ಬಳ್ಳಾರಿ ಬಳಿಕ ಬೆಳಗಾವಿ ವಿಭಜನೆಗೆ ಒತ್ತಾಯ: ನಾಲ್ಕು ಜಿಲ್ಲೆಗಾಗಿ ಹೆಚ್ಚಿದ ಕೂಗು

ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ, ಅಥಣಿ, ಬೈಲಹೊಂಗಲ ಜಿಲ್ಲೆಯನ್ನಾಗಿಸಲು ಒತ್ತಾಯ| ಆಡಳಿತ ಹಿತದೃಷ್ಟಿಯಿಂದ ಜಿಲ್ಲೆಯನ್ನು ವಿಭಜನೆ ಮಾಡಬಹುದು| ಗಡಿ ವಿಷಯ ನ್ಯಾಯಾಲಯದಲ್ಲಿದೆ. ಜತೆಗೆ ಹಲವು ತಾಂತ್ರಿಕ ಕಾರಣಗಳು ಎದುರಾಗುತ್ತಿರುವುದರಿಂದ ಸದ್ಯ ಜಿಲ್ಲಾ ವಿಭಜನೆ ಮಾಡುವುದು ಸೂಕ್ತವಲ್ಲ| 
 

Insist on the Four New Districts in Belagavi grg

ಜಗದೀಶ ವಿರಕ್ತಮಠ 

ಬೆಳಗಾವಿ(ಜ.13): ಇತ್ತೀಚೆಗೆ ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆ ಮಾಡಿದಾಗಿನಿಂದ ರಾಜ್ಯದ ವಿವಿಧ ಪ್ರದೇಶದಲ್ಲಿ ಪ್ರತ್ಯೇಕ ಜಿಲ್ಲೆಯ ಕೂಗು ಕೇಳಿ ಬರುತ್ತಿದೆ. ಅದರಲ್ಲೂ ರಾಜ್ಯದಲ್ಲೇ ಅತೀ ಹೆಚ್ಚು ತಾಲೂಕು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಚಿಕ್ಕೋಡಿ ಉಪ ವಿಭಾಗವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೆ ಇನ್ನೂ ಮೂರು ಜಿಲ್ಲೆ ಮಾಡಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.

ಬೆಳಗಾವಿ ಜಿಲ್ಲೆಯು 15 ತಾಲೂಕುಗಳನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ, ಬೆಳಗಾವಿ ಉಪ​ವಿಭಾಗ, ಬೈಲಹೊಂಗಲ ಉಪ​ವಿಭಾಗ ಹಾಗೂ ಚಿಕ್ಕೋಡಿ ಉಪ​ವಿಭಾಗ ಎಂದು ವಿಂಗಡಣೆ ಮಾಡಲಾಗಿದೆ. ಹಲವು ದಶಕಗಳಿಂದ ಚಿಕ್ಕೋಡಿ ಉಪವಿಭಾಗವನ್ನು ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ತೆರೆಮರೆಯಲ್ಲಿ ಹಲವು ಪ್ರಯತ್ನಗಳು ಹಾಗೂ ನೂರಾರು ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಕೇವಲ ಚಿಕ್ಕೋಡಿಯನ್ನು ಅಷ್ಟೇ ಜಿಲ್ಲೆಯನ್ನಾಗಿಸದೇ ಗೋಕಾಕ, ಬೈಲಹೊಂಗಲ ಹಾಗೂ ಅಥಣಿಯನ್ನು ಜಿಲ್ಲಾ ಕೇಂದ್ರವೆಂದು ಘೋಷಿಸುವಂತೆ ಕೂಗು ಕೇಳಿಬರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಯಾದರೆ ಉತ್ತಮ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಬೈಲಹೊಂಗಲ ಜಿಲ್ಲೆಯನ್ನಾಗಿ ಘೋಷಿಸುವಂತೆ ಈ ಹಿಂದಿನಿಂದ ಪ್ರತಿಭಟನೆಯನ್ನು ನಡೆಸಲಾಗಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.

ಇನ್ನು ಅಥಣಿಯು ಬೆಳಗಾವಿ ನಗರದಿಂದ ಸುಮಾರು 150 ಕಿಮೀ ದೂರವಿದ್ದು, ವಿಜಯಪುರದಿಂದ ಸುಮಾರು 75 ಕಿಮೀ ದೂರವಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಅಥಣಿ ತನ್ನದೆಯಾದ ಇತಿಹಾಸವಿದೆ. ಜಿಲ್ಲೆ ಮಾಡುವುದರಿಂದ ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ ಹೆಚ್ಚಾಗುತ್ತದೆ. ಮಹಾರಾಷ್ಟ್ರದ ಗಡಿಭಾಗದ ನಗರಗಳಾದ ಮೀರಜ್‌, ಸಾಂಗ್ಲಿ, ಜತ್ತ ಹಾಗೂ ರಾಜ್ಯದ ಪ್ರಮುಖ ಮತ್ತು ವಾಣಿಜ್ಯ ನಗರಗಳಿಗೆ ಒಳ್ಳೆಯ ರಸ್ತೆಯ ಸಂಪರ್ಕ ಹೊಂದಿದೆ. ಅಥಣಿ ತಾಲೂಕು ಕರ್ನಾಟಕದ ಅತಿದೊಡ್ಡ ಸಕ್ಕರೆ ಉದ್ಯಮ ಕೇಂದ್ರವಾಗಿದೆ. ಅಧಿಕ ಪ್ರಮಾಣದ ಸಕ್ಕರೆ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

ಖಾನಾಪುರ;   41ರ ಆಂಟಿ ಹಿಂದೆ 21 ಯುವಕ..ಪೋಟೋ ಸ್ಟುಡಿಯೋದಲ್ಲಿ ಪ್ರಣಯ!

