ಬೆಂಗಳೂರು [ಆ.12]: ಇಂದಿರಾ ಕ್ಯಾಂಟೀನ್‌ ಆಹಾರ ಪೂರೈಕೆ ಗುತ್ತಿಗೆ ಆ.15ಕ್ಕೆ ಮುಕ್ತಾಯವಾದರೂ ಹೊಸ ಗುತ್ತಿಗೆದಾರರ ನೇಮಕ ಮಾಡುವವರೆಗೆ ಈಗಿರುವ ಗುತ್ತಿಗೆದಾರರೆ ಆಹಾರ ಪೂರೈಕೆ ಮಾಡಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ ಆರಂಭವಾಗಿ ಎರಡು ವರ್ಷ ಪೂರ್ಣಗೊಳ್ಳುತ್ತಿದ್ದು, ಇದೇ ವೇಳೆ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಗುತ್ತಿಗೆದಾರರ ಗುತ್ತಿಗೆ ಅವಧಿವೂ ಇದೇ ಆ.15ಕ್ಕೆ ಮುಕ್ತಾಯಗೊಳ್ಳುವುದರಿಂದ ಆ.16 ರಿಂದ ಯಾರು ಆಹಾರ ಪೂರೈಕೆ ಮಾಡಲಿದ್ದಾರೆ ಎಂಬ ಗೊಂದಲಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

ಇಂದಿರಾ ಕ್ಯಾಂಟೀನ್ ಬಂದ್ ?

ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡುತ್ತಿರುವ ಗುತ್ತಿಗೆದಾರರ ಗುತ್ತಿಗೆ ಅವಧಿ ಆ.15ಕ್ಕೆ ಮುಕ್ತಾಯಗೊಳ್ಳಲಿದೆ. ಈಗಾಗಲೇ ಬಿಬಿಎಂಪಿ ಹೊಸ ಗುತ್ತಿಗೆ ಪ್ರಕ್ರಿಯೆ ಆರಂಭಿಸಿದೆ. ಆದರೆ, ರಾಜ್ಯಸರ್ಕಾರ ರೂಪಿಸಿರುವ ಟೆಂಡರ್‌ ಆಹ್ವಾನಿಸುವ ವೆಬ್‌ಸೈಟ್‌ನಲ್ಲಿಯೇ ಪಾಲಿಕೆ ಟೆಂಡರ್‌ ಆಹ್ವಾನ ಮಾಡಬೇಕು. ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆ ವಿಳಂಬವಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈಗಿರುವ ಗುತ್ತಿಗೆದಾರರೇ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮಾಡಲಿದ್ದಾರೆ. ಆಹಾರ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಅವರು ತಿಳಿಸಿದರು.