು ಹಸಿರು ಮಾರ್ಗದ ವಯಾಡಕ್ಟ್ಗಳ ಮೇಲೆ ನಿರ್ಮಿಸುವ ಕಾರ್ಯವನ್ನು ಕಳೆದ ವಾರ ಬಿಎಂಆರ್‌ಸಿಎಲ್‌ ಆರಂಭಿಸಿತ್ತು.

ಹಸಿರು ಮಾರ್ಗದ ಮೇಲ್ಸೇತುವೆಯ ಮೇಲೆ ಅಡ್ಡವಾಗಿ ಬೊಮ್ಮಸಂದ್ರದ ಹೊಸ ಮೆಟ್ರೋ ಮಾರ್ಗದ ಮೇಲ್ಸೇತುವೆ ನಿರ್ಮಾಣದ ಕೆಲಸವನ್ನು ಬಿಎಂಆರ್‌ಸಿಎಲ್‌ ಕೈಗೊಂಡಿತ್ತು. ಈ ಕಾಮಗಾರಿಯು ಪ್ರಸ್ತುತ ಹಸಿರು ಮಾರ್ಗದ ಆರ್‌.ವಿ.ರಸ್ತೆ ನಿಲ್ದಾಣದ ಮತ್ತು ನಿರ್ಮಾಣ ಹಂತದಲ್ಲಿರುವ ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ಕಾರಿಡಾರ್‌ ನಡುವಿನ ಆರ್‌.ವಿ.ರಸ್ತೆ ಮೆಟ್ರೋ ನಿಲ್ದಾಣದ ಅಭಿವೃದ್ಧಿಯ ಭಾಗವಾಗಿತ್ತು. ಹೀಗಾಗಿ ನಾಲ್ಕು ದಿನಗಳ ಕಾಲ ಆರ್‌.ವಿ.ರಸ್ತೆ- ಯಲಚೇನಹಳ್ಳಿ ಮಾರ್ಗದ ಮೆಟ್ರೋ ಸಂಚಾರವನ್ನು ಮೆಟ್ರೋ ನಿಗಮ ರದ್ದುಪಡಿಸಿತ್ತು.

ನಮ್ಮ ಮೆಟ್ರೋ ಕಾಮಗಾರಿಗೆ 265 ಮರಗಳ ಕಟಾವು

ಆರ್‌.ವಿ.ರಸ್ತೆ- ಬೊಮ್ಮಸಂದ್ರ (ಹಳದಿ ಮಾರ್ಗ)ದ ಮಾರ್ಗವು ರಸ್ತೆ ಮಟ್ಟಕ್ಕಿಂತ 19.8 ಮೀಟರ್‌ ಎತ್ತರದಲ್ಲಿದ್ದರೆ, ಹಸಿರು ಮಾರ್ಗವು 11.5 ಮೀ. ಎತ್ತರದಲ್ಲಿದೆ. ರಸ್ತೆ ಮಟ್ಟದಿಂದ 18ರಿಂದ 19 ಮೀಟರ್‌ ಎತ್ತರದಲ್ಲಿ ವಯಾಡಕ್ಟ್ ಅಳವಡಿಸುವ ಕಾಮಗಾರಿಯೂ ಅತ್ಯಂತ ಸವಾಲಿನದ್ದಾಗಿತ್ತು. ಪ್ರತಿದಿನ 12 ಗಂಟೆ ಹಗಲು ರಾತ್ರಿ ಕೆಲಸ ಮಾಡಿ 99 ಗಂಟೆಗಳಲ್ಲಿ ಕೆಲಸ ಪೂರೈಸಲಾಗಿದೆ. ಈಗಾಗಲೇ ಆರ್‌.ವಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ಪೂರ್ಣಗೊಂಡಿದೆ. ಹಳದಿ ಮಾರ್ಗವು ವಯಾಡಕ್ಟ್ಗಳನ್ನು ಹಾದು ಹೋಗುತ್ತಿರುವ ಮೊದಲ ಎಲಿವೇಟೆಡ್‌ ಮಾರ್ಗವಾಗಿದೆ. ಆರ್‌.ವಿ.ರಸ್ತೆ ಮೆಟ್ರೋ ನಿಲ್ದಾಣ (1ನೇ ಹಂತ)ವನ್ನು ಹೊರತುಪಡಿಸಿ ಬೇರೆಲ್ಲೂ ವಯಾಡಕ್ಟ್ಗಳನ್ನು ಮೆಟ್ರೋ ಮಾರ್ಗ ದಾಟಿ ಹೋಗುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌ ಮತ್ತು ಸಿಲ್‌್ಕಬೋರ್ಡ್‌- ಕೆಆರ್‌ಪುರಂ ಕಾರಿಡಾರ್‌ಗಳು ಕೆ.ಆರ್‌.ಪುರಂನಲ್ಲಿ ದಾಟಲಿವೆ. ಗೊಟ್ಟಿಗೆರೆ- ನಾಗವಾರ ಮಾರ್ಗವು ಜಯದೇವ ಜಂಕ್ಷನ್‌ನಲ್ಲಿರುವ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗವನ್ನು ದಾಟಲಿದೆ. ಮೈಸೂರು ರಸ್ತೆಯ ವಯಾಡಕ್ಟ್ಗಳು- ಕೆಂಗೇರಿ(18.2 ಮೀ), ನಾಗಸಂದ್ರ- ಬಿಇಇಸಿ (18.9 ಮೀ), ಯಲಚೇನಹಳ್ಳಿ- ಅಂಜನಾಪುರ(19.96ಮೀ) ಮತ್ತು ಆರ್‌ವಿ ರಸ್ತೆ- ಬೊಮ್ಮಸಂದ್ರ(16.65 ಮೀ) ಮಾರ್ಗಗಳು ನೈಸ್‌ ರಸ್ತೆಗಳನ್ನು ದಾಟಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರ್‌.ವಿ.ರಸ್ತೆ- ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವಿನ 6.34 ಕಿ.ಮೀ. ರಸ್ತೆಯನ್ನು ಮುಂದಿನ ಮಾಚ್‌ರ್‍ ವೇಳೆಗೆ ಪುನರ್‌ ಸ್ಥಾಪಿಸಲಾಗುವುದು. ಜಯದೇವ ಆಸ್ಪತ್ರೆ ಮೇಲ್ಸೇತುವೆ ಮತ್ತು ಉಡುಪಿ ಗಾರ್ಡನ್‌ ಸಿಗ್ನಲ್‌ ನಡುವಿನ ವಿಸ್ತರಣೆಯನ್ನು ನ.30ರೊಳಗೆ ಪೂರ್ಣಗೊಳಿಸಲಾಗುವುದು. ಈಗಾಗಲೇ ಭಾಗಶಃ ಡಾಂಬರೀಕರಣಗೊಂಡಿದ್ದು, ಶೀಘ್ರವೇ ಇತರ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮೆಟ್ರೋ ನಿಗಮ ಮಾಹಿತಿ ನೀಡಿದೆ.

