ಹಾಸಿಗೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ| ಬೆಂಗಳೂರಿನಲ್ಲಿ ನಡೆದ ಘಟನೆ| ಗಾಯಗೊಂಡಿದ್ದ ಅವರ ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ ಝೋಮ್ಯಾಟೋ ಡೆಲವರಿ ಹುಡುಗರು| ಕೊರೋನಾ ಸೋಂಕಿತರಿಂದ ಹಾಸಿಗೆಗಳು ಭರ್ತಿಯಾಗಿವೆ ಎಂದು ದಾಖಲು ಮಾಡಿಕೊಳ್ಳಲು ಖಾಸಗಿ ಆಸ್ಪತ್ರೆ ನಿರಾಕರಣೆ|
ಬೆಂಗಳೂರು(ಮೇ.05): ಅಪಘಾತಕ್ಕೀಡಾದ ವ್ಯಕ್ತಿಗೆ ಸೂಕ್ತ ಸಮಯಕ್ಕೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಮೃತಪಟ್ಟಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ರಾಮಮೂರ್ತಿ ನಗರದ ಸಮೀಪ ಕಲ್ಕೆರೆ ನಿವಾಸಿ ಶ್ರೀನಿವಾಸ್ (54) ಮೃತ ದುರ್ದೈವಿ. ಕೆ.ಆರ್.ಪುರ ಕಡೆಯಿಂದ ಹೆಬ್ಬಾಳಕ್ಕೆ ಸ್ಕೂಟರ್‌ನಲ್ಲಿ ಹೊರ ವರ್ತುಲ ರಸ್ತೆಯಲ್ಲಿ ಸೋಮವಾರ ಸಂಜೆ ಶ್ರೀನಿವಾಸ್ ತೆರಳುವಾಗ ಮಾರ್ಗ ಮಧ್ಯೆ ಅಪಘಾತ ಸಂಭವಿಸಿತ್ತು. ರಸ್ತೆ ವಿಭಜಕಕ್ಕೆ ಸ್ಕೂಟರ್ ಡಿಕ್ಕಿಯಾಗಿ ಶ್ರೀನಿವಾಸ್ ಗಾಯಗೊಂಡಿದ್ದರು.
ಬೆಂಗ್ಳೂರಲ್ಲಿ ಪ್ರತ್ಯೇಕ ಅಪಘಾತ: ಇಬ್ಬರ ಸಾವು
ಗಾಯಗೊಂಡಿದ್ದ ಅವರ ರಕ್ಷಣೆ ಮಾಡಿದ್ದ ಝೋಮ್ಯಾಟೋ ಡೆಲವರಿ ಹುಡುಗರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಕೊರೋನಾ ಸೋಂಕಿತರಿಂದ ಹಾಸಿಗೆಗಳು ಭರ್ತಿಯಾಗಿವೆ ಎಂದು ಅವರನ್ನು ದಾಖಲು ಮಾಡಿಕೊಳ್ಳಲು ಖಾಸಗಿ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಅಲ್ಲಿಂದ ಡಾ.ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಯಲ್ಲಿ ಕೂಡಾ ಕೊರೋನಾ ಸೋಂಕಿತರ ಕಾರಣಕ್ಕೆ ಚಿಕಿತ್ಸೆ ಸಿಕ್ಕಿಲ್ಲ. ಕೊನೆಗೆ ಮತ್ತೆ ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಗಾಯಾಳು ತಪಾಸಣೆ ನಡೆಸಿದ ವೈದ್ಯರು, ಶ್ರೀನಿವಾಸ್ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ಪೂರ್ವ ವಿಭಾಗ (ಸಂಚಾರ)ದ ಡಿಸಿಪಿ ಶಾಂತರಾಜ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಮೃತ ಶ್ರೀನಿವಾಸ್ ಮೂಲತಃ ತಮಿಳುನಾಡಿನವರಾಗಿದ್ದು, ತಮ್ಮ ಕುಟುಂಬದ ಜತೆ ಕಲ್ಕೆರೆಯಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
