ಬೆಂಗಳೂರು[ಆ.27]:  ಬಿಜೆಪಿ ಸರ್ಕಾರವು ಅಕ್ರಮ ಆರೋಪ ಹಾಗೂ ತನಿಖೆ ನೆಪದಲ್ಲಿ ಕಾಂಗ್ರೆಸ್‌ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವ ಹುನ್ನಾರ ನಡೆಸುತ್ತಿದೆ. ಇಂದಿರಾಗಾಂಧಿ ಹೆಸರಿರುವ ಕಾರಣದಿಂದಾಗಿ ಇಂದಿರಾ ಕ್ಯಾಂಟೀನ್‌ ಕಾರ್ಯಕ್ರಮ ರದ್ದು ಮಾಡಲೂ ಸಹ ಷಡ್ಯಂತರ ರೂಪಿಸುತ್ತಿದೆ. ಒಂದು ವೇಳೆ ಕಾರ್ಯಕ್ರಮ ರದ್ದು ಮಾಡಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮದ ಹೆಸರಿನಲ್ಲಿ ತನಿಖೆಗೆ ನೀಡುವುದು ಒಂದು ಹುನ್ನಾರ. ದುರುದ್ದೇಶದಿಂದ ತನಿಖೆ ವಹಿಸಲು ಆದೇಶಿಸುತ್ತಿದ್ದಾರೆ. ಟೆಂಡರ್‌ಶ್ಯೂರ್‌, ವೈಟ್‌ಟಾಪಿಂಗ್‌ ರಸ್ತೆ, ಬಿಬಿಎಂಪಿ ಬಜೆಟ್‌, ನಗರೋತ್ಥಾನ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದೆಲ್ಲವೂ ದುರುದ್ದೇಶಪೂರ್ವಕ ಹಾಗೂ ರಾಜಕೀಯ ಹುನ್ನಾರದ ನಿರ್ಧಾರಗಳು ಎಂದು ಟೀಕಿಸಿದರು.

ಇಂದಿರಾ ಕ್ಯಾಂಟೀನ್‌ ಆಹಾರದ ಬಗ್ಗೆ ತನಿಖೆಗೆ ಆದೇಶ

ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಹೆಸರು ಕೇಳಿದರೆ ಬಿಜೆಪಿಯವರು ಕೆಂಡಾಮಂಡಲ ಆಗುತ್ತಾರೆ. ಅವರ ಹೆಸರನ್ನು ಸಹಿಸಲು ಬಿಜೆಪಿಯವರಿಗೆ ಸಾಧ್ಯವೇ ಇಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್‌ ಸ್ಥಗಿತಗೊಳಿಸಲು ತನಿಖೆಯ ಹುನ್ನಾರ ಹೂಡುತ್ತಿದ್ದಾರೆ. ಇದರ ಸಲುವಾಗಿಯೇ ಇಂದಿರಾ ಕ್ಯಾಂಟೀನ್‌ಗೆ ರಾಜ್ಯ ಸರ್ಕಾರ ಹಣಕಾಸು ನೆರವು ನೀಡುವುದಿಲ್ಲ ಎಂದು ಹಣಕಾಸು ಸ್ಥಗಿತಗೊಳಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ನಲ್ಲಿ ಲೋಪಗಳಿದ್ದರೆ ಸರಿಪಡಿಸಲಿ. ಒಂದು ವೇಳೆ ಸ್ಥಗಿತಗೊಳಿಸಿದರೆ ಖಂಡಿತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.