12 ಕಿ.ಮೀ. ಕಾಮಗಾರಿ ಬಾಕಿ

ಆರ್‌.ವಿ.ರಸ್ತೆ- ಬೊಮ್ಮಸಂದ್ರದ ಮೆಟ್ರೋ ಮಾರ್ಗ(ಹಳದಿ ಮಾರ್ಗ) 18.82 ಕಿ.ಮೀ ಉದ್ದವಿದ್ದು, 16 ನಿಲ್ದಾಣಗಳನ್ನು ಒಳಗೊಂಡಿದ್ದು ಮೂರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಆರ್‌.ವಿ.ರಸ್ತೆ-ಎಚ್‌ಎಸ್‌ಆರ್‌ ಲೇಔಟ್‌(6.34 ಕಿ.ಮೀ) ಕಾಮಗಾರಿ ಮುಗಿದಿದ್ದು, ಕಳೆದ ವಾರ ಇಂಟರ್‌ಲಿಂಕಿಂಗ್‌ ನಿಲ್ದಾಣದ ಕಾಮಗಾರಿಯೂ ಪೂರ್ಣಗೊಂಡಿದೆ. ಉಳಿದಂತೆ ಹೊಸ ರಸ್ತೆ- ಎಚ್‌ಎಸ್‌ಆರ್‌ ಲೇಔಟ್‌(6.4 ಕಿ.ಮೀ), ಬೊಮ್ಮಸಂದ್ರ- ಹೊಸರಸ್ತೆ (6.41 ಕಿ.ಮೀ) ನಡುವೆ ಕಾಮಗಾರಿ ನಡೆಯುತ್ತಿದ್ದು 2021ಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಪ್ರಯಾಣಿಕರೇ ಗಮನಿಸಿ; ಯಲಚೇನಹಳ್ಳಿ- ಆರ್‌ವಿ ರೋಡ್ ಮೆಟ್ರೋ ರೈಲು 4 ದಿನ ಸ್ಥಗಿತ!

ಸವಾಲಿನ ಕೆಲಸ

*ಆರ್‌.ವಿ.ರಸ್ತೆಯಲ್ಲಿ ಯೆಲ್ಲೋ- ಹಸಿರು ಮಾರ್ಗ ಲಿಂಕ್‌

*ಹಸಿರು ಮಾರ್ಗದ ವಯಾಡಕ್ಟ್ಗಳ ಮೇಲೆ ಯೆಲ್ಲೋ ಮಾರ್ಗದ ವಯಾಡಕ್ಟ್ ನಿರ್ಮಾಣ ಪೂರ್ಣ

*19.8 ಮೀಟರ್‌ ಎತ್ತರದಲ್ಲಿ ವಯಾಡಕ್ಟ್ಗಳ ಅಳವಡಿಕೆ ಬಲು ತ್ರಾಸದಾಯಕ

*ಪ್ರತಿದಿನ 13 ಗಂಟೆ ಕಾರ‍್ಯ ನಿರ್ವಹಣೆ, 99 ಗಂಟೆ ಕೆಲಸ ಮಾಡಿ ವಯಾಡಕ್ಟ್ ಅಳವಡಿಕೆ