ವಿಜಯನಗರ ಸಾಮ್ರಾಜ್ಯದ 16ನೇ ಶತಮಾನದ ಅಪರೂಪದ ಶಾಸನವೊಂದು ಪತ್ತೆಯಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಮಣ್ಣಿನಲ್ಲಿ ಹೂತು ಹೋಗಿದ್ದ ಈ ಶಾಸನವನ್ನು ಸ್ಥಳೀಯ ಗ್ರಾಮಸ್ಥರು ಇತ್ತೀಚೆಗೆ ಗುರುತಿಸಿ ಸುರಕ್ಷಿತವಾಗಿ ಸಂರಕ್ಷಿಸಿರುವುದು ಇತಿಹಾಸಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಬಳ್ಳಾರಿ: ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಗೆ ಸೇರಿದ ಮಹತ್ವದ ಶಾಸನವೊಂದು ಪತ್ತೆಯಾಗಿದೆ. ಈ ಪ್ರದೇಶದ ಇತಿಹಾಸ, ಸಾಂಸ್ಕೃತಿಕ ಪರಂಪರೆಯ ಅಧ್ಯಯನಕ್ಕೆ ಹೊಸ ಬೆಳಕು ಚೆಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಮಣ್ಣಿನಲ್ಲಿ ಹೂತು ಹೋಗಿದ್ದ ಈ ಶಾಸನವನ್ನು ಸ್ಥಳೀಯ ಗ್ರಾಮಸ್ಥರು ಇತ್ತೀಚೆಗೆ ಗುರುತಿಸಿ ಸುರಕ್ಷಿತವಾಗಿ ಸಂರಕ್ಷಿಸಿರುವುದು ಇತಿಹಾಸಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಸನದಲ್ಲಿರುವ ಮಾಹಿತಿ ಏನು?

ಸುಮಾರು ಎಂಟು ಅಡಿ ಉದ್ದ, ಎರಡೂವರೆ ಅಡಿ ಅಗಲದ ಕಲ್ಲಿನ ಮೇಲೆ ಕೆತ್ತಲಾಗಿರುವ ಈ ಶಾಸನವು ಆರು ಸಾಲುಗಳ ಬರಹವನ್ನು ಹೊಂದಿದೆ. ಪ್ರಾಚೀನ ಕನ್ನಡ ಲಿಪಿಯಲ್ಲಿ ಕೆತ್ತಲಾದ ಈ ಶಾಸನವು 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದೆ. ಆ ಕಾಲದ ಆಡಳಿತ, ಧಾರ್ಮಿಕ ನಂಬಿಕೆ, ದಾನ ಧರ್ಮದ ವ್ಯವಸ್ಥೆಗಳ ಕುರಿತು ಮಹತ್ವದ ಮಾಹಿತಿ ಒಳಗೊಂಡಿದೆ.

ಶಾಸನದ ಮೇಲ್ಭಾಗದಲ್ಲಿ ತ್ರಿಶೂಲ, ಈಶ್ವರ, ನಂದಿ, ಸೂರ್ಯ, ಚಂದ್ರರ ಆಕೃತಿಗಳನ್ನು ಕೆತ್ತಲಾಗಿದೆ. ಇವು ವಿಜಯನಗರ ಕಾಲದ ಧಾರ್ಮಿಕ ಸಂಕೇತಗಳಾಗಿವೆ. ದೇವಾಲಯಗಳಿಗೆ ಸಂಬಂಧಿಸಿದ ದಾನ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳಾಗಿವೆ. ಶಾಸನದ ಕೆಳಭಾಗದಲ್ಲಿ ಗೋವಿನ ಚಿತ್ರವನ್ನು ಕೆತ್ತಲಾಗಿದ್ದು, ಕಾಲದ ಹೊಡೆತಕ್ಕೆ ಸಿಲುಕಿ ಆ ಚಿತ್ರ ಬಹುತೇಕ ಅಳಿಸಿಹೋಗಿದೆ.

