ಬೆಂಗಳೂರು(ಜು.09): ಶಿವಾಜಿನಗರದ ಬ್ರಾಡ್‌ ವೇ ರಸ್ತೆಯಲ್ಲಿರುವ ಬಿಬಿಎಂಪಿ ಆಸ್ಪತ್ರೆಯಲ್ಲಿ ಸುಸಜ್ಜಿತ ಕೋವಿಡ್‌ ಆಸ್ಪತ್ರೆ ನಿರ್ಮಿಸಲು ಇಸ್ಫೋಸಿಸ್‌ ಫೌಂಡೇಷನ್‌ 30 ಕೋಟಿ ರು. ವೆಚ್ಚ ಮಾಡುತ್ತಿದ್ದು, ಅಗತ್ಯವಿರುವ ಸಿಬ್ಬಂದಿ ನೇಮಿಸುವಂತೆ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೂಚಿಸಿದ್ದಾರೆ.

ಬುಧವಾರ ಆಸ್ಪತ್ರೆಯ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ ಅವರು, ಬಿಬಿಎಂಪಿ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವುದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಇಸ್ಫೋಸಿಸ್‌ ಸಂಸ್ಥೆ ಒದಗಿಸುತ್ತಿದೆ. ಸುಮಾರು 30 ಕೋಟಿ ರು. ವೆಚ್ಚದಲ್ಲಿ ಹೈ ಫೋ› ಆಕ್ಸಿಜೆನ್‌ ಹೊಂದಿರುವ 180 ಹಾಸಿಗೆ, ಆಸ್ಪತ್ರೆಗೆ 30 ವೆಂಟಿಲೇಟರ್‌ ಒದಗಿಸಲಾಗುತ್ತಿದ್ದು, ನರಶಸ್ತ್ರ ಚಿಕಿತ್ಸಾ ವಿಭಾಗ (ನ್ಯೂರೋ ಒಟಿ), ಹೃದಯ ಶಸ್ತ್ರ ಚಿಕಿತ್ಸಾ ವಿಭಾಗ, ಸಿಟಿ ಸ್ಕಾ್ಯನ್‌ ಸೌಲಭ್ಯವನ್ನು ಒಳಗೊಂಡಿರುತ್ತದೆ. ಮುಂದಿನ 10 ದಿನಗಳ ಒಳಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ. ಅಗತ್ಯ ಇರುವ ಸಿಬ್ಬಂದಿ ನೇಮಕಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

6 ಗಂಟೆ ಕಾದರೂ ಬಾರದ ಆಂಬುಲೆನ್ಸ್, ಬೆಂಗಳೂರ ದುಸ್ಥಿತಿಗೆ ಕೊನೆ ಯಾವಾಗ?

ಇದಾದ ಬಳಿಕ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಗೆ ಭೇಟಿ ನೀಡಿದ ಸುಧಾಕರ್‌, ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯ ಸೇರಿದಂತೆ ಸುರಕ್ಷತಾ ಕ್ರಮಗಳ ಪರಾಮರ್ಶೆ ನಡೆಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರೊಂದಿಗೆ ವೀಡಿಯೋ ಸಂವಾದ ನಡೆಸಿ ಊಟ, ಚಿಕಿತ್ಸೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ರೋಗಿಗಳು ಊಟ, ಚಿಕಿತ್ಸೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ತರಾಟೆ

ನಗರದಲ್ಲಿ ಹೆಚ್ಚಿನ ಸಂಖ್ಯೆಯ ಕೊರೋನಾ ಸೋಂಕಿತರು ಬೌರಿಂಗ್‌ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಡಾ.ಕೆ. ಸುಧಾಕರ್‌ ಅವರು ದೇಶದಲ್ಲಿ ಕೊರೋನಾ ಸೋಂಕಿತರ ಮರಣ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಕೂಡಲೇ ಮರಣ ಮೌಲ್ಯಮಾಪನಾ ವರದಿ (ಆಡಿಟ್‌ ವರದಿ) ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಶಿವಾಜಿನಗರದ ಶಾಸಕ ರಿಜ್ವಾನ್‌ ಹರ್ಷದ್‌ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.