Asianet Suvarna News Asianet Suvarna News

ಮೈಸೂರಲ್ಲಿ ರಾತ್ರೋ ರಾತ್ರಿ ರಾಜೇಂದ್ರ ಶ್ರೀಗಳ ಪ್ರತಿಮೆ ಪ್ರತಿಷ್ಠಾಪನೆ: ರಾಜವಂಶಸ್ಥೆ ಪ್ರಮೋದಾದೇವಿ ವಿರೋಧ

ಪ್ರತಿಮೆ ಪ್ರತಿಷ್ಠಾಪನೆ ಕುರಿತು ಈ ಹಿಂದೆ ಜಿಲ್ಲಾಡಳಿತ, ಸುತ್ತೂರು ಮಠದ ನಡುವೆ ಪತ್ರ ವ್ಯವಹಾರ ನಡೆದಿತ್ತು. ಇದೀಗ ಏಕಾಏಕಿ ಖಾಲಿ ತಳಹದಿ ಮೇಲೆ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದ್ದು, ಹಲವು ವರ್ಷಗಳಿಂದ ವಿವಾದವಾಗಿ ಉಳಿದಿದ್ದ ಪ್ರತಿಮೆ ನಿರ್ಮಾಣ ವಿಚಾರವು ಈಗ ಮತ್ತೆ ವಿವಾದಕ್ಕೆ ಕಾರಣವಾಗಿದೆ.
 

Installation of statue of Rajendra Shri in Mysuru grg
Author
First Published Dec 10, 2023, 5:30 PM IST

ಮೈಸೂರು(ಡಿ.10):  ಮೈಸೂರು ಅರಮನೆಯ ದಕ್ಷಿಣ ದ್ವಾರದ ವೃತ್ತದಲ್ಲಿ ರಾತ್ರೋರಾತ್ರಿ ಡಾ. ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಇದಕ್ಕೆ ಅರಸು ಜನಾಂಗ ಹಾಗೂ ಮೈಸೂರು ರಾಜವಂಶಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರು ಅರಮನೆ ಸಮೀಪದ ಗನ್‌ ಹೌಸ್ ವೃತ್ತದಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಯನ್ನು ಶುಕ್ರವಾರ ರಾತ್ರೋರಾತ್ರಿ ಸ್ಥಾಪಿಸಲಾಗಿದೆ. ಸಮುದಾಯದವರು ಕ್ರೇನ್ ಮೂಲಕ ಪ್ರತಿಮೆ ತಂದು ನಿಲ್ಲಿಸಿದ್ದಾರೆ. ಅನಧಿಕೃತವಾಗಿ ಪ್ರತಿಮೆ ನಿಲ್ಲಿಸಿರುವುದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅರಸು ಸಮುದಾಯ ಮುಖಂಡರು ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಸಹ ಪ್ರತಿಭಟಿಸಿದ್ದಾರೆ.

ಜಾತಿಗಣತಿ ನಡೆದರೆ ಮಾತ್ರ ರಾಷ್ಟ್ರದ ಸಂಪತ್ತು ಸಮಾನವಾಗಿ ಹಂಚಿಕೆ

ಈ ವಿಚಾರವು ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ, ಪೊಲೀಸರು ಪ್ರತಿಮೆಗೆ ಬಿಳಿ ಬಟ್ಟೆಯನ್ನು ಸುತ್ತಿದ್ದಾರೆ. ಗನ್ ಹೌಸ್ ವೃತ್ತದ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಪ್ರತಿಮೆ ಪ್ರತಿಷ್ಠಾಪನೆ ಕುರಿತು ಈ ಹಿಂದೆ ಜಿಲ್ಲಾಡಳಿತ, ಸುತ್ತೂರು ಮಠದ ನಡುವೆ ಪತ್ರ ವ್ಯವಹಾರ ನಡೆದಿತ್ತು. ಇದೀಗ ಏಕಾಏಕಿ ಖಾಲಿ ತಳಹದಿ ಮೇಲೆ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದ್ದು, ಹಲವು ವರ್ಷಗಳಿಂದ ವಿವಾದವಾಗಿ ಉಳಿದಿದ್ದ ಪ್ರತಿಮೆ ನಿರ್ಮಾಣ ವಿಚಾರವು ಈಗ ಮತ್ತೆ ವಿವಾದಕ್ಕೆ ಕಾರಣವಾಗಿದೆ.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ

ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆ ನಿರ್ಮಾಣಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ವತಃ ಪತ್ರ ಬರೆದಿರುವ ಪ್ರಮೋದಾದೇವಿ ಒಡೆಯರ್ ಅವರು, ಮೈಸೂರಿನ ಗನ್ ಹೌಸ್ ಬಳಿ ತಡರಾತ್ರಿ ಕ್ರೇನ್ ಉಪಯೋಗಿಸಿ ಪ್ರತಿಮೆ ಸ್ಥಾಪಿಸಲು ಮುಂದಾಗಿರುವ ವಿಷಯ ಅತ್ಯಂತ ದುರದೃಷ್ಟಕರ ಸಂಗತಿ. ಈ ಕುರಿತು ಪ್ರಬುದ್ಧ ಸಂಸ್ಥೆಯಿಂದ ಇಂತಹ ಘಟನೆ ನಿಜಕ್ಕೂ ಸಮಂಜಸವಲ್ಲ. ಉದ್ದೇಶಿತ ಪ್ರತಿಮೆಯ ಸ್ಥಾಪನೆಗೆ ಸತತವಾಗಿ ಪ್ರತಿರೋಧ ತೋರಿದ ಸಾರ್ವಜನಿಕರಿಗೆ ಸ್ಪಂದಿಸಿ ಈ ಬಗ್ಗೆ ಪುನರ್ವಿಮರ್ಶೆ ಮಾಡಲು ಮನವಿ ಕೂಡ ತಲುಪಿಸಿ ನನ್ನ ಬೆಂಬಲ ಸೂಚಿಸಿದ್ದೆ ಎಂದು ತಿಳಿಸಿದ್ದಾರೆ.

ರಾಜೇಂದ್ರ ಶ್ರೀಗಳಿಗೆ ಅವಮಾನ ಕಾನೂನು ಹೋರಾಟ ಮುಂದುವರಿಕೆ

ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ರಾತ್ರೋರಾತ್ರಿ ರಾಜೇಂದ್ರ ಶ್ರೀಗಳ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಶ್ರೀಗಳಿಗೆ ಅಪಮಾನಿಸಿದ್ದು, ಇದೆಲ್ಲದರ ವಿರುದ್ಧ ನಮ್ಮ‌ ಕಾನೂನು ಹೋರಾಟ ಮುಂದುವರೆಸುವುದಾಗಿ ಅರಸು ಮಂಡಳಿಯ ಅಮರನಾಥ ರಾಜೇ ಅರಸ್ ತಿಳಿಸಿದರು.

ರಾಜೇಂದ್ರ ಶ್ರೀಗಳ ಪ್ರತಿಮೆಯನ್ನು ರಾತ್ರಿಯ ವೇಳೆ ಇರಿಸುವ ಮೂಲಕ ಅವರಿಗೆ ಅವಮಾನ ಮಾಡಿದ್ದಾರೆ. ಜೆಎಸ್ಎಸ್ ಸಂಸ್ಥೆಗೆ ಅವಮಾನ ಮಾಡಿದ್ದಾರೆ. ಪ್ರತಿಮೆ ನಿರ್ಮಾಣಕ್ಕೆ ಯಾವುದೇ ಸ್ಪಷ್ಟ ದಾಖಲಾತಿ ಇಲ್ಲ. ಮೈಸೂರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬರ ಪರಿಹಾರಕ್ಕೆ ರೈತ ಸಂಪರ್ಕ ಕೇಂದ್ರದಲ್ಲಿ ನೊಂದಣಿ ಮಾಡಿಸಿ: ಯತೀಂದ್ರ ಸಿದ್ದರಾಮಯ್ಯ

ಸದರಿ ಸ್ಥಳದಲ್ಲಿ ರಾಜವಂಶಸ್ಥರಾದ ದಿ.ಶ್ರೀಕಂಠದತ್ತ ನರಸಿಂರಾಜ ಒಡೆಯರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕು. ರಾಜ ಮನೆತನದವರ ಪ್ರತಿಮೆ ಇರಿಸಲು ಆಗುವುದಿಲ್ಲ ಎಂದರೆ, ಶ್ರೀ ಚಾಮುಂಡೇಶ್ವರಿ ಪ್ರತಿಮೆ ಇರಿಸಬೇಕು. ಯಾವುದೋ ಒಂದು ಸಮಿತಿ ಸೇರಿಕೊಂಡು ಪ್ರತಿಮೆ ಇರಿಸುವುದಕ್ಕೆ ಬಿಡೋದಿಲ್ಲ. ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ನ ಆದೇಶ ಪಾಲನೆ ಮಾಡಿಲ್ಲ. ನಾವು ನ್ಯಾಯುತವಾಗಿ ಹೋರಾಟ ಮಾಡುತ್ತೇವೆ ಎಂದರು.

ಮೈಸೂರು ಅರಮನೆಗೆ ಮೋಸ ಆಗುತ್ತಿದೆ. ಕೋರ್ಟ್ ಆದೇಶ ಬಂದರೆ ಯಾವುದೇ ಪ್ರತಿಮೆ ನಿರ್ಮಾಣಕ್ಕೆ ನಾವು ಒಪ್ಪಿಕೊಳ್ಳುತ್ತೇವೆ. ಅದು ಹೊರತಾಗಿ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದರು.
ಮುಖಂಡರಾದ ಶ್ರೀಧರ್ ರಾಜೇ ಅರಸ್, ಜೈದೇವ್ ಅರಸ್, ಶ್ರೀಕಾಂತ್ ರಾಜೇ ಅರಸ್ ಇದ್ದರು.

Follow Us:
Download App:
  • android
  • ios