ಇತಿಹಾಸ ಉಪನ್ಯಾಸಕ ಜೀರಿಗನೂರಿನ ಕೆ. ಆಂಜಿನೇಯ್ಯ ಮಾಹಿತಿ ನೀಡಿ, ಈ ಶಾಸನವು ಈಗಾಗಲೇ ಪುರಾತತ್ವ ಇಲಾಖೆಯ ದಾಖಲೆಗಳಲ್ಲಿ ಪ್ರಕಟಿತಗೊಂಡಿರುವುದಾಗಿ ತಿಳಿಸಿದ್ದಾರೆ. 1997ರಲ್ಲಿ ಮೈಸೂರಿನ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಪ್ರಕಟಿಸಿದ ಇನ್‌ಸ್ಕ್ರಿಪ್ಷನ್ಸ್ ಆಫ್ ಬಳ್ಳಾರಿ ಡಿಸ್ಟ್ರಿಕ್ಟ್ ಕೃತಿಯಲ್ಲಿ ಈ ಶಾಸನದ ಪಠ್ಯ ದಾಖಲೆಯಾಗಿದೆ ಎಂದರು.

ಎಚ್ಚರಿಕೆ ಸಂದೇಶವುಳ್ಳ ಶಾಸನ

ಶಾಸನದ ವಿಷಯದ ಪ್ರಕಾರ, ಅಂದಿನ ಗೊನಹಾಳ (ಈಗಿನ ಗೋನಾಳ) ಗ್ರಾಮವನ್ನು ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ದಾನವಾಗಿ ನೀಡಲಾಗಿತ್ತು. ದೇವಾಲಯಕ್ಕೆ ಸಲ್ಲಿಕೆಯಾಗಿದ್ದ ಗ್ರಾಮದ ಹಕ್ಕುಗಳು ಮತ್ತು ಆಸ್ತಿಯನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ಈ ಶಾಸನದಲ್ಲಿ ದಾಖಲಿಸಲಾಗಿದೆ. ದೇವಾಲಯಗಳ ಆರ್ಥಿಕ ಮೂಲಗಳನ್ನು ರಕ್ಷಿಸುವ ಉದ್ದೇಶದಿಂದ ಇಂತಹ ಶಾಸನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿತ್ತು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ. ಇದೇ ಗ್ರಾಮದಲ್ಲಿ ಇನ್ನೊಂದು ಶಾಸನ ದೊರೆತಿರುವ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖವಿದ್ದು, ಅದು ಪ್ರಸ್ತುತ ಮಣ್ಣಿನಡಿ ಹೂತುಹೋಗಿರುವ ಸಾಧ್ಯತೆ ಇದೆ. ಆ ಶಾಸನವನ್ನು ಪತ್ತೆಹಚ್ಚಿ ಸಂರಕ್ಷಿಸುವ ಅಗತ್ಯವಿದೆ ಎಂದರು.

ಇದನ್ನೂ ಓದಿ: ಲಕ್ಕುಂಡಿ ಮಣ್ಣಲ್ಲಿ ಅಡಗಿದ್ದ ಚಾಲುಕ್ಯರ ರಹಸ್ಯ ಪತ್ತೆ! 13 ಸಾಲುಗಳಲ್ಲಿ ಕನ್ನಡ ಶಾಸನ, ಜಗದೇಕಮಲ್ಲನ ಆಳ್ವಿಕೆ ಉಲ್ಲೇಖ

ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಮಾತನಾಡಿ, ಗೊನಹಾಳ ಗ್ರಾಮವನ್ನು ಹಂಪಿಯ ವಿರೂಪಾಕ್ಷ ದೇವರಿಗೆ ದಾನವಾಗಿ ನೀಡಿರುವುದನ್ನು ದಾಖಲಿಸುವ ಉದ್ದೇಶದಿಂದ ಈ ಶಾಸನವನ್ನು ಸ್ಥಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇದು ಒಂದು ರೀತಿಯ ನಾಮಫಲಕ ಅಥವಾ ಗಡಿ ಗುರುತು ಶಾಸನವಾಗಿದ್ದು, ದೇವಾಲಯದ ಆಸ್ತಿಯ ರಕ್ಷಣೆಗೆ ಸಂಬಂಧಿಸಿದ ಮಹತ್ವದ ದಾಖಲೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡಿಗರೇ, ಕನ್ನಡದ ಮೊದಲ ಹಲ್ಮಿಡಿ ಶಾಸನ ನೋಡಬೇಕೆ? ಕೇವಲ 5 ದಿನ ಅವಕಾಶವಿದೆ, ತಪ್ಪದೇ ಇಲ್ಲಿಗೆ ಭೇಟಿ ನೀಡಿ!