ಧಾರವಾಡ(ಜ.16): ಕಾರಾಗೃಹದಲ್ಲಿ ಗುಣಮಟ್ಟದ ಊಟ ನೀಡಬೇಕೆಂದು ಆಗ್ರಹಿಸಿ ವಿಚಾರಣಾಧೀನ ಕೈದಿಯೊಬ್ಬ ಕಾರಾಗೃಹ ಆವರಣದಲ್ಲಿನ ತೆಂಗಿನ ಮರ ಏರಿ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.

ಬಳ್ಳಾರಿ ಜೈಲಿನಿಂದ ಕಳೆದ ಆರು ತಿಂಗಳ ಹಿಂದಷ್ಟೇ ಚೇತನ್‌ ಎಂಬ ವಿಚಾರಾಣಾಧೀನ ಕೈದಿ ಇಲ್ಲಿಗೆ ಸ್ಥಳಾಂತರವಾಗಿದ್ದು ಗುಣಮಟ್ಟದ ಆಹಾರ ನೀಡಬೇಕೆಂದು ಪದೇ ಪದೇ ಜೈಲಿನ ಸಿಬ್ಬಂದಿಗೆ ಕೇಳುತ್ತಿದ್ದನು. ಬುಧವಾರ ಬೆಳಗ್ಗೆ ಏಕಾಏಕಿ ತೆಂಗಿನ ಮರ ಏರಿ ಕುಳಿತು ಹಿರಿಯ ಅಧಿಕಾರಿಗಳು ಬಂದು ಭರವಸೆ ನೀಡುವವರೆಗೂ ಮರ ಇಳಿಯೋದಿಲ್ಲ ಎಂದು ಪಟ್ಟು ಹಿಡಿದಿದ್ದ. ಜೈಲು ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರೂ ಚೇತನ್‌ ಕೆಲ ಹೊತ್ತು ಇಳಿಯಲಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜೈಲು ಅಧೀಕ್ಷಕಿ ಅನಿತಾ ಆರ್‌. ಬೆಂಗಳೂರು ಪ್ರವಾಸದಲ್ಲಿರುವ ಕಾರಣ ಅವರು ಬಂದ ನಂತರ ಗಮನಕ್ಕೆ ತಂದು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಚೇತನ್‌ ಗಿಡದಿಂದ ಕೆಳಗೆ ಇಳಿದನು. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅಧೀಕ್ಷಕಿ ಅನಿತಾ, ಅನಾರೋಗ್ಯದ ಕಾರಣ ಬೆಂಗಳೂರಿಗೆ ತೆರಳಿದಾಗ ಈ ಘಟನೆ ನಡೆದಿದೆ. ಕೈದಿಗಳಿಗೆ ಗುಣಮಟ್ಟದ ಆಹಾರವನ್ನೇ ನೀಡುತ್ತಿದ್ದು ಪ್ರತಿಭಟಿಸಿದ ಕೈದಿ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಧಾರವಾಡಕ್ಕೆ ಬಂದ ನಂತರ ಈ ಕುರಿತು ಪ್ರತಿಕ್ರಿಯಿಸುತ್ತೇನೆ ಎಂದರು.

ಹಾವೇರಿ ಮೂಲದ ಶಿಗ್ಲಿ ಬಸ್ಯಾ ಎಂಬಾತ ಸಹ ನಾಲ್ಕೈದು ವರ್ಷಗಳ ಹಿಂದೆ ಧಾರವಾಡದ ಕಾರಾಗೃಹದಲ್ಲಿ ಕೈದಿಯಾಗಿದ್ದಾಗ ಜೈಲಿನ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಮರ ಏರಿ ಕುಳಿತಿದ್ದನ್ನು ಇಲ್ಲಿ ಸ್ಮರಿಸಬಹುದು.