ಬಿಜೆಪಿಯಿಂದ ಒಕ್ಕಲಿಗರಿಗೆ ಅನ್ಯಾಯ: ಚಲುವರಾಯಸ್ವಾಮಿ
ಹಳೇ ಮೈಸೂರು ಭಾಗದಲ್ಲಿ ಲೋಕಸಭೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಒಕ್ಕಲಿಗೆ ಅನ್ಯಾಯ ಮಾಡಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ಮಂಡ್ಯ : ಹಳೇ ಮೈಸೂರು ಭಾಗದಲ್ಲಿ ಲೋಕಸಭೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಒಕ್ಕಲಿಗೆ ಅನ್ಯಾಯ ಮಾಡಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ಹಳೇ ಮೈಸೂರು ಭಾಗದ 13 ಕ್ಷೇತ್ರಗಳ ಪೈಕಿ ಕೇವಲ 2 ಸ್ಥಾನಗಳನ್ನು ಮಾತ್ರ ಒಕ್ಕಲಿಗರಿಗೆ ನೀಡಿದೆ. ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ, ದೇವೇಗೌಡರ ಅಳಿಯ ಎಂಬ ಕಾರಣಕ್ಕೆ ಡಾ.ಸಿ.ಎನ್.ಮಂಜುನಾಥ್ ಅವರಿಗೆ ನೀಡಿರುವುದನ್ನು ಹೊರತು ಪಡಿಸಿದರೆ ಉಳಿದ ಭಾಗದಲ್ಲಿ ಒಕ್ಕಲಿಗರನ್ನು ಅವಕಾಶ ವಂಚಿತರನ್ನಾಗುವಂತೆ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.
ಬಿಜೆಪಿಯೊಳಗೆ ಆಂತರಿಕ ಗೊಂದಲ:
ಬಿಜೆಪಿಯೊಳಗೆ ಆಂತರಿಕವಾಗಿ ಸಾಕಷ್ಟು ಗೊಂದಲಗಳಿವೆ. ಹಿರಿಯ ನಾಯಕ ಸದಾನಂದಗೌಡರಿಗೆ ಟಿಕೆಟ್ ಕೊಟ್ಟಿಲ್ಲ, ಮೈಸೂರಿನಲ್ಲಿ ಪ್ರತಾಪ್‌ಸಿಂಹ ಅವರನ್ನು ದೂರವಿಡಲಾಗಿದೆ. ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಟಿಕೆಟ್ ನೀಡಿಲ್ಲ, ಮೈಸೂರು ಟಿಕೆಟ್ ಸಿಗದಿರುವ ಬಗ್ಗೆ ಪ್ರತಾಪ್‌ಸಿಂಹಗೆ ಒಳಗೊಳಗೇ ನೋವಿದೆ. ಒಕ್ಕಲಿಗರನ್ನು ಬಿಜೆಪಿಯೊಳಗೆ ಬಹಳ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಬಿಜೆಪಿ ರೂಪಿಸಿದ ಮೈತ್ರಿ ಸುಳಿಯೊಳಗೆ ಜೆಡಿಎಸ್ ಸಿಕ್ಕಿಹಾಕಿಕೊಂಡಿದೆ. 2-3 ಸ್ಥಾನಗಳಿಗಾಗಿ ಮೈತ್ರಿ ಮಾಡಿಕೊಂಡು ಪಶ್ಚಾತ್ತಾಪ ಪಡುವಂತಾಗಿದೆ. ಬಿಜೆಪಿ ವರ್ತನೆಯನ್ನು ಸಹಿಸಲಾಗದೆ ಕುಮಾರಸ್ವಾಮಿ ಅವರು ಮೊನ್ನೆ ಮಾಧ್ಯಮದ ಮುಂದೆ ಹೋಗಿದ್ದಾರೆ. ಮೈತ್ರಿ ಧರ್ಮವನ್ನು ಬಿಜೆಪಿಯೇ ಪಾಲಿಸದಿರುವುದು ಸಹಜವಾಗಿಯೇ ಜೆಡಿಎಸ್‌ನವರಿಗೆ ನೋವುಂಟುಮಾಡಿದೆ ಎಂದರು.