ಆಡಳಿತಾತ್ಮಕ ದೃಷ್ಟಿಯಿಂದ ಚಿಕ್ಕೋಡಿಯನ್ನು ಜಿಲ್ಲೆ ಮಾಡಲು ಆಕ್ಷೇಪಣೆ ಕೇಳಿ ಬರುತ್ತಿಲ್ಲ. ಆದರೆ ಗೋಕಾಕನ್ನು ಜಿಲ್ಲೆಯನ್ನಾಗಿ ಮಾಡಿದ್ದಲ್ಲಿ ಉಪವಿಭಾಗವನ್ನು ಗಮನದಲ್ಲಿಟ್ಟುಕೊಂಡು ಬೈಲಹೊಂಗಲವನ್ನೂ ಜಿಲ್ಲೆಯನ್ನಾಗಿಸಬೇಕು ಎಂದು ಈ ಹಿಂದೆಯೇ ಹೋರಾಟ ಮಾಡಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬೈಲಹೊಂಗಲ, ಸವದತ್ತಿ, ಯರಗಟ್ಟಿ, ರಾಮದುರ್ಗ ಹಾಗೂ ಚನ್ನಮ್ಮನ ಕಿತ್ತೂರು ತಾಲೂಕುಗಳನ್ನು ಸೇರ್ಪಡೆ ಮಾಡಿಕೊಂಡು ಬೈಲಹೊಂಗಲ ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಇನ್ನು ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆ ನಿಪ್ಪಾಣಿಗಿದ್ದು, ಜಿಲ್ಲೆಯಾಗಿಸಿದಲ್ಲಿ ಉತ್ತಮ ಎಂಬ ಅಭಿಪ್ರಾಯವನ್ನು ಈ ಹಿಂದೆ ಸಚಿವೆ ಶಶಿಕಲಾ ಜೊಲ್ಲೆ ಅವರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು.

ಈ ಹಿಂದೆ ಆಡಳಿತಾತ್ಮಕ ದೃಷ್ಟಿಯಿಂದ ಚಿಕ್ಕೋಡಿ, ಬೆಳಗಾವಿ ಹಾಗೂ ಬೈಲಹೊಂಗಲವನ್ನು ಉಪವಿಭಾಗವನ್ನಾಗಿಸಲಾಗಿತ್ತು. ಚಿಕ್ಕೋಡಿ ಉಪವಿಭಾಗಕ್ಕೆ ಚಿಕ್ಕೋಡಿ, ರಾಯಬಾಗ, ಅಥಣಿ, ನಿಪ್ಪಾಣಿ, ಕಾಗವಾಡ ಸೇರಿವೆ. ಬೆಳಗಾವಿ ಉಪವಿಭಾಗಕ್ಕೆ ಬೆಳಗಾವಿ, ಖಾನಾಪುರ ಹಾಗೂ ಹುಕ್ಕೇರಿ ಸೇರಿದ್ದು, ಇನ್ನೂ ಬೈಲಹೊಂಗಲ ಉಪವಿಭಾಗಕ್ಕೆ ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ಸವದತ್ತಿ, ರಾಮದುರ್ಗ, ಗೋಕಾಕ, ಮೂಡಲಗಿ ಹೊಸದಾಗಿ ರಚನೆಯಾಗಿರುವ ಯರಗಟ್ಟಿ ತಾಲೂಕು ಸೇರಿದೆ. ಆದ್ದರಿಂದ ಬೈಲಹೊಂಗಲ ವಿಭಾಗಕ್ಕೆ ಏಳು ತಾಲೂಕುಗಳು ಒಳಪಡುತ್ತಿರುವುದರಿಂದ ಚಿಕ್ಕೋಡಿಯೊಂದಿಗೆ ಬೈಲಹೊಂಗಲ ಜಿಲ್ಲೆಯಾದರೆ ಉತ್ತಮ ಎಂಬುದು ಬೈಲಹೊಂಗಲ ಭಾಗದ ಜನರ ಒತ್ತಾಸೆಯಾಗಿದೆ.

ಅಥಣಿ ಜಿಲ್ಲೆ: ಸವದಿಗೆ ಇಕ್ಕಟ್ಟು

ಆಡಳಿತ ಹಿತದೃಷ್ಟಿಯಿಂದ ಜಿಲ್ಲೆಯನ್ನು ವಿಭಜನೆ ಮಾಡಬಹುದು. ಆದರೆ ಗಡಿ ವಿಷಯ ನ್ಯಾಯಾಲಯದಲ್ಲಿದೆ. ಜತೆಗೆ ಹಲವು ತಾಂತ್ರಿಕ ಕಾರಣಗಳು ಎದುರಾಗುತ್ತಿರುವುದರಿಂದ ಸದ್ಯ ಜಿಲ್ಲಾ ವಿಭಜನೆ ಮಾಡುವುದು ಸೂಕ್ತವಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಮೇಲಿಂದ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಆದರೆ ಡಿಸಿಎಂ ತವರಿನಲ್ಲಿಯೇ ಇದೀಗ ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಆಗ್ರಹ ಕೇಳಿ ಬರುತ್ತಿರುವುದರಿಂದ ಡಿಸಿಎಂ ಸವದಿ ಇಕ್ಕಟ್ಟಿಗೆ ಸಿಲುಕುವಂತಾಗಿದೆ.
 

Latest Videos
Follow Us:
Download App:
  • android
  • ios