2019ರ ಚುನಾವಣೆಯಲ್ಲಿ ಅನ್ಯಾಯ : 2024ರಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್
2019ರ ಚುನಾವಣೆಯಲ್ಲಿ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದರಿಂದ ಹೈಕಮಾಂಡ್ ಈಗ ಟಿಕೆಟ್ ನೀಡಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ತುಮಕೂರು: 2019ರ ಚುನಾವಣೆಯಲ್ಲಿ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದರಿಂದ ಹೈಕಮಾಂಡ್ ಈಗ ಟಿಕೆಟ್ ನೀಡಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಪಟ್ಟಣದ ಕುಂಚಶ್ರೀ ಸಭಾಂಗಣದಲ್ಲಿ ಜಿಲ್ಲಾ ಕುಂಚಟಿಗ ಸಮುದಾಯದಿಂದ ಆಯೋಜಿಸಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಪಕ್ಷದ ತೀರ್ಮಾನಕ್ಕಾಗಿ ತನ್ನ ಸ್ಥಾನವನ್ನು ದೇವೇಗೌಡರಿಗೆ ಬಿಟ್ಟು ಕೊಟಿದ್ದ ಮುದ್ದಹನುಮೇಗೌಡ ದೇವೇಗೌಡರ ಸೋಲಿಗೆ ಕಾರಣವೆಂಬಂತೆ ಅಪಪ್ರಚಾರ ಮಾಡಲಾಗುತ್ತಿದೆ. ದೇವೇಗೌಡ, ಕುಮಾರಸ್ವಾಮಿ ತಪ್ಪುಗಳಿಂದ ಅವರಿಗೆ ಸೋಲಾ ಗಿದೆ. ಇದರಲ್ಲಿ ಮುದ್ದಹನುಮೇಗೌಡರ ಪಾತ್ರ ಇಲ್ಲ. ಅಲ್ಲದೆ ಮುದ್ದಹನುಮೇಗೌಡ ಅಭ್ಯರ್ಥಿಯಾಗಬೇಕೆಂಬುದು ಪಕ್ಷದ ತೀರ್ಮಾನವಾಗಿದೆ. ನನ್ನ ಮೇಲಿನ ಸಿಟ್ಟಿಗೆ ಮುದ್ದಹನುಮೇಗೌಡರಿಗೆ ಮತ ಹಾಕದಿರುವುದು ತರವಲ್ಲ ಎಂದರು.
ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಮಾತನಾಡಿ, ದಿ.ಲಕ್ಕಪ್ಪ, ಮಲ್ಲಣ್ಣರ ನಂತರ ಒಕ್ಕಲಿಗ ಸಮುದಾಯ ದಿಂದ ಮುದ್ದಹನುಮೇಗೌಡರಿಗೆ ಅವಕಾಶ ದೊರೆತಿದೆ. ಇದನ್ನು ನಾವೆಲ್ಲರೂ ಬಳಸಿಕೊಳ್ಳಬೇಕು. ಕುಂಚಿಟಿಗ ಸಮುದಾಯದ ನಾಯಕತ್ವ ಕ್ಷೀಣಿಸುತ್ತಿದೆ. ಹಾಗಾಗಿ ಲೋಕಸಭೆಯಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿ, ಮುದ್ದ ಹನುಮೇಗೌಡರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ರಾಷ್ಟ್ರದ ವಿದ್ಯಮಾನ ಗಮನಿಸಿದರೆ ಜನರಿಗೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇದೆ. ಕುಂಚಟಿಗರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಇದ್ದ ಆತಂಕವನ್ನು ಸಿದ್ದರಾಮಯ್ಯ ಸರ್ಕಾರ ನಿವಾರಿಸಿದೆ. ಸಚಿವ ಸಂಪುಟದಲ್ಲಿ ಮಂಡಿಸಿಲ್ಲ ಎಂಬ ಕಾರಣಕ್ಕೆ ವಾಪಸ್ಸಾಗಿತ್ತು. ನಂತರ ಓಬಿಸಿ ಕಡತವನ್ನು ಸಚಿವ ಸಂಪುಟದ ಮುಂದಿಟ್ಟು, ಚರ್ಚಿಸಿ, ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಈಗಾಗಲೇ ಕೇಂದ್ರದ ಓಬಿಸಿ ಪಟ್ಟಿಗೆ ಸೇರಸಲು 50-60 ಜಾತಿಗಳು ಸರತಿ ಸಾಲಿನಲ್ಲಿವೆ. ಹಾಗಾಗಿ ಕೊಂಚ ತಡವಾಗುವ ಸಾಧ್ಯತೆ ಇದೆ. ನಮ್ಮದೇ ಸಮುದಾಯದ ಮುದ್ದಹನುಮೇಗೌಡರು ಸಂಸದರಾಗಿ ಹೋದರೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಕಳೆದ 35 ವರ್ಷಗಳ ಹಿಂದೆ ನಾನು ಮಧುಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ನೀಡಿದ ಸಹಕಾರ ಮರೆಯುವಂತಿಲ್ಲ. ನಮ್ಮೆಲ್ಲರ ಬದುಕು ಹಸನಾಗಲು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಇದು ಒಕ್ಕಲಿಗರ ಸ್ವಾಭಿಮಾನದ ಪ್ರಶ್ನೆಯಾಗಿದೆ. ವೀರಶೈವ-ಲಿಂಗಾಯಿತರಿಗೆ ಟಿಕೆಟ್ ದೊರೆತರೆ ಇಡೀ ಸಮುದಾಯ ಒಂದಾಗಿ ಅವರ ಗೆಲುವಿಗೆ ಶ್ರಮಿಸುತ್ತದೆ. ಆದರೆ ಒಕ್ಕಲಿಗರಲ್ಲಿ ಆ ಒಗ್ಗಟ್ಟು ಬರಬೇಕು. ಆಗ ಮಾತ್ರ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತದೆ. ನಾವೆಲ್ಲರೂ ಮುದ್ದಹನುಮೇಗೌಡರನ್ನು ಸಂಸದರಾಗಿ ಮಾಡಬೇಕಾಗಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ನನ್ನ ಐದು ವರ್ಷಗಳ ಅವಧಿಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಒಕ್ಕಲಿಗ ಸಮಾಜ ಹಾಗೂ ಮತದಾರರ ಗೌರವ ಕಾಪಾಡುವ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಈ ಬಾರಿಯೂ ನನಗೆ ಆಶೀರ್ವಾದ ಮಾಡಿ ಲೋಕಸಭೆಗೆ ಕಳುಹಿಸಿದರೆ ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡುವುದಾಗಿ ಮನವಿ ಮಾಡಿದರು.
ಕುಂಚಟಿಗ ಮುಖಂಡರಾದ ಆರ್.ಕಾಮರಾಜು, ಜಿ.ಪಂ ಮಾಜಿ ಸದಸ್ಯ ಚೌಡಪ್ಪ, ತುಮುಲ್ ಮಾಜಿ ನಿರ್ದೇಶಕ ನಾಗೇಶಬಾಬು ಮಾತನಾಡಿದರು. ಜಿ.ಪಂ.ಮಾಜಿ ಅಧ್ಯಕ್ಷ್ಯೆಸುನಂದಮ್ಮ, ಮುರುಳೀಧರ ಹಾಲಪ್ಪ, ಸುವರ್ಣಮ್ಮ, ನೇತಾಜಿ ಶ್ರೀಧರ್, ಎಸ್.ನಾಗಣ್ಣ ಇದ್ದರು.