314 ಕೋಟಿ ವೆಚ್ಚದಲ್ಲಿ ನಿರ್ಮಾಣ| ಏರ್‌ಪೋರ್ಟ್ ಮಾದರಿಯಲ್ಲಿ ಹೋಲಿಕೆ| 4200 ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣ| ಈ ಟರ್ಮಿನಲ್‌ನಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆ| ಪ್ರತಿದಿನ 50 ರೈಲುಗಳು ಸಂಚರಿಸಲು ವ್ಯವಸ್ಥೆ|
ಬೆಂಗಳೂರು(ಮಾ.14): ನಗರದ ಬೈಯಪ್ಪನಹಳ್ಳಿಯಲ್ಲಿ ಸುಮಾರು 314 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ದೇಶದ ಮೊದಲ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್ ಉದ್ಘಾಟನೆಗೆ ಸಿದ್ಧಗೊಂಡಿದ್ದು ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ನೈಋುತ್ಯ ರೈಲ್ವೆ ನಿರ್ಮಿಸಿರುವ ಈ ನೂತನ ಟರ್ಮಿನಲ್‌ಗೆ ಇತ್ತೀಚೆಗೆ ರಾಷ್ಟ್ರದ ನಿರ್ಮಾಣಕ್ಕೆ ಮಹತ್ತರ ಕೊಡಗೆ ನೀಡಿರುವ ಸಿವಿಲ್ ಎಂಜಿನಿಯರ್ ‘ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್’ ಎಂದು ನಾಮಕರಣ ಮಾಡಲಾಗಿದ್ದು, ಹೊರನೋಟಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೋಲುವಂತೆ ಈ ಟರ್ಮಿನಲ್ ನಿರ್ಮಿಸಲಾಗಿದೆ.
ವಿಶಾಲವಾದ ಫ್ಲಾಟ್ ಫಾರ್ಮ್‌ಗಳು, ವಿಶ್ರಾಂತಿ ಕೊಠಡಿ, ಶೌಚಾಲಯ, ಬಸ್‌ಬೇ, ವಾಹನ ನಿಲುಗಡೆ ಸ್ಥಳ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಇಲ್ಲಿನ ಸೌಲಭ್ಯಗಳು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವ ನೀಡಲಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ತಿಂಗಳಾಂತ್ಯಕ್ಕೆ ಲೋಕಾರ್ಪಣೆ?
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್) ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದ ಬಳಿಕ ನಗರದ ಮೂರನೇ ಕೋಚಿಂಗ್ ಟರ್ಮಿನಲ್ ಇದಾಗಿದೆ. ಈ ನೂತನ ಟರ್ಮಿನಲ್ ಕಾರ್ಯಾಚರಣೆಯಿಂದ ಈ ಪ್ರಮುಖ ಎರಡು ರೈಲು ನಿಲ್ದಾಣದಲ್ಲಿ ರೈಲುಗಳು ಹಾಗೂ ಪ್ರಯಾಣಿಕರ ದಟ್ಟಣೆ ಕೊಂಚ ತಗ್ಗಲಿದೆ. ನೈಋುತ್ಯ ರೈಲ್ವೆಯು ಈಗಾಗಲೇ ಈ ಟರ್ಮಿನಲ್‌ನಿಂದ ದೂರ ಪ್ರಯಾಣದ ರೈಲುಗಳನ್ನು ಕಾರ್ಯಾಚರಣೆ ಮಾಡಲು ಯೋಜನೆ ರೂಪಿಸಿದೆ.
ಈ ನೂತನ ಟರ್ಮಿನಲನ್ನು ಒಟ್ಟು 4200 ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದು, ಪ್ರತಿ ದಿನ 50 ಸಾವಿರ ಪ್ರಯಾಣಿಕರು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು ಏಳು ಪ್ಲಾಟ್ ಫಾರ್ಮ್‌ಗಳು, ಏಳು ಸ್ಟಾಬ್ಲಿಂಗ್ ಲೈನ್‌ಗಳು ಹಾಗೂ ಮೂರು ಪಿಟ್‌ಲೈನ್‌ಗಳಿವೆ. ಪ್ರತಿ ಪ್ಲಾಟ್ ಫಾರ್ಮ್‌ಗಳು 15 ಮೀಟರ್ ಅಗಲ ಮತ್ತು 600 ಮೀಟರ್ ಉದ್ಧ ಇವೆ. ಇಡೀ ಟರ್ಮಿನಲ್ ಹಾಗೂ ಪ್ಲಾಟ್ ಫಾರ್ಮ್‌ಗಳಲ್ಲಿ ಎಲ್‌ಇಡಿ ಲೈಟ್ಸ್ ಅಳವಡಿಸಲಾಗಿದೆ. ವಿಐಪಿ ಲಾಂಜ್, ಫುಡ್ ಕೋರ್ಟ್, ಎಸ್ಕಲೇಟರ್, ಲಿಫ್ಟ್, ವ್ಯವಸ್ಥೆಯೂ ಇದೆ. ಅಂತೆಯೆ ಎಲ್ಲ ಪ್ಲಾಟ್ ಫಾರ್ಮ್‌ಗಳನ್ನು ಸಂಪರ್ಕಿಸಲು ಅನುವಾಗುವಂತೆ ಎರಡು ಸಬ್‌ವೇ ನಿರ್ಮಿಸಲಾಗಿದೆ. ಪ್ರತಿದಿನ 50 ರೈಲುಗಳು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.
ಅಲ್ಲದೆ, ಈ ಟರ್ಮಿನಲ್‌ನಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ನಾಲ್ಕು ಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನೂ ನಿರ್ಮಿಸಲಾಗಿದೆ. ಅಲ್ಲದೆ, 250ಕ್ಕೂ ಅಧಿಕ ಕಾರು ಹಾಗೂ ಸುಮಾರು ಒಂದು ಸಾವಿರ ದ್ವಿಚಕ್ರ ವಾಹನ ನಿಲುಗಡೆ ಮಾಡುವಷ್ಟು ಪಾರ್ಕಿಂಗ್ ಸ್ಥಳವೂ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರಣಾಂತರಗಳಿಂದ ಉದ್ಘಾಟನೆ ವಿಳಂಬ
2021ರ ಫೆಬ್ರವರಿ ಅಂತ್ಯದ ವೇಳೆಗೆ ಈ ಟರ್ಮಿನಲ್ ಉದ್ಘಾಟನೆ ಮಾಡಬೇಕು ಎಂದು ಯೋಜಿಸಲಾಗಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದ ಉದ್ಘಾಟನೆ ವಿಳಂಬವಾಗಿದೆ. ಶೀಘ್ರದಲ್ಲಿ ದಿನಾಂಕ ನಿಗದಿ ಮಾಡಿ ಲೋಕಾರ್ಪಣೆ ಮಾಡುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ದೇಶದ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ ಶೀಘ್ರದಲ್ಲಿ ಕಾರ್ಯಾರಂಭವಾಗಲಿದೆ. ದೇಶದ ಪ್ರತಿಷ್ಠಿತ ಸಿವಿಲ್ ಎಂಜಿನಿಯರ್ ಹಾಗೂ ಭಾರತ ರತ್ನ ಎಸ್.ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿರುವ ರೈಲು ನಿಲ್ದಾಣ ಲೋಕಾರ್ಪಣೆಗೆ ಸಿದ್ದವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
