ಬೆಂಗಳೂರು(ಫೆ.20): ನೈಋುತ್ಯ ರೈಲ್ವೆ ನಗರದ ಬೈಯಪ್ಪನಹಳ್ಳಿಯಲ್ಲಿ ಸುಮಾರು 314 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಿರುವ ರೈಲ್ವೆ ಟರ್ಮಿನಲ್‌ ಉದ್ಘಾಟನೆಗೆ ಸಿದ್ಧಗೊಂಡಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ.

ಇತ್ತೀಚೆಗಷ್ಟೇ ಈ ನೂತನ ಟರ್ಮಿನಲ್‌ಗೆ ‘ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌’ ಎಂದು ನಾಮಕರಣ ಮಾಡಲಾಗಿದೆ. ಹೊರನೋಟಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೋಲುವ ಈ ಟರ್ಮಿನಲ್‌ ಹವಾನಿಯಂತ್ರಿತ ವ್ಯವಸ್ಥೆ, ಫ್ಲಾಟ್‌ ಫಾರ್ಮ್‌ಗಳು, ವಿಶ್ರಾಂತಿ ಕೊಠಡಿ, ಶೌಚಾಲಯ, ಬಸ್‌ ಬೇ, ವಿಶಾಲವಾದ ವಾಹನ ನಿಲುಗಡೆ ಸ್ಥಳ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಇಲ್ಲಿನ ಸೌಲಭ್ಯಗಳು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವ ನೀಡಲಿದೆ.

ಕ್ರಾಂತಿವೀರಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್‌) ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದ ಬಳಿಕ ನಗರದ ಮೂರನೇ ಕೋಚಿಂಗ್‌ ಟರ್ಮಿನಲ್‌ ಇದಾಗಿದೆ. ಈ ನೂತನ ಟರ್ಮಿನಲ್‌ ಕಾರ್ಯಾಚರಣೆಯಿಂದ ಈ ಪ್ರಮುಖ ಎರಡು ರೈಲು ನಿಲ್ದಾಣದಲ್ಲಿ ರೈಲುಗಳು ಹಾಗೂ ಪ್ರಯಾಣಿಕರ ದಟ್ಟಣೆ ಕೊಂಚ ತಗ್ಗಲಿದೆ. ನೈಋುತ್ಯ ರೈಲ್ವೆಯು ಈಗಾಗಲೇ ಈ ಟರ್ಮಿನಲ್‌ನಿಂದ ದೂರಪ್ರಯಾಣದ ರೈಲುಗಳನ್ನು ಕಾರ್ಯಾಚರಣೆ ಮಾಡಲು ಯೋಜನೆ ರೂಪಿಸಿದೆ.

 ಬೆಂಗ್ಳೂರು ಸಬ್‌ ಅರ್ಬನ್‌ ರೈಲಿಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ

ನೂತನ ಟರ್ಮಿನಲ್‌ನಲ್ಲಿ ಏಳು ಪ್ಲಾಟ್‌ಫಾರ್ಮ್‌ಗಳು, ಏಳು ಸ್ಟಾಬ್ಲಿಂಗ್‌ ಲೈನ್‌ಗಳು ಹಾಗೂ ಮೂರು ಪಿಟ್‌ಲೈನ್‌ಗಳು ಇವೆ. ಪ್ರತಿ ಪ್ಲಾಟ್‌ಫಾರ್ಮ್‌ಗಳು 15 ಮೀಟರ್‌ ಅಗಲ ಮತ್ತು 600 ಮೀಟರ್‌ ಉದ್ದ ಇವೆ. ಇಡೀ ಟರ್ಮಿನಲ್‌ ಹಾಗೂ ಪ್ಲಾಟ್‌ಫಾಮ್‌ರ್‍ಗಳಲ್ಲಿ ಎಲ್‌ಇಡಿ ಲೈಟ್ಸ್‌ ಅಳವಡಿಸಲಾಗಿದೆ. ಅಂತೆಯೆ ಎಲ್ಲ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸಲು ಅನುವಾಗುವಂತೆ ಎರಡು ಸಬ್‌ವೇ ನಿರ್ಮಿಸಲಾಗಿದೆ. ಅಂತೆಯೆ ಈ ಟರ್ಮಿನಲ್‌ನಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ಅಂತೆಯೆ ನಾಲ್ಕು ಲಕ್ಷ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನೂ ಒಳಗೊಂಡಿದೆ. ಅಂತೆಯೆ 200ಕ್ಕೂ ಅಧಿಕ ಕಾರು ಹಾಗೂ ಸುಮಾರು ಒಂದು ಸಾವಿರ ದ್ವಿಚಕ್ರ ವಾಹನ ನಿಲುಗಡೆ ಮಾಡುವಷ್ಟು ಪಾರ್ಕಿಂಗ್‌ ಸ್ಥಳವೂ ಇದೆ.

ಕೇಂದ್ರ ರೈಲ್ವೆ ಸಚಿವರ ಟ್ವಿಟ್‌

ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರು ಅತ್ಯಾಧುನಿಕ ಸೌಲಭ್ಯಗಳು ಹಾಗೂ ಕಲಾತ್ಮಕತೆಯಿಂದ ಕೂಡಿರುವ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.