Asianet Suvarna News Asianet Suvarna News

ಕೊಪ್ಪಳ: SSLC ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯಿಂದ ವಿನೂತನ ಕಾರ್ಯಕ್ರಮ

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿಯೇ ಪೂರ್ವಭಾವಿ ಪರೀಕ್ಷೆ| ಬೆಳಗ್ಗೆ 5 ಗಂಟೆಗೆ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಕರೆ| ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯಿಂದ ಹಲವು ಕಾರ್ಯಕ್ರಮ| ಫಲಿತಾಂಶ ಸುಧಾರಿಸಿದರೇ ಬೋನಸ್‌|

Innovative Program for Improve the SSLC Result in Koppal District
Author
Bengaluru, First Published Dec 21, 2019, 7:42 AM IST

ಸೋಮರಡ್ಡಿ ಅಳವಂಡಿ 

ಕೊಪ್ಪಳ[ಡಿ.21]: ಕೊಪ್ಪಳ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಶಿಕ್ಷಣ ಇಲಾಖೆ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಪರೀಕ್ಷಾ ಕೇಂದ್ರದಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ.

ಇಂಥ ಮೂರು ಪರೀಕ್ಷೆಗಳನ್ನು ನಡೆಸುವ ಮೂಲಕ ಪರೀಕ್ಷಾ ಕೇಂದ್ರದ ಭಯವನ್ನು ತೊಡೆದು ಹಾಕಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಓದದೆ ಫೇಲಾಗುವುದಕ್ಕಿಂತ ಪರೀಕ್ಷಾ ಭಯದಿಂದಲೇ ಉತ್ತರ ಬರೆಯದೆ ಫೇಲಾಗುವುದೇ ಹೆಚ್ಚು. ಹೀಗಾಗಿ, ಅವರಲ್ಲಿರುವ ಪರೀಕ್ಷಾ ಭಯವನ್ನು ಹೋಗಲಾಡಿಸುವ ದಿಸೆಯಲ್ಲಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿಶೇಷವಾಗಿ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಕ್ಕೆ ಬರೆಯಲು ಹೋದಾಗ ಉಂಟಾಗುವ ಭಯವನ್ನು ದೂರ ಮಾಡಲು ಮುಂದಾಗಿದೆ.

ಮೂರು ಪರೀಕ್ಷೆಗಳು:

ಎಸ್‌ಎಸ್‌ಎಲ್‌ಸಿ ತರಗತಿಗಳ ಪಠ್ಯಕ್ರಮವನ್ನು ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳಿಸುವುದು. ಇದಾದ ನಂತರ ಮೂರು ಪರೀಕ್ಷೆಗಳನ್ನು ನಡೆಸುವುದು. ಎರಡು ಪರೀಕ್ಷೆಗಳನ್ನು ಶಾಲೆಯಲ್ಲಿಯೇ ನಡೆಸುವುದು. ಇದಲ್ಲದೆ ಪೂರ್ವಸಿದ್ಧತಾ ಪರೀಕ್ಷೆಯನ್ನು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ನಡೆಯುವ ಕೇಂದ್ರದಲ್ಲಿಯೇ ಅದೇ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಕರೆ:

ವಿದ್ಯಾರ್ಥಿಗಳನ್ನು ಓದಿಗೆ ಪ್ರೇರೇಪಿಸುವುದು ಶಿಕ್ಷಕರ ಕಾರ್ಯವಾಗಿದೆ. ಕೇವಲ ಪಾಠ ಮಾಡಿದರೆ ಸಾಲದು, ಅವರನ್ನು ಓದುವುದಕ್ಕೆ ಅಣಿಗೊಳಿಸಬೇಕು ಎನ್ನುವ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ನಿತ್ಯವೂ ಬೆಳಗ್ಗೆ 5 ಗಂಟೆಗೆ ಕರೆ ಮಾಡಿ ಓದಲು ಪ್ರೇರೆಪಿಸುವುದು. ವಿದ್ಯಾರ್ಥಿಗಳ ಪಾಲಕರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ, ಎಸ್‌ಎಸ್‌ಎಲ್‌ಸಿ ಇರುವ ವಿದ್ಯಾರ್ಥಿಯನ್ನು ಓದುವುದಕ್ಕೆ ಅಣಿಗೊಳಿಸುವಂತೆ ಮನವೊಲಿಸುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ. ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಿಕೊಂಡು, ನಿತ್ಯವೂ ಬೆಳಗ್ಗೆ 5 ಗಂಟೆಗೆ ಕರೆ ಮಾಡಬೇಕು.

