ಒಂದೇ ಸೂರಿನಲ್ಲಿ ಒದಗಿಸುವ ‘ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ವನ್ನು ಮುಖ್ಯಮಂತ್ರಿ ಬಸವವಾಜ ಬೊಮ್ಮಾಯಿ ಇಂದು ಉದ್ಘಾಟನೆ ಮಾಡಲಿದ್ದಾರೆ .

ಬೆಂಗಳೂರು(ಸೆ.17): ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಪ್ಯಾಲೇಸ್‌ ಗುಟ್ಟಹಳ್ಳಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪೂರ್ಣ ಡಿಜಿಟಲೀಕರಣದೊಂದಿಗೆ ಹಲವು ಸೇವೆಗಳನ್ನು ಒಂದೇ ಸೂರಿನಲ್ಲಿ ಒದಗಿಸುವ ‘ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ವನ್ನು (ಸಿಯುಪಿಎಚ್‌ಸಿ) ಮುಖ್ಯಮಂತ್ರಿ ಬಸವವಾಜ ಬೊಮ್ಮಾಯಿ ಅವರು ಶನಿವಾರ ಉದ್ಘಾಟನೆ ಮಾಡಲಿದ್ದಾರೆ ಎಂದು ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಶುಕ್ರವಾರ ಆಸ್ಪತ್ರೆಯ ಉದ್ಘಾಟನೆ ಸಿದ್ಧತೆ ಕಾರ್ಯ ಪರಿಶೀಲಿಸಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಪ್ರಥಮ ಡಿಜಿಟಲ್‌ ಪ್ರಾಥಮಿಕ ಆರೋಗ್ಯ ಕೇಂದ್ರ ಇದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಇದೊಂದು ಮಾದರಿ ಆಗಲಿದೆ ಎಂದರು.

ಬಿಬಿಎಂಪಿ ಮತ್ತು ನ್ಯಾಷನಲ್‌ ಹೆಲ್ತ್‌ ಮಿಷನ್‌ ಯೋಜನೆಗಳಡಿ ಈ ಆಸ್ಪತ್ರೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 15 ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಸಿಬ್ಬಂದಿ ಕೊರತೆ ಉಂಟಾಗದಂತೆ ಕ್ರಮ ವಹಿಸಲಾಗಿದೆ. ದಿನಕ್ಕೆ 150 ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಆರೋಗ್ಯ ಕೇಂದ್ರ ಹೊಂದಿದೆ. ಯುನೈಟೆಡ್‌ ವೇ ಎನ್ನುವ ಕಂಪನಿಯವರು ಈ ಆಸ್ಪತ್ರೆಗೆ ಬೇಕಾದ ಉಪಕರಣಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ. ಬಿಬಿಎಂಪಿಯಿಂದ ನಿರ್ವಹಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾರವಾರ: ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ

ಕೇಂದ್ರದಲ್ಲಿ ಪ್ರಯೋಗಾಲಯ, ಡಿಜಿಟಲ್‌ ಎಕ್ಸ್‌ರೇ, ಅಲ್ಟಾ್ರಸೌಂಡ್‌ ಸ್ಕ್ಯಾ‌ನಿಂಗ್‌, ಪಿಎಫ್‌ಟಿ ಮತ್ತು ಇಸಿಜಿ ಸೌಲಭ್ಯಗಳು ಸಿಗುತ್ತವೆ. ಇದಲ್ಲದೆ, ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ತುರ್ತು ಚಿಕಿತ್ಸಾ ಘಟಕ, ಫಿಸಿಯೋಥೆರಪಿ, ಪ್ರಧಾನಮಂತ್ರಿಗಳ ಜನೌಷಧ ಕೇಂದ್ರ ಲಭ್ಯವಿರಲಿದ್ದು, ಒಳರೋಗಿಗಳ ವಿಭಾಗವೂ ಇದೆ. ಅಲ್ಲದೆ, ಆಸ್ಪತ್ರೆಯಲ್ಲಿ ಇಎಂಆರ್‌ (ಎಲೆಕ್ಟ್ರಾನಿಕ್‌ ಮೆಡಿಕಲ್‌ ರೆಕಾರ್ಡ್‌) ವ್ಯವಸ್ಥೆಯೂ ಇದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಬಿಎಂಪಿ ಆರೋಗ್ಯ ಆಯುಕ್ತ ಡಾ.ತ್ರಿಲೋಕಚಂದ್ರ ಇದ್ದರು.

ಶೀಘ್ರದಲ್ಲಿ ಮತ್ತೆ 4 ಆಸ್ಪತ್ರೆ ಸ್ಥಾಪನೆ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳ ಪೈಕಿ ಐದು ವಾರ್ಡ್‌ಗಳಲ್ಲಿ ಸಿಯುಪಿಎಚ್‌ಸಿ ಆರಂಭಿಸಲಾಗುತ್ತಿದೆ. ಪ್ಯಾಲೇಸ್‌ ಗುಟ್ಟಹಳ್ಳಿ ಆಸ್ಪತ್ರೆ ಹೊರತು ಪಡಿಸಿ ನಾಗಪ್ಪ ಬ್ಲಾಕ್‌, ಗಾಂಧಿ ಗ್ರಾಮ, ಯಶವಂತಪುರ ಮತ್ತು ಮತ್ತೀಕೆರೆಯಲ್ಲಿ ಇನ್ನೊಂದು ತಿಂಗಳಲ್ಲಿ ಆರಂಭಿಸಲಾಗುವುದು. ಎರಡು ವಾರ್ಡ್‌ನಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಬೇಕಿದೆ. ಅದಕ್ಕೆ ನಗರೋತ್ಥಾನ ಯೋಜನೆಯಡಿ ತಲಾ .1.50 ಕೋಟಿ ಕೊಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಆಸ್ಪತ್ರೆಯಲ್ಲಿನ ಸೌಲಭ್ಯಗಳು

ದಂತ ಪರೀಕ್ಷೆ, ಕಣ್ಣಿನ ಪರೀಕ್ಷೆ, ಹೃದ್ರೋಗ ಪರೀಕ್ಷೆ, ಡಿಜಿಟಲ್‌ ಎಕ್ಸ್‌ರೇ, ಪ್ರಯೋಗಾಲಯಗಳು, ಮಲ, ಮೂತ್ರ, ರಕ್ತ ಮತ್ತು ಕಫ ಪರೀಕ್ಷೆ, ಪಿಎಫ್‌ಟಿ ಪರೀಕ್ಷೆ ಫಿಸಿಯೋಥೆರಪಿ, ತುರ್ತು ಚಿಕಿತ್ಸಾ ಸೌಲಭ್ಯ, ಹೊರರೋಗಿಗಳ ವಿಭಾಗ, ಒಳರೋಗಿಗಳ ವಿಭಾಗ, ಅಲ್ಟ್ರಾಸೌಂಡ್‌ ಸ್ಕ್ಯಾ‌ನಿಂಗ್‌, ಇಸಿಜಿ, ವೈದ್ಯಕೀಯ ಪೈಪ್‌ಲೈನ್‌ ಸಹಿತ ಆಕ್ಸಿಜನ್‌ ಜನರೇಟರ್‌ ಮತ್ತು ಜನೌಷಧಿ ಕೇಂದ್ರ ಹಾಗೂ ತಜ್ಞ ವೈದ್ಯರ ಲಭ್ಯತೆ.