ಹೆಬ್ಬಾಳ ಹಾಗೂ ವಿಶ್ವನಾಥ ನಾಗೇನಹಳ್ಳಿ ವಾರ್ಡ್‌ನ ಎರಡು ಇಂದಿರಾ ಕ್ಯಾಂಟೀನ್‌ಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ 

ಬೆಂಗಳೂರು(ಜು.13):  ಇಂದಿರಾ ಕ್ಯಾಂಟೀನ್‌ನ ಆಹಾರದಲ್ಲಿ ಶೀಘ್ರವೇ ಬದಲಾವಣೆ ಆಗಲಿದೆ. ಬೇರೆ ಬೇರೆ ಊಟ, ತಿಂಡಿ ಪೂರೈಕೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.
ಹೆಬ್ಬಾಳ ಹಾಗೂ ವಿಶ್ವನಾಥ ನಾಗೇನಹಳ್ಳಿ ವಾರ್ಡ್‌ನ ಎರಡು ಇಂದಿರಾ ಕ್ಯಾಂಟೀನ್‌ಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಸಾರ್ವಜನಿಕರ ಬಳಿ ಆಹಾರದ ಗುಣಮಟ್ಟ ವಿಚಾರಿಸಿದಾಗ ಪ್ರತಿನಿತ್ಯ ಅಕ್ಕಿಯಿಂದ ಮಾಡಿದ ಆಹಾರ ಮಾತ್ರ ಲಭ್ಯವಾಗಲಿದ್ದು, ಅದನ್ನು ಬದಲಿಸಲು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡುವ ಆಹಾರದ ಮೆನು ಶೀಘ್ರವೇ ಬದಲಾಗಲಿದೆ ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್‌ಗಳ ಮೇಲೆ ಬಿಬಿಎಂಪಿ ಅಧಿಕಾರಿಗಳಿಂದ ನಿಗಾ

ಇಂದಿರಾ ಕ್ಯಾಂಟೀನ್‌ನಲ್ಲಿ ವಿದ್ಯುತ್‌ ದೀಪ, ಕೈ ತೊಳೆಯಲು ನೀರಿನ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಬೇಕು. ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ತೆರೆಯಬೇಕೆಂದು ಸಿಬ್ಬಂದಿಗೆ ಸೂಚಿಸಿದರು. ಕ್ಯಾಂಟೀನ್‌ಗಳಿಗೆ ನಿಯೋಜಿಸಿದ ಮಾರ್ಷಲ್‌ಗಳಿಗೆ ಬೇರೆ-ಬೇರೆ ಜವಾಬ್ದಾರಿ ನೀಡುವಂತೆ ವಲಯ ಜಂಟಿ ಆಯುಕ್ತರಿಗೆ ಅವರು ಸೂಚಿಸಿದರು.

ಇಂದಿರಾ ಕ್ಯಾಂಟೀನ್‌ನ ಆಹಾರದ ಗುಣಮಟ್ಟ, ಹೆಚ್ಚು ಹಣ ಪಡೆಯುವ ವಿಚಾರವಾಗಿ ದೂರುಗಳಿದ್ದಲ್ಲಿ ಪಾಲಿಕೆಯ ಉಚಿತ ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡಿ ದೂರುಗಳನ್ನು ನೀಡಬಹುದು ಎಂದು ತಿಳಿಸಿದರು. ಈ ವೇಳೆ ವಲಯ ಜಂಟಿ ಆಯುಕ್ತೆ ಪಲ್ಲವಿ, ಪ್ರಧಾನ ಅಭಿಯಂತರ ಪ್ರಹ್ಲಾದ್‌, ವಲಯ ಮುಖ್ಯ ಅಭಿಯಂತರ ಸುಗುಣಾ ಉಪಸ್ಥಿತರಿದ್ದರು.