ಪಾಲಕರ ಸಭೆ:

ಪರೀಕ್ಷೆ ಸುಧಾರಣೆಯಲ್ಲಿ ಕೇವಲ ಶಿಕ್ಷಕರ ಹೊಣೆಗಾರಿಕೆ ಅಷ್ಟೇ ಇಲ್ಲ. ಪಾಲಕರ ಹೊಣೆಗಾರಿಕೆಯೂ ಇದೆ. ಹೀಗಾಗಿ, ಕಾಲಕಾಲಕ್ಕೆ ಪಾಲಕರ ಸಭೆ ನಡೆಸಿ ವಿದ್ಯಾರ್ಥಿಯ ಪ್ರಗತಿಯ ವಿವರ ತಿಳಿಸಬೇಕು. ಹಸಿರು, ಹಳದಿ ಹಾಗೂ ಕೆಂಪು ಗುಂಪುಗಳನ್ನಾಗಿ ಮಾಡಿ, ನಿಮ್ಮ ಮಗು ಯಾವ ಮಾದರಿ ಗುಂಪಿನಲ್ಲಿ ಇದೆ ಎನ್ನುವುದನ್ನು ತಿಳಿಸಿ, ಅವರು ಸಹ ಮಗುವಿನ ಓದಿಗೆ ಅಣಿಯಾಗುವಂತೆ ಮಾಡುವುದು.

ಪೋನ್‌ ಇನ್‌ ಕಾರ್ಯಕ್ರಮ:

ಪೋನ್‌ ಇನ್‌ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಡೆಸ್ಕ್‌ ಮಾಡಿ, ಅಲ್ಲಿಗೆ ವಿದ್ಯಾರ್ಥಿಗಳು ಕರೆ ಮಾಡಿ, ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಪ್ರಯತ್ನವನ್ನು ಮಾಡುವುದಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿ ನುರಿತ ಶಿಕ್ಷಕರನ್ನು ನಿಯೋಜಿಸಿ ಓದುವ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಎದುರಾಗುವ ಗೊಂದಲ ನಿವಾರಣೆ ಮಾಡಿಕೊಳ್ಳಲು ಸಹಾಯ ಮಾಡುವ ಪ್ರಯತ್ನ ಇದಾಗಿದೆ. ಆದರೆ, ಇದಕ್ಕೆ ಯಾರನ್ನು ನಿಯೋಜನೆ ಮಾಡಬೇಕು, ಹೇಗೆ ನಿರ್ವಹಿಸಬೇಕು ಎನ್ನುವ ಕುರಿತು ತಯಾರಿ ನಡೆಯುತ್ತಿದೆ.

ಪಾಸಿಂಗ್‌ ಪ್ಯಾಕೇಜ್‌:

ಪಾಸಿಂಗ್‌ ಪ್ಯಾಕೇಜ್‌ ನೀಡಲು ಮುಂದಾಗಿದೆ. ವಿದ್ಯಾರ್ಥಿಗಳು ಕನಿಷ್ಠ ಇಷ್ಟನ್ನಾದರೂ ತಯಾರಿ ಮಾಡಿಕೊಂಡರೆ ಉತ್ತೀರ್ಣ ಗ್ಯಾರಂಟಿ ಎನ್ನುವುದನ್ನು ತಯಾರು ಮಾಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ನಿಗಾ ಘಟಕದ ಶಾಲೆಯಲ್ಲಿ ಫಲಿತಾಂಶ ಸುಧಾರಣೆಗೆ ನಾನಾ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹೆಚ್ಚಿನ ತರಗತಿಗಳನ್ನು ನಡೆಸುವುದು, ಶಾಲಾ ಅವಧಿಯ ನಂತರವೂ ತರಗತಿಗಳನ್ನು ನಡೆಸುವುದು. ವಿಶೇಷವಾಗಿ ನಿಗಾ ಘಟಕದ ಶಾಲೆಯಲ್ಲಿ ಫಲಿತಾಂಶ ಸುಧಾರಣೆಗೆ ಪ್ರೋತ್ಸಾಹ ಧನವನ್ನು ವಿಷಯ ಶಿಕ್ಷಕರಿಗೆ ನೀಡಲು ಮುಂದಾಗಿದೆ. ಶಾಲೆಯ ಫಲಿತಾಂಶ ಶೇ. 1ರಷ್ಟು ಸುಧಾರಣೆಯಾದರೆ ವಿಷಯವಾರು ವರ್ಗಿಕರಿಸಿ, ಶೇ. 1ರಷ್ಟು ಸುಧಾರಣೆಗೆ 500 ಹಾಗೂ ಶೇ.2 ರಷ್ಟು ಸುಧಾರಣೆಗೆ 1000 ಪ್ರೋತ್ಸಾಹ ನೀಡಲಾಗುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾಹಿತಿ ನೀಡಿದ ಕೊಪ್ಪಳ  ಡಿಡಿಪಿಐ ಬಸವರಾಜಸ್ವಾಮಿ ಅವರು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶೇಷ ಮುತುವರ್ಜಿ ವಹಿಸಿದ್ದು ನಿತ್ಯವೂ ನಿಗಾ ಇಟ್ಟಿದ್ದಾರೆ. ಈ ಬಾರಿ ಕೊಪ್ಪಳ ಜಿಲ್ಲೆಯನ್ನು 10ನೇ ರಾರ‍ಯಂಕಿನೊಳಗೆ ತರಲು ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios