ಜಲ ಸಂರಕ್ಷಣೆ ಕುರಿತು ಆರೋಗ್ಯಾಧಿಕಾರಿಗಳ ಅಸಡ್ಡೆ

  • ಜಲ ಸಂರಕ್ಷಣೆ ಕುರಿತು ಆರೋಗ್ಯಾಧಿಕಾರಿಗಳ ಅಸಡ್ಡೆ
  • ಗ್ರಾಮ ಪಂಚಾಯಿತಿಯಿಂದ ನಲ್ಲಿ ನೀರು ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ
Indifference of health officials about water conservation rav

ಸಿರಿಗೆರೆ (ಅ.22)\ ಸ್ವಚ್ಛತೆಯನ್ನು ಬೋಧಿಸುವ ಆಸ್ಪತ್ರೆಯ ಇಡೀ ಕಾಂಪೊಂಡ್‌ ತುಂಬ ನೀರು ತುಂಬಿಕೊಂಡು, ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗಿದೆ ಹೋಬಳಿ ಕೇಂದ್ರವಾದ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರ.

Jal Shakti Abhiyan: ಜಲಸಂರಕ್ಷಣೆಯಲ್ಲಿ ಕರ್ನಾಟಕದ ಗ್ರಾಮ ಪಂಚಾಯಿತಿ ದಕ್ಷಿಣ ಭಾರತಕ್ಕೇ ನಂ.1

ಆಸ್ಪತ್ರೆಯ ಕಾಂಪೊಂಡ್‌ ಒಳಗೆ ಹೆಜ್ಜೆ ಇಡುವ ರೋಗಿಗಳು ಅಲ್ಲಿಯೇ ತಮ್ಮ ಪಾದರಕ್ಷೆಗಳನ್ನು ಬಿಟ್ಟು, ನಿಂತಿರುವ ನೀರಿನಲ್ಲಿ ಹೆಜ್ಜೆಗಳ ಮೇಲೆ ಹೆಜ್ಜೆಯನ್ನಿಟ್ಟು ಹೋಗಿ ವೈದ್ಯರನ್ನು ಕಾಣಬೇಕಾದಂತಹ ಪರಿಸ್ಥಿತಿ ಉಂಟಾಗಿದೆ. ಕಾರಣ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದ ಮೇಲಿನ ಓವರ್‌ಹೆಡ್‌ ಟ್ಯಾಂಕ್‌ ಒಡೆದು ಹೋಗಿದ್ದು, ಅಲ್ಲಿಗೆ ಪಂಪ್‌ ಮಾಡಿದ ನೀರು ನೆಲದ ಮೇಲೆ ಹರಿದು ಬರುತ್ತಿದೆ. ಇದು ಕಳೆದ ಒಂದು ವಾರದಿಂದ ನಡೆಯುತ್ತಿದ್ದರೂ ಆಸ್ಪತ್ರೆಯ ಆಡಳಿತ ವರ್ಗ ಇತ್ತಕಡೆ ತಮ್ಮ ಚಿತ್ತ ಹರಿಸಿಲ್ಲ. ಹೀಗಾಗಿ ರೋಗಿಗಳು ವೈದ್ಯರನ್ನು ಕಾಣಲು ಹೆಣಗಾಡಬೇಕಾದ ಸ್ಥಿತಿ ಇದೆ. ಹೆಚ್ಚಾದ ನೀರು ಆಸ್ಪತ್ರೆಯ ಕಟ್ಟಡದ ಹಿಂದಿನ ಚರಂಡಿ ಸೇರುತ್ತಿದೆ.

ಅನುಕೂಲ ಕಲ್ಪಿಸಿದ ಗ್ರಾಪಂ

ಕಳೆದ ಎರಡು ವರ್ಷಗಳ ಹಿಂದೆ ಅಂತರ್ಜಲ ಕಡಿಮೆಯಾದ ಪರಿಣಾಮ ಆರೋಗ್ಯ ಕೇಂದ್ರದ ಕೊಳವೆ ಬಾವಿಯಿಂದ ನೀರು ಬರುತ್ತಿರಲಿಲ್ಲ. ಇದನ್ನರಿತ ಗ್ರಾಪಂ ತನ್ನ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಸೂಳೇಕೆರೆಯಿಂದ ಬರುವ ಕುಡಿಯುವ ನೀರಿನ ಪೈಪ್‌ ಮೂಲಕ ಆಸ್ಪತ್ರೆಗೆ ನೀರು ಸಂಪರ್ಕ ಕಲ್ಪಿಸಿದೆ. ಇದಾದ ನಂತರ ಆಸ್ಪತ್ರೆಯಲ್ಲಿ ನೀರಿನ ಕೊರತೆ ತಪ್ಪಿದೆ. ನೀರನ್ನು ಸಂರಕ್ಷಿಸಿ, ಬಳಸಿಕೊಳ್ಳಬೇಕಿದ್ದ ಆಡಳಿತ ವರ್ಗ, ಆದರೆ ಅವು ಅತ್ತಕಡೆ ಗಮನ ಕೊಡದೇ ಇದ್ದುದರಿಂದ ನೀರು ಹರಿದು ಚರಂಡಿ ಪಾಲಾಗುತ್ತಿದೆ.

