ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಅ.28):  ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಸೈಬರ್‌ ಕಳ್ಳರು ಹಣ ಎಗರಿಸಿದ್ದಾರೆ. ಮುಂದೆ ಏನ್ಮಾಡೋದು. ಪೊಲೀಸರಿಗೆ ಹೇಗೆ ದೂರು ಕೊಡೋದು. ತಕ್ಷಣವೇ ಬ್ಯಾಂಕ್‌ ಖಾತೆಯಲ್ಲಿ ಹಣ ವರ್ಗಾವಣೆ ಹೇಗೆ ಸ್ಥಗಿತಗೊಳಿಸೋದು... ಇತ್ಯಾದಿ ಇಂಥ ಪ್ರಶ್ನೆಗಳಿಗೆ ಐದು ನಿಮಿಷದಲ್ಲೇ ಬ್ಯಾಂಕ್‌ ಗ್ರಾಹಕರಿಗೆ ಉತ್ತರ ಸಿಗಲಿದೆ.

ಆನ್‌ಲೈನ್‌ ವಂಚಕರಿಂದ ಬ್ಯಾಂಕ್‌ ಖಾತೆಯಲ್ಲಿ ಹಣ ಕಳೆದುಕೊಂಡವರು ಕ್ಷಣಾರ್ಧದಲ್ಲೇ ಪೊಲೀಸರಿಗೆ ದೂರು ಸಲ್ಲಿಸುವ ಹಾಗೂ ಗ್ರಾಹಕರ ಬ್ಯಾಂಕ್‌ ಖಾತೆಯನ್ನು ತಕ್ಷಣವೇ ಸ್ಥಗಿತಗೊಳಿಸುವ ಸಲುವಾಗಿ ಬ್ಯಾಂಕಿಂಗ್‌ ವಲಯದ ಸಹಕಾರದೊಂದಿಗೆ ಹೊಸ ವ್ಯವಸ್ಥೆ ಜಾರಿಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಯೋಜನೆ ರೂಪಿಸಿದ್ದಾರೆ.

ಇದಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ‘ಸೈಬರ್‌ ನಿಯಂತ್ರಣ ಕೊಠಡಿ (ಕಂಟ್ರೋಲ್‌ ರೂಂ)’ ಸ್ಥಾಪನೆಗೆ ಭರದ ಸಿದ್ಧತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ನಿಯಂತ್ರಣ ಕೊಠಡಿಗೆ ಚಾಲನೆ ಸಿಗಲಿದೆ. ವಿಶೇಷವೆಂದರೆ ಸೈಬರ್‌ ವಂಚನೆಗೆ ಲಗಾಮು ಹಾಕುವ ನಿಟ್ಟಿನಲ್ಲಿ ರೂಪಿಸಲಾಗಿರುವ ಈ ಮಹತ್ವದ ಯೋಜನೆಗೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಸಹ ಸಮ್ಮತಿ ಸೂಚಿಸಿದ್ದು, ಪೊಲೀಸರೊಂದಿಗೆ ಕೈಜೋಡಿಸುವುದಾಗಿ ಕೂಡಾ ಆಯುಕ್ತರಿಗೆ ಆರ್‌ಬಿಐ ಪತ್ರ ಮುಖೇನ ಒಪ್ಪಿಗೆ ನೀಡಿದೆ.

ಸೈಬರ್‌ಕ್ರೈಂ: ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಕೇಸ್‌ ದಾಖಲು

ವಾಟ್ಸಾಪ್‌, ಎಸ್‌ಎಂಎಸ್‌ನಲ್ಲೇ ದೂರು:

