Asianet Suvarna News Asianet Suvarna News

ಗದಗ: ಅಂದು ಭೀಕರ ಪ್ರವಾಹ, ಇಂದು ಜನರನ್ನ ಕಾಡುತ್ತಿದೆ ಸಾಂಕ್ರಾಮಿಕ ಕಾಯಿಲೆ

ಪ್ರವಾಹ ಪ್ರದೇಶದಲ್ಲಿ ಹೆಚ್ಚಿದ ಸಾಂಕ್ರಾಮಿಕ ಕಾಯಿಲೆ| ಪ್ರವಾಹ ಪೀಡಿತ 20 ಗ್ರಾಮಗಳಲ್ಲಿ ಹೆಚ್ಚಿನ ಪ್ರಕರಣ ಪತ್ತೆ| ಪ್ರವಾಹ ಪೀಡಿತ ರೋಣ ಮತ್ತು ನರಗುಂದ ತಾಲೂಕಿನ 20 ಗ್ರಾಮಗಳಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ಕಾಯಿಲೆ|
 

Infectious Disease in Flood Affected Area in Gadag District
Author
Bengaluru, First Published Dec 14, 2019, 10:04 AM IST

ಶಿವಕುಮಾರ ಕುಷ್ಟಗಿ

ಗದಗ[ಡಿ.14]: ಪ್ರಸಕ್ತ ಸಾಲಿನಲ್ಲಿ ಪ್ರವಾಹ ಜಿಲ್ಲೆಯನ್ನು ಸತತ 3 ತಿಂಗಳುಗಳ ಕಾಲ ಕಾಡಿದ್ದು ಸಾಲದು ಎಂಬಂತೆ ಪ್ರವಾಹ ಪೀಡಿತ ಗ್ರಾಮಗಳು ಸೇರಿದಂತೆ ಜಿಲ್ಲೆಯ ಜನತೆಯನ್ನು ಸಾಂಕ್ರಾಮಿಕ ಕಾಯಿಲೆಗಳು ವ್ಯಾಪಕವಾಗಿ ಕಾಡುತ್ತಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಡೆಂಘೀ, ಮಲೇರಿಯಾ ಚಿಕೂನ್‌ಗುನ್ಯಾ ಸಾರ್ವಜನಿಕರ ಜೀವ ಹಿಂಡುತ್ತಿವೆ.

ಅದರಲ್ಲೂ ಪ್ರವಾಹ ಪೀಡಿತ ರೋಣ ಮತ್ತು ನರಗುಂದ ತಾಲೂಕಿನ 20 ಗ್ರಾಮಗಳಲ್ಲಿ ಆಗಷ್ಟ ಮೊದಲ ವಾರದಿಂದ ಸತತವಾಗಿ ಕಾಡಿದ ಪ್ರವಾಹ ಕಡಿಮೆಯಾಗಿ ತಿಂಗಳು ಕಳೆದಿದೆ. ಆದರೆ, ಆ ಭಾಗದಲ್ಲಿನ ಜನರ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ, ಅದರಲ್ಲೂ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುವ ಡೆಂಘೀ, ಮಲೇರಿಯಾ, ಚಿಕೂನ್‌ಗುನ್ಯಾ ದಂತಾ ಕಾಯಿಲೆಗಳಿಂದಾಗಿ ದಿನಬೆಳಗಾದ್ರೆ ಸಾಕು ಆಸ್ಪತ್ರೆಗೆ ಅಲೆದಾಡೋ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ವಚ್ಚತೆಗಿಲ್ಲ ಆದ್ಯತೆ:

ಪ್ರವಾಹದ ನಂತರ ಪ್ರತಿಯೊಂದು ಗ್ರಾಮಗಳಲ್ಲಿಯೂ ಸ್ವಚ್ಚತೆ ಎನ್ನುವುದು ಮರೀಚಿಕೆಯಾಗಿದೆ, ಇದರ ಬಗ್ಗೆ ಗಮನ ನೀಡಬೇಕಾದ ಗ್ರಾಪಂಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಗಮನ ನೀಡದೇ ಇರುವುದರಿಂದಾಗಿ ಪ್ರವಾಹದ ಸಂದರ್ಭದಲ್ಲಿ ನೂರಾರು ಮನೆಗಳು ಧರೆಗುರುಳಿವೆ, ಎಲ್ಲೆಂದರಲ್ಲಿ ಚರಂಡಿಗಳು ಸೃಷ್ಟಿಯಾಗಿವೆ. ಎಲ್ಲೋ ಇದ್ದ ಕಸದ ರಾಶಿ ಮತ್ತೆಲ್ಲೋ ಬಂದು ನಿಂತಿದೆ. ಅಲ್ಲಲ್ಲಿ ಮಳೆಯಿಂದ ಸಂಗ್ರಹವಾಗಿರುವ ಮಲೀನ ನೀರು ಇನ್ನು ಹಾಗೆಯೇ ಇದೆ. ಹೀಗಾಗಿ ಇವೆಲ್ಲವೂ ಸಾಂಕ್ರಾಮಿಕ ರೋಗಗಳಿಗೆ ಹೇಳಿ ಮಾಡಿಸಿದ ವಾತಾವರಣ ಸೃಷ್ಟಿಯಾಗಿದೆ.