ಕಾಂಗ್ರೆಸ್ ಮೈತ್ರಿ ಧರ್ಮ ಪಾಲನೆಯಲ್ಲಿ ಜೆಡಿಎಸ್‌ನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡಿತ್ತು. 2004ರ ಸಮಯದಲ್ಲೂ ದೇವೇಗೌಡರನ್ನು ವಿಶ್ವಾಸದಲ್ಲಿಟ್ಟುಕೊಂಡೇ ಅವರ ಸಲಹೆ ಮೇರೆಗೆ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. 2018ರ ಚುನಾವಣೆ ವೇಳೆ ಎಚ್.ಡಿ.ಕುಮಾರಸ್ವಾಮಿ ಮನೆಗೆ ತೆರಳಿ ಮುಖ್ಯಮಂತ್ರಿ ಸ್ಥಾನ ಅವರಿಗೆ ನೀಡಲಾಗಿತ್ತು. ಮೈತ್ರಿಯಲ್ಲಿದ್ದಾಗ ಕಾಂಗ್ರೆಸ್ ಧೋರಣೆಗಳು ಹೇಗಿದ್ದವು ಎಂಬ ಬಗ್ಗೆ ಕುಮಾರಸ್ವಾಮಿ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಡಿಕೆಶಿಗೆ ಎಚ್‌ಡಿಕೆ ಕೊಟ್ಟ ಬಳುವಳಿ:
ಡಿ.ಕೆ.ಶಿವಕುಮಾರ್ ವಿಷ ಹಾಕಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈತ್ರಿ ಸರ್ಕಾರದ ಉಳಿವಿಗೆ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್‌ಡಿಕೆ ಪುತ್ರನ ಗೆಲುವಿಗೆ ಶ್ರಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಕೊಡುತ್ತಿರುವ ಬಳುವಳಿ ಇದು. ಮೈತ್ರಿ ಸರ್ಕಾರ ಪತನದಂಚಿನಲ್ಲಿದ್ದಾಗ ಮುಂಬೈಗೆ ಹೋಗಿ ಶಾಸಕರನ್ನು ಕರೆತರುವ ಪ್ರಯತ್ನ ನಡೆಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಜೊತೆಗೂಡಿ ಜೋಡೆತ್ತುಗಳಂತೆ ದುಡಿದಿದ್ದವರು. ಇಂದಿನ ರಾಜಕೀಯ ಪರಿಸ್ಥಿತಿಯೊಳಗೆ ಅವೆಲ್ಲವನ್ನೂ ಕುಮಾರಸ್ವಾಮಿ ಮರೆತಿದ್ದಾರೆ. ಆ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ತಿಳಿಸಿದರು.
ಭಯಪಡುವ ಅವಶ್ಯಕತೆ ಇಲ್ಲ:
ಜೆಡಿಎಸ್‌ನಿಂದ ದೇವೇಗೌಡರ ಕುಟುಂಬದವರಾದರೂ ಸ್ಪರ್ಧಿಸಲಿ ಅಥವಾ ಬೇರೆ ಯಾರನ್ನಾದರೂ ಕಣಕ್ಕಿಳಿಸಲಿ. ಅದಕ್ಕೆ ಭಯಪಡುವ ಅವಶ್ಯಕತೆಯೇ ಇಲ್ಲ. ಪಕ್ಷದೊಳಗೆ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮೊಳಗೆ ಸೂಜಿಮೊನೆಯಷ್ಟೂ ಅಸಮಾಧಾನವಿಲ್ಲ. ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇವೆ. ಜೆಡಿಎಸ್ ಅಭ್ಯರ್ಥಿ ಯಾರಾಗುತ್ತಾರೆಂಬ ಬಗ್ಗೆ ಆಲೋಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಅಭ್ಯರ್ಥಿ ವೆಂಕಟರಮಣೇಗೌಡ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಪಿ.ರವಿಕುಮಾರ್, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮರಿತಿಬ್ಬೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್ ಇತರರಿದ್ದರು.