ಬೆಂಗಳೂರು [ಆ.17]:  ಪ್ರತಿ ದಿನ ಸುಮಾರು 12 ಸಾವಿರ ಜನ ಕಡಿಮೆ ದರದಲ್ಲಿ ತಿಂಡಿ, ಊಟ ಮಾಡುತ್ತಿರುವ ಬಿಬಿಎಂಪಿ ವ್ಯಾಪ್ತಿಯ 198 ಇಂದಿರಾ ಕ್ಯಾಂಟೀನ್‌ಗಳಿಗೆ ಇನ್ನುಂದೆ ಅನುದಾನ ನೀಡಲಾಗಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದ್ದು, ಇಂದಿರಾ ಕ್ಯಾಂಟೀನ್‌ಗಳನ್ನು ಸ್ವಂತ ಖರ್ಚಿನಲ್ಲಿ ನಡೆಸುವುದಾ, ಬಿಡುವುದಾ ಎನ್ನುವ ಪ್ರಶ್ನೆ ಬಿಬಿಎಂಪಿಗೆ ಉದ್ಭವಿಸಿದೆ.

ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಶನಿವಾರ ವಿಶೇಷ ಕೌನ್ಸಿಲ್‌ ಸಭೆ ಕರೆದಿದ್ದು, ಸಭೆಯಲ್ಲಿ ಪ್ರಮುಖವಾಗಿ ಈ ವಿಷಯ ಚರ್ಚೆಯಾಗುವ ಸಾಧ್ಯತೆಗಳಿವೆ. ಬಿಬಿಎಂಪಿ ಅನುದಾನದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸುವುದಾ ಬೀಡುವುದಾ? ನಡೆಸುವುದಾದರೆ ಪ್ರತೀ ವರ್ಷ ಇದಕ್ಕಾಗಿ ಸುಮಾರು 150 ಕೋಟಿಯಷ್ಟುಅನುದಾನವನ್ನು ಯಾವ ಮೂಲದಿಂದ ಹೊಂದಿಸುವುದು ಮಾಡುವುದು ಎಂಬೆಲ್ಲಾ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಇಂದಿರಾ ಕ್ಯಾಂಟೀನ್‌ ಬಂದ್ ಆಗುತ್ತಾ? : ಗೊಂದಲಕ್ಕೆ ತೆರೆ

ಇಂದಿರಾ ಕ್ಯಾಂಟೀನ್‌ ಯೋಜನೆ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಆರಂಭಿಸಲಾಗಿತ್ತು. ಮೊದಲು ಬೆಂಗಳೂರಿನಲ್ಲಿ ಆರಂಭಿಸಿದ್ದ ಯೋಜನೆಯನ್ನು ನಂತರ ರಾಜ್ಯದ ಇತರೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೂ ವಿಸ್ತರಿಸಲಾಗಿತ್ತು. ಇದನ್ನು ಮೈತ್ರಿ ಸರ್ಕಾರದಲ್ಲೂ ಮುಂದುವರೆಸಲಾಗಿತ್ತು. ಇದೀಗ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಎರಡು ವರ್ಷಗಳ ಮಟ್ಟಿಗೆ ಸರ್ಕಾರ ನಡೆಸುವುದಾಗಿ ಹೇಳಿತ್ತು. ಈ ಬಾರಿಯ ಬಜೆಟ್‌ನಲ್ಲಿ ಕೂಡ ಯೋಜನೆಗೆ ಅನುದಾನ ಮೀಸಲಿಟ್ಟಿಲ್ಲ. ಹಾಗಾಗಿ ಸರ್ಕಾರದಿಂದ ಅನುದಾನ ನೀಡಲಾಗುವುದಿಲ್ಲ. ಎರಡು ವರ್ಷ ಮುಗಿದಿರುವುದರಿಂದ ಇನ್ಮುಂದೆ ಬಿಬಿಎಂಪಿಯಿಂದಲೇ ಯೋಜನೆ ನಡೆಸಿಕೊಂಡು ಹೋಗುವಂತೆ ಹೇಳಿದೆ. ಆದರೆ, ಬಿಬಿಎಂಪಿ 2019-20ನೇ ಸಾಲಿನಲ್ಲಿ 152 ಕೋಟಿ ರು. ಅಂದಾಜು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದೆ. ಜತೆಗೆ ಹಿಂದಿನ ವರ್ಷದ ಹೆಚ್ಚುವರಿ ವೆಚ್ಚದ 58 ಕೋಟಿ  ರು. ಬಿಡುಗಡೆ ಮಾಡುವಂತೆಯೂ ಎರಡು ಬಾರಿ ಕೋರಿದೆ. ಆದರೆ, ಸರ್ಕಾರ ಇದಕ್ಕೆ ಸ್ಪಂಧಿಸಿಲ್ಲ.

ಸದಸ್ಯರ ನಿರ್ಧಾರ ತಿಳಿಯೋಣ: ಆಯುಕ್ತ

ಈ ಮಧ್ಯೆ, ಸರ್ಕಾರ ಇಂದಿರಾ ಕ್ಯಾಂಟೀನ್‌ಗೆ ಅನುದಾನ ನೀಡಲಾಗುವುದಿಲ್ಲ ನಗರಾಭಿವೃದ್ಧಿ ಇಲಾಖೆಯಿಂದ ಹೇಳಿಕೆ ಬಂದಿರುವುದು ನಿಜ ಎನ್ನುವ ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌, ಆದರೆ, ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚುವುದಿಲ್ಲ. ಪಾಲಿಕೆಯಿಂದಲೇ ನಡೆಸಬೇಕಾಗುತ್ತದೆ. ಆ.15ಕ್ಕೆ ಎರಡು ಟೆಂಡರ್‌ ಮುಗಿದಿದ್ದರೂ ಈಗಿರುವ ರಿವಾರ್ಡ್ಸ್ ಮತ್ತು ಶೆಫ್‌ಟಾಕ್‌ ಗುತ್ತಿಗೆದಾರ ಕಂಪನಿಗಳ ಮೂಲಕವೇ 172 ಸ್ಥಿರ ಹಾಗೂ 22 ಸಂಚಾರಿ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ತಯಾರಿಸಿ ಪೂರೈಸಲಾಗುತ್ತಿದೆ. ಈಗಾಗಲೇ ಹೊಸ ಗುತ್ತಿಗೆ ಪ್ರಕ್ರಿಯೆಯನ್ನೂ ಪಾಲಿಕೆಯಿಂದ ಆರಂಭಿಸಲಾಗಿದೆ. ಸರ್ಕಾರದ ವೆಬ್‌ಸೈಟ್‌ನಲ್ಲೇ ಟೆಂಡರ್‌ ಕರೆಯಬೇಕು. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಟೆಂಡರ್‌ ಕರೆಯುವುದು ತಡವಾಗಿದೆ. ಜತೆಗೆ ಈ ವಿಷಯ ಶನಿವಾರ ಕೌನ್ಸಿಲ್‌ ಸಭೆಯಲ್ಲಿ ಚರ್ಚೆಗೆ ಬರಬಹುದು. ಸದಸ್ಯರು ಏನು ನಿರ್ಧಾರ ಮಾಡುತ್ತಾರೆ ನೋಡೋಣ ಎಂದು ತಿಳಿಸಿದ್ದಾರೆ.