ಸಣ್ಣದಾಗಿ ಪ್ರಾರಂಭ:

ನೆಗಡಿ, ಕೆಮ್ಮು, ಜ್ವರ, ತಲೆನೋವು ಹೀಗೆ ಚಿಕ್ಕಪುಟ್ಟ ಕಾಯಿಲೆಗಳಿಂದ ಶುರು ಆಗೋ ಅನಾರೋಗ್ಯ ಮುಂದೆ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾದಂತಾ ಕಾಯಿಲೆಗೆ ಬದಲಾಗುತ್ತಿದ್ದು, ಗ್ರಾಮದಲ್ಲಿನ ಶಾಲಾ ಆವರಣ, ದೇವಸ್ಥಾನಗಳ ಅಕ್ಕಪಕ್ಕ, ಗ್ರಾಮದಲ್ಲಿನ ಚರಂಡಿಗಳು, ಸಾಮೂಹಿಕ ಶೌಚಾಲಯ, ಬಸ್‌ ನಿಲ್ದಾಣ, ಮಳೆಯಿಂದ ನೆನೆದು ಬಿದ್ದಿರೋ ಮನೆಗಳು ಹೀಗೆ ಸಾಂಕ್ರಾಮಿಕ ಕಾಯಿಲೆಗಳು ಹರಡಲು ಎಲ್ಲವೂ ಅನುಕೂಲಕರ ವಾತಾವರಣ ಜಿಲ್ಲೆಯಾದ್ಯಂತ ನಿರ್ಮಾಣವಾಗಿದೆ.

ಈ ಬಾರಿಯೇ ಹೆಚ್ಚು

ಕಳೆದ ವರ್ಷಕ್ಕಿಂತಲೂ ಈ ವರ್ಷ ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. 2018 ರಲ್ಲಿ ಡೆಂಘೀ 97, ಚಿಕೂನ್‌ ಗುನ್ಯಾ 68 ಪ್ರಕರಣಗಳು ಪತ್ತೆಯಾಗಿದ್ದವು, ಆದರೆ ಈ ಬಾರಿ ಪ್ರವಾಹದ ಪರಿಣಾಮದಿಂದಾಗಿ ಇವುಗಳ ಸಂಖ್ಯೆಹೆಚ್ಚಾಗಿದ್ದು, ನವಂಬರ್‌ ಅಂತ್ಯದವರೆಗೆ ಆರೋಗ್ಯ ಇಲಾಖೆ ಮಾಹಿತಿ ಆಧಾರದಲ್ಲಿ ಡೆಂಘೀ 162, ಮಲೇರಿಯಾ 59, ಚಿಕೂನ್‌ ಗುನ್ಯಾ99 ಪ್ರಕರಣಗಳು ಪತ್ತೆಯಾಗಿದ್ದು, ಆದರೆ ಅದೃಷ್ಟವಶಾತ್‌ ಯಾವುದೇ ಸಾವು ಸಂಭವಿಸಿಲ್ಲ.

ಸ್ವಚ್ಛತೆಗೆ ಗಮನ ನೀಡಿ:

ಪ್ರವಾಹ ಪೀಡಿತ ಗ್ರಾಮಗಳು ಮಾತ್ರವಲ್ಲ ಈ ಬಾರಿ ಜಿಲ್ಲೆಯಾದ್ಯಂತ ಸತತ ಮಳೆಯಾದ ಹಿನ್ನೆಲೆಯಲ್ಲಿ ಗದಗ- ಬೆಟಗೇರಿ ಅವಳಿ ನಗರದಲ್ಲೂ ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಯ ಪ್ರಮಾಣ ಹೆಚ್ಚಾಗಿದ್ದು, ಈ ಬಗ್ಗೆ ನಗರಸಭೆಯ ಅಧಿಕಾರಿಗಳು ಸ್ವಚ್ಛತೆಗೆ ವಿಶೇಷ ಗಮನ ನೀಡಬೇಕಿದೆ.

ಈ ಬಗ್ಗೆ ಮಾಹಿತಿ ನೀಡಿದ ಗದಗ ಡಿಎಚ್‌ಒ  ಡಾ. ಸತೀಶ ಬಸರೀಗಿಡದ ಅವರು, ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಬಗ್ಗೆ ಈಗಾಗಲೇ ನಮ್ಮ ಇಲಾಖೆಯ ಸಿಬ್ಬಂದಿ, ಸ್ಥಳೀಯ ಗ್ರಾಪಂಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕೆಲವೆಡೆ ನಿತ್ಯವೂ ಫಾಗಿಂಗ್‌ ಮಾಡಿಸಲಾಗುತ್ತಿದೆ. ಇನ್ನು ಪ್ರವಾಹ ಪೀಡಿತ ಗ್ರಾಮಗಳಿಗೆ ವಿಶೇಷ ಗಮನ ನೀಡಿದ್ದು, ಪ್ರತ್ಯೇಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕರು ಶುದ್ಧವಾದ ನೀರು ಕುಡಿಯಬೇಕು, ಸಾಧ್ಯವಾದಷ್ಟುಮನೆಯ ಸುತ್ತಲೂ ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರವಾಹದ ನಂತರ ಉಲ್ಬಣಿಸುವ ಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಪಂಗಳು ಹಾಗೂ ಆರೋಗ್ಯ ಇಲಾಖೆ ಇನ್ನು ಹೆಚ್ಚಿನ ಗಮನ ನೀಡಬೇಕು, ಪ್ರವಾಹದಿಂದ ಮನೆ ಸೇರಿದಂತೆ ಎಲ್ಲವನ್ನು ಕಳೆದುಕೊಂಡಿರುವ ಸಾರ್ವಜನಿಕರಿಗೆ ಸಾಂಕ್ರಾಮಿಕ ಕಾಯಿಲೆಗಳಿಗಾಗಿ ಆಸ್ಪತ್ರೆಗೆ ಖರ್ಚು ಮಾಡುವಂತಾಗಿದೆ ಈ ಬಗ್ಗೆ ಗಮನ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಚವ್ಹಾಣ ಅವರು ಆಗ್ರಹಿಸಿದ್ದಾರೆ. 
 

Follow Us:
Download App:
  • android
  • ios