ನೀರು ಕೆಲವು ದಿನಗಳ ಕಾಲ ಆಸ್ಪತ್ರೆಯ ಕಟ್ಟಡದ ಮೇಲೆಲ್ಲಾ ನಿಂತು ಹರಿದಿರುವುದರಿಂದ ಕಟ್ಟಡದ ಮೇಲ್ಛಾವಣಿ ಕಪ್ಪು ಬಣ್ಣಕ್ಕೆ ತಿರುಗಿದೆ. ಅಲ್ಲಲ್ಲಿ ನೀರು ಸೋರಿರುವುದರಿಂದ ಗೋಡೆಗಳು ಸಹ ಬಣ್ಣ ಕಳೆದುಕೊಂಡಿವೆ ಎಂಬುದು ಸಾರ್ವಜನಿಕರ ದೂರು. ಆಸ್ಪತ್ರೆಯ ಆಡಳಿತ ವರ್ಗ ನೀರಿನ ಬಗ್ಗೆ ಹೀಗೆ ಅಸಡ್ಡೆ ತೋರಿದರೆ ನೀರು ಸಂಪರ್ಕ ಕಡಿತಗೊಳಿಸಲಾಗುವು ದು. ಆಸ್ಪತ್ರೆಯ ಆವರಣದಲ್ಲಿ ಇರುವ ಅವರದೇ ಕೊಳವೆ ಬಾವಿಗಳಿಗೆ ಮೋಟಾರು ಬಿಟ್ಟು ನೀರು ಎತ್ತಿಕೊಳ್ಳಲಿ ಎಂಬುದು ಗ್ರಾಪಂ ಅಧ್ಯಕ್ಷರ ಅಭಿಪ್ರಾಯ. ಆದರೆ ಅಸಲಿಗೆ ಈಗ ಆಸ್ಪತ್ರೆಯ ಕೊಳವೆ ಬಾವಿಗಳ ಮೋಟಾರುಗಳು ಮತ್ತು ಇತರೆ ಸಲಕರಣೆಗಳೇ ಮಾಯವಾಗಿವೆ ಎಂಬ ಗುಸುಗುಸು ಕೇಳಿಬರುತ್ತಿದೆ.

Mann Ki Baat: ಮಾಧವಪುರ ಜಾತ್ರೆ, ನವರಾತ್ರಿಯಿಂದ ಜಲಸಂರಕ್ಷಣೆವರೆಗೆ ಮೋದಿ ಭಾಷಣದ ಹೈಲೈಟ್ಸ್‌

ಇವತ್ತು ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದೇವೆ. ನೀರಿನ ಓವರ್‌ಹೆಡ್‌ ಟ್ಯಾಂಕ್‌ ಒಡೆದುಹೋದದ್ದರ ಕಾರಣದಿಂದ ಹೀಗಾಗಿದೆ. ಮುಂದೆ ಸರಿಯಾಗಿ ನೀರನ್ನು ಬಳಸಲಾಗುವುದು.

ಡಾ. ವಿನಯ್‌, ವೈದ್ಯಾಧಿಕಾರಿ, ಭರಮಸಾಗರ

ಭರಮಸಾಗರದ ಕೆಲವು ಭಾಗಗಳಲ್ಲಿ ನೀರಿನ ಕೊರತೆ ಇದ್ದರೂ, ಆಸ್ಪತ್ರೆ ಮತ್ತು ಅಲ್ಲಿನ ರೋಗಿಗಳಿಗೆ ನೆರವಾಗಲೆಂದು ಕುಡಿಯುವ ನೀರಿನಲ್ಲಿಯೇ ಆಸ್ಪತ್ರೆಗೆ ನೀರು ಒದಗಿಸಿದ್ದೇವೆ. ಅವರು ಬೇಕಾಬಿಟ್ಟಿಈ ರೀತಿ ವರ್ತಿಸುವುದು ಸರಿಯಲ್ಲ. ನೀರಿನ ಬಗ್ಗೆ ಎಲ್ಲರೂ ಜಾಗರೂಕತೆ ವಹಿಸಬೇಕು.

- ಮಂಜುಳಾ ಕರಿಬಸಪ್ಪ ಗ್ರಾಪಂ ಅಧ್ಯಕ್ಷೆ, ಭರಮಸಾಗರ

Latest Videos
Follow Us:
Download App:
  • android
  • ios