Asianet Suvarna News Asianet Suvarna News

ಭಾರತದ ಮೊದಲ ಭೂಗತ ಟ್ರಾನ್ಸ್‌ಫಾರ್ಮರ್‌ ಬೆಂಗಳೂರಲ್ಲಿ: ಏನಿದರ ವಿಶೇಷತೆ?

2 ಕೋಟಿ ರು. ವೆಚ್ಚದಲ್ಲಿ 500 ಕೆವಿಎ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ ಘಟಕ ಸ್ಥಾಪನೆ, ವಿದ್ಯುತ್‌ ಅವಘಡದಿಂದ ಜೀವಹಾನಿ ತಪ್ಪಿಸಲು ಈ ಕ್ರಮ
 

Indias First Underground Transformer in Bengaluru grg
Author
First Published Sep 6, 2023, 2:00 AM IST

ಬೆಂಗಳೂರು(ಸೆ.06):  ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ದೇಶದ ಮೊದಲ ಭೂಗತ ವಿದ್ಯುತ್‌ ಪರಿವರ್ತಕ ಕೇಂದ್ರವು ಮಂಗಳವಾರ ಲೋಕಾರ್ಪಣೆಗೊಂಡಿತು. ಮಲ್ಲೇಶ್ವರಂನ 15ನೇ ಅಡ್ಡರಸ್ತೆಯಲ್ಲಿ ಬೆಸ್ಕಾಂ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ 1.98 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಿರುವ 500 ಕೆ.ವಿ.ಎ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ ಹೊಂದಿರುವ ಈ ಕೇಂದ್ರವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಈ ರೀತಿ ಭೂಮಿಯ ಒಳಭಾಗದಲ್ಲಿ ಟ್ರಾನ್ಸ್‌ಫಾರ್ಮರ್‌ ಅಳವಡಿಕೆ ಮಾಡಿರುವುದು ದೇಶದಲ್ಲಿ ಇದೇ ಮೊದಲು. ಸಂಭವನೀಯ ವಿದ್ಯುತ್‌ ಅವಘಡಗಳಿಂದ ಯಾವುದೇ ಜೀವ, ಆಸ್ತಿ ಪಾಸ್ತಿಗಳಿಗೆ ಹಾನಿಯಾಗದಂತೆ ತಡೆಯುವುದು, ವಿದ್ಯುತ್‌ ಸರಬರಾಜು ವ್ಯತ್ಯಯ ತಪ್ಪಿಸುವುದು, ಪಾದಚಾರಿಗಳ ಸುರಕ್ಷತೆ ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಇನ್ನಷ್ಟುಭೂಗತ ವಿದ್ಯುತ್‌ ಪರಿವರ್ತಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಮೊದಲು ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

ಗ್ರಾಹಕರಿಗೆ ಮತ್ತೆ ಶಾಕ್‌: ವಿದ್ಯುತ್‌ ಶುಲ್ಕ ಹೆಚ್ಚಳ..!

ಬೆಂಗಳೂರಿನಲ್ಲಿ ಇಂತಹ ಹೊಸ ಪ್ರಯೋಗಗಳೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ 2500 ಕೋಟಿ ರು. ನೀಡಿದ್ದಾರೆ ಎಂದು ಹೇಳಿದರು.

ಇನ್ನೂ 300 ಟ್ರಾನ್ಸ್‌ಫಾರ್ಮರ್‌ ಶಿಫ್ಟ್‌?:

ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಭೂಗತ ವಿದ್ಯುತ್‌ ಪರಿವರ್ತಕ ಕೇಂದ್ರಗಳಿದ್ದವು. ಅಲ್ಲಿನ ಸರ್ಕಾರಗಳು ಸಾರ್ವಜನಿಕರ ಅನುಕೂಲತೆ ಮತ್ತು ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ಕೇಂದ್ರಗಳನ್ನು ನಿರ್ಮಾಣ ಮಾಡಿವೆ. ಇದೀಗ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ದೇಶದಲ್ಲೆ ಮೊದಲ ಬಾರಿಗೆ ಭೂಗತ ವಿದ್ಯುತ್‌ ಪರಿವರ್ತಕ ಕೇಂದ್ರ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಪಾದಚಾರಿ ಮಾರ್ಗದಲ್ಲಿರುವ ಅಂದಾಜು 300 ಟ್ರಾನ್ಸ್‌ ಫಾರ್ಮರ್‌ಗಳನ್ನು ಈ ರೀತಿ ಭೂಗತ ಕೇಂದ್ರಕ್ಕೆ ವರ್ಗಾಯಿಸಲು ಯೋಜಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಲೋಡ್‌ ಶೆಡ್ಡಿಂಗ್‌: ವಿದ್ಯುತ್‌ ಖರೀದಿಗೆ ಹೊರ ರಾಜ್ಯಗಳಿಗೆ ಕರ್ನಾಟಕ ಸರ್ಕಾರ ಮೊರೆ?

