ಬೆಂಗಳೂರು [ಆ.28]:  ಆರ್ಥಿಕ ಸಂಕಷ್ಟಎದುರಿಸುತ್ತಿರುವ ‘ಇಂದಿರಾ ಕ್ಯಾಂಟೀನ್‌’ಗೆ ತಿಂಗಳಾಂತ್ಯದೊಳಗೆ ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಅನುದಾನ ನೀಡದಿದ್ದಲ್ಲಿ ಮುಚ್ಚಬೇಕಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಹೇಳಿದ್ದಾರೆ.

ಮಂಗಳವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಇಂದಿರಾ ಕ್ಯಾಂಟೀನ್‌ ಕುರಿತು ಸದಸ್ಯರ ಪ್ರಶ್ನೆಗೆ ಉತ್ತರಿದ ಆಯುಕ್ತರು, ರಾಜ್ಯ ಸರ್ಕಾರ 2017-18ರಲ್ಲಿ ಇಂದಿರಾ ಕ್ಯಾಂಟೀನ್‌ಗೆ 100 ಕೋಟಿ ರು. ಬಿಡುಗಡೆ ಮಾಡಿ ಯೋಜನೆಗೆ ಚಾಲನೆ ನೀಡಿತ್ತು. ಆದರೆ, ಆ ವರ್ಷ ವೆಚ್ಚಾಗಿದ್ದು 124 ರು. ಕೋಟಿ, 2018-19 ಸಾಲಿನಲ್ಲಿ 115 ಕೋಟಿ ರು. ಬಿಡುಗಡೆ ಮಾಡಿತ್ತಾದರೂ ವೆಚ್ಚವಾಗಿದ್ದು, 137 ಕೋಟಿ ರು. ಇನ್ನು 2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಯಾವುದೇ ಅನುದಾನ ಘೋಷಣೆ ಮಾಡಲಿಲ್ಲ ಎಂದು ತಿಳಿಸಿದರು.

2019-20 ಸಾಲಿನ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ 152 ಕೋಟಿ  ರು. ಸೇರಿದಂತೆ 2017-18 ಮತ್ತು 2018-19 ಸಾಲಿನಲ್ಲಿ ಕ್ಯಾಂಟೀನ್‌ ನಿರ್ವಹಣೆಗೆ ಹೆಚ್ಚುವಾರಿಯಾಗಿ ವೆಚ್ಚ ಮಾಡಿದ 58 ಕೋಟಿ ಸೇರಿದಂತೆ ಒಟ್ಟು 210 ಕೋಟಿ ರು. ಅನುದಾನ ನೀಡುವಂತೆ ಒಟ್ಟು ಮೂರು ಬಾರಿ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಆದರೆ, ಸರ್ಕಾರದ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ತಿಳಿಸಿದರು.

‘ಅಕ್ರಮ ನೆಪದಲ್ಲಿ ಕ್ಯಾಂಟೀನ್‌ ಸ್ಥಗಿತಕ್ಕೆ ಹುನ್ನಾರ’

ಸರ್ಕಾರದ ಯೋಜನೆ ಆಗಿರುವುದರಿಂದ 2019-20 ಸಾಲಿನ ಪಾಲಿಕೆ ಬಜೆಟ್‌ನಲ್ಲಿಯೂ ಅನುದಾನ ಮೀಸಲಿಟ್ಟಿಲ್ಲ. ಒಂದು ಸರ್ಕಾರವೂ ಅನುದಾನ ನೀಡಿಲ್ಲ. ಪಾಲಿಕೆ ಬಜೆಟ್‌ನಲ್ಲಿಯೂ ಅನುದಾನ ಮೀಸಲಿಟ್ಟಿಲ್ಲ. ಹೀಗಾಗಿ, ಇಂದಿರಾ ಕ್ಯಾಂಟೀನ್‌ ಯೋಜನೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಈ ತಿಂಗಳ ಅಂತ್ಯದೊಳಗೆ ಬಿಬಿಎಂಪಿ ಅಥವಾ ಸರ್ಕಾರ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಅನುದಾನ ನೀಡದಿದ್ದಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆ ಸ್ಥಗಿತಗೊಳಿಸಬೇಕಾಗಲಿದೆ ಎಂದು ಹೇಳಿದರು.

ಅನುದಾನ ನೀಡಿದರೆ ಟೆಂಡರ್‌ ಅಂತಿಮ:

ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುವ ಗುತ್ತಿಗೆದಾರರ ಅವಧಿ ಆ.15ಕ್ಕೆ ಪೂರ್ಣಗೊಂಡಿದೆ. ಹೊಸ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸದ್ಯಕ್ಕೆ ಗುತ್ತಿಗೆ ಮುಂದುವರೆಸಲಾಗಿದೆ. ಬಿಬಿಎಂಪಿ ಅಥವಾ ಸರ್ಕಾರ ಅನುದಾನ ನೀಡಿದ ಬಳಿಕ ಹೊಸ ಟೆಂಡರ್‌ ಅಂತಿಮಗೊಳಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಸರ್ಕಾರ ಹಣ ನೀಡದಿದ್ದರೆ ಪಾಲಿಕೆ ನೀಡಲಿದೆ’

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌ ಗಂಗಾಂಬಿಕೆ, ಇಂದಿರಾ ಕ್ಯಾಂಟೀನ್‌ ಜನಪರ ಯೋಜನೆಯಾಗಿದೆ. ಕ್ಯಾಂಟೀನ್‌ ನಿರ್ವಹಣೆಗೆ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಒಂದು ವೇಳೆ ಸರ್ಕಾರ ಅನುದಾನ ನೀಡದಿದ್ದರೆ, ಬಿಬಿಎಂಪಿಯ ಕಲ್ಯಾಣ ಯೋಜನೆಯ ಅನುದಾನ ಬಳಕೆ ಮಾಡಿಕೊಂಡು ಕ್ಯಾಂಟೀನ್‌ ನಿರ್ವಹಣೆ ಮಾಡಲಾಗುವುದು. ಈ ಕುರಿತು ಆ.31ರ ವಿಷಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಅನುದಾನ ಬಿಡುಗಡೆ ಮತ್ತು ವೆಚ್ಚದ ವಿವರ (ಕೋಟಿಗಳಲ್ಲಿ)

ವರ್ಷ    ಸರ್ಕಾರದ ಬಜೆಟ್‌ ಘೋಷಣೆ    ಬಿಡುಗಡೆ    ಪಾಲಿಕೆ ವೆಚ್ಚ

2017-18    100    100    124

2018-19    145    115    137

2019-20    -    -    26 (ಜೂನ್‌ ಅಂತ್ಯಕ್ಕೆ)


ಕ್ಯಾಂಟೀನ್‌ನಲ್ಲಿ ಊಟ (ಕೋಟಿಗಳಲ್ಲಿ)

ವರ್ಷ    ತಿಂಡಿ/ಊಟ

2017-18    4.67

2018-19    7.10

2019-20    2.70 (ಜುಲೈ ಅಂತ್ಯಕ್ಕೆ)

ಒಟ್ಟು    14.47