ಬ್ಯಾಂಕ್‌ ಗ್ರಾಹಕರೊಬ್ಬರ ಖಾತೆಗೆ ಕನ್ನ ಹಾಕಿ ಆನ್‌ಲೈನ್‌ ವಂಚಕರು ಹಣ ದೋಚುತ್ತಾರೆ. ಆಗ ಆ ಗ್ರಾಹಕರಿಗೆ ಹಣ ಡ್ರಾ ಮಾಡಿರುವ ಬಗ್ಗೆ ಬ್ಯಾಂಕ್‌ನಿಂದ ಅಲರ್ಟ್‌ ಸಂದೇಶ ಬರುತ್ತದೆ. ತಾನು ಹಣ ಡ್ರಾ ಮಾಡದೆ ಹೋದರೂ ಹೇಗೆ ಹಣ ಡ್ರಾ ಆಗಿದೆ ಎಂದೂ ಗ್ರಾಹಕನಿಗೆ ಯೋಚನೆ ಶುರುವಾಗುತ್ತದೆ. ತನ್ನ ಖಾತೆಯಲ್ಲಿ ಮತ್ತೆ ಹಣ ಕಳವಾಗದಂತೆ ತಡೆಯಲು ಏನು ಮಾಡುವುದು ಎಂದು ಮತ್ತಷ್ಟುಚಿಂತೆಗೀಡಾಗುತ್ತಾನೆ. ಪೊಲೀಸರಿಗೆ ದೂರ ನೀಡದೆ ಖಾತೆ ಸ್ಧಗಿತಗೊಳಿಸಲು ಕೆಲವು ಬ್ಯಾಂಕ್‌ನವರು ತಕರಾರು ತೆಗೆಯಬಹುದು. ಪೊಲೀಸರಿಗೆ ದೂರು ಕೊಡಲು ಮನೆಯಿಂದ ಠಾಣೆಗೆ ಹೋಗಬೇಕು. ಅಷ್ಟರಲ್ಲಿ ವಂಚಕರು ಮತ್ತೆ ಕೈ ಚಳಕ ತೋರಿಸಿ ಹಣ ಎಗರಿಸುವ ಅವಕಾಶವಿರುತ್ತದೆ. ಈ ರೀತಿಯ ಸಮಸ್ಯೆಗಳ ನಿವಾರಣೆಗಾಗಿಯೇ ಸೈಬರ್‌ ಕ್ರೈಂ ನಿಯಂತ್ರಣ ಕೊಠಡಿ ಸ್ಥಾಪನೆಗೆ ತೀರ್ಮಾನಿಸಲಾಗಿದೆ ಎಂದು ಆಯುಕ್ತ ಕಮಲ್‌ ಪಂತ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ತಮ್ಮ ಖಾತೆಯಲ್ಲಿ ಅಪರಿಚಿತ ವ್ಯಕ್ತಿ ಹಣ ಡ್ರಾ ಮಾಡಿದ ಕೂಡಲೇ ಪೊಲೀಸರಿಗೆ ಎಸ್‌ಎಂಎಸ್‌ ಅಥವಾ ವಾಟ್ಸಾಪ್‌ ಮೂಲಕ ಗ್ರಾಹಕರು ದೂರ ನೀಡಬಹುದು. ಕೂಡಲೇ ಈ ದೂರಿಗೆ ಸ್ಪಂದಿಸುವ ನಿಯಂತ್ರಣ ಕೊಠಡಿಯ ಸಿಬ್ಬಂದಿ, ಸಂಬಂಧಿಸಿದ ಬ್ಯಾಂಕಿನವರ ಗಮನಕ್ಕೆ ತಂದು ಆ ಗ್ರಾಹಕರನ ಖಾತೆಯಲ್ಲಿ ಹಣ ವರ್ಗಾವಣೆ ಸ್ಥಗಿತಗೊಳಿಸುತ್ತಾರೆ. ಆನಂತರ ಗ್ರಾಹಕನಿಂದ ಲಿಖಿತ ದೂರು ಪಡೆದು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ. ನಾವು ಮೊದಲು ಗ್ರಾಹಕರ ಹಣದ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದೇವೆ. ಇದಕ್ಕಾಗಿ ಖಾಸಗಿ ಕಂಪನಿಯ ಸಹಕಾರದಲ್ಲಿ ಪ್ರತ್ಯೇಕ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಯೋಜನೆಗೆ ಬ್ಯಾಂಕ್‌ನವರ ಸಹಕಾರ ಮುಖ್ಯವಾಗಿದೆ. ಈ ಸಂಬಂಧ ನಮ್ಮ ಪ್ರಾಸ್ತಾವನೆಗೆ ಆರ್‌ಐಬಿ ತುಂಬಾ ಸಂತೋಷದಿಂದ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಪೊಲೀಸರು ಮತ್ತು ಬ್ಯಾಂಕಿಂಗ್‌ ವಲಯ ಸಮನ್ವಯತೆಯಿಂದ ಸೈಬರ್‌ ವಂಚನೆಗೆ ಕೆಲಸ ಆರಂಭಿಸಲಿವೆ ಎಂದು ಹೇಳಿದರು.

ಜನರಿಗೆ ಕಂಟ್ರೋಲ್‌ ರೂಂ ಸಂಖ್ಯೆ

ಸೈಬರ್‌ ಕಂಟ್ರೋಲ್‌ ರೂಂನ ಮೊಬೈಲ್‌ ಹಾಗೂ ದೂರವಾಣಿ ಸಂಖ್ಯೆಗಳನ್ನು ಜನರಿಗೆ ನೀಡಲಾಗುತ್ತದೆ. ಈ ವಿಭಾಗದಲ್ಲಿ ಸೈಬರ್‌ ಕೃತ್ಯಗಳಿಗೆ ಮಾತ್ರವಷ್ಟೇ ದೂರು ಸ್ವೀಕರಿಸಲಾಗುತ್ತದೆ. ಇಲ್ಲಿಗೆ ಬರುವ ಎಸ್‌ಎಂಎಸ್‌ ಅಥವಾ ವಾಟ್ಸಾಪ್‌ ಮಾಹಿತಿ ಆಧರಿಸಿ ಸಿಬ್ಬಂದಿ, ಬ್ಯಾಂಕ್‌ಗಳಿಗೆ ಇಮೇಲ್‌ ಕಳುಹಿಸಿ ವಿವರ ಸಲ್ಲಿಸಲಿದ್ದಾರೆ. ಇದೆಲ್ಲ ಕೇವಲ ಐದಾರು ನಿಮಿಷದಲ್ಲಿ ಪ್ರಕ್ರಿಯೆ ನಡೆಯುವಂತಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಸೈಬರ್‌ ವಂಚಕರಿಂದ ನಾಗರಿಕರ ಹಣದ ಸುರಕ್ಷತೆ ಸಲುವಾಗಿ ಸೈಬರ್‌ ನಿಯಂತ್ರಣ ಕೊಠಡಿ ಸ್ಥಾಪನೆ ನಿರ್ಧರಿಸಲಾಗಿದೆ. ಇದಕ್ಕಾಗಿ ಸಾಫ್ಟ್‌ವೇರ್‌ ಹಾಗೂ ಆ್ಯಪ್‌ಗಳು ರೂಪಿಸಲಾಗುತ್ತಿದ್ದು, ಆದಷ್ಟು ಬೇಗ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.