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ, ಹಣಕಾಸು ನಿರ್ದೇಶಕ ದರ್ಶನ್‌ ಜೆ., ತಾಂತ್ರಿಕ ನಿರ್ದೇಶಕ ರಮೇಶ್‌ ಎಚ್‌.ಜೆ., ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಏನಿದು ಭೂಗತ ವಿದ್ಯುತ್‌ ಪರಿವರ್ತಕ ಕೇಂದ್ರ?

ಸಾರ್ವಜನಿಕರ ಸುರಕ್ಷತೆ ಹಾಗೂ ಅನುಕೂಲದ ದೃಷ್ಟಿಯಿಂದ ಭೂಮಿಯ ಕೆಳಭಾಗದಲ್ಲಿ ಕೊಠಡಿಯನ್ನು ನಿರ್ಮಿಸಿ ಅದರಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲಾಗುತ್ತದೆ. ಸದ್ಯ ಮಲ್ಲೇಶ್ವರಂನಲ್ಲಿ ಸ್ಥಾಪಿಸಿರುವ ಈ ಕೇಂದ್ರದಲ್ಲಿ ರಸ್ತೆಯ ಮೇಲ್ಮೆನಿಂದ 8 ಅಡಿ ಆಳದಲ್ಲಿ ಟ್ರಾನ್ಸ್‌ಫಾರ್ಮರ್‌ ಅಳವಡಿಸಲಾಗಿದೆ. ಬೆಸ್ಕಾಂನಿಂದ ವಿದ್ಯುತ್‌ ಸಂಬಂಧಿತ ಕಾಮಗಾರಿ ಹಾಗೂ ಬಿಬಿಎಂಪಿಯಿಂದ ಸಿವಿಲ್‌ ಕಾಮಗಾರಿಗಳನ್ನು ಮಾಡಲಾಗಿದೆ. ಈ ಕೇಂದ್ರವು 500 ಕೆವಿಎ ಸಾಮರ್ಥ್ಯದ ತೈಲರಹಿತ ಟ್ರಾನ್ಸ್‌ಫಾರ್ಮರ್‌, 8-ವೇ ಸಾಲಿಡ್‌ ಸ್ಟೆಟ್‌ ರಿಂಗ್‌ ಮೇನ್‌ ಯೂನಿಟ್‌, 5-ವೇ ಎಲ್‌.ಟಿ ವಿತರಣಾ ಪೆಟ್ಟಿಗೆ, ಯುಪಿಎಸ್‌, ಸ್ವಯಂಚಾಲಿತ ವಾಟರ್‌ ಪಂಪ್‌ ಮತ್ತು ಹವಾ ನಿಯಂತ್ರಣ ವ್ಯವಸ್ಥೆ ಇದೆ. ದುರಸ್ತಿ ಸಂದರ್ಭದಲ್ಲಿ ಒಳ ಹೋಗಲು ವ್ಯವಸ್ಥೆ ಇದೆ. ಈ ಚೇಂಬರ್‌ ನೀರಿನ ಸಂಪ್‌ ರೀತಿ ಇದ್ದು, ನಾಲ್ಕೂ ಕಡೆ ಕಾಂಕ್ರೀಟ್‌ ಗೋಡೆಯಿಂದ ಮುಚ್ಚಲಾಗಿದೆ. ಇದರಿಂದ ಈ ಕೇಂದ್ರದ ಮೇಲ್ಬಾಗದಲ್ಲಿ ಪಾದಚಾರಿಗಳು ಸಂಚರಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಒಂದು ವೇಳೆ ಟ್ರಾನ್ಸ್‌ಫಾರ್ಮರ್‌ ಸ್ಫೋಟದಂತಹ ಘಟನೆ ನಡೆದರೂ ಕೇಂದ್ರದ ಮೇಲ್ಬಾಗದಲ್ಲಿ ಯಾವುದೇ ಅವಘಡ ಆಗುವುದಿಲ್ಲ. ವಿದ್ಯುತ್‌ ಅವಘಡ, ವಿದ್ಯುತ್‌ ವ್ಯತ್ಯಯ ತಡೆಯಲು ಸಹಕಾರಿಯಾಗಲಿದೆ.

Follow Us:
Download App:
  